ಮೈಸೂರಿನ ಕಾಫಿ ಡೇ ಕೇಂದ್ರಗಳಲ್ಲಿ ನೀರವ ಮೌನ
ಮೈಸೂರು

ಮೈಸೂರಿನ ಕಾಫಿ ಡೇ ಕೇಂದ್ರಗಳಲ್ಲಿ ನೀರವ ಮೌನ

July 31, 2019

ಮೈಸೂರು,ಜು.30(ಆರ್‍ಕೆ)-ಕೆಫೆ ಕಾಫಿ ಡೇ ಸಂಸ್ಥಾಪಕರಾದ ಪ್ರತಿಷ್ಠಿತ ಉದ್ಯಮಿ ವಿ.ಜಿ.ಸಿದ್ದಾರ್ಥ ಅವರು ಮಂಗಳೂರು ಬಳಿ ನೇತ್ರಾವತಿ ನದಿ ಬಳಿ ನಿಗೂಢ ರೀತಿ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮೈಸೂರಿನ ಕಾಫಿ ಡೇ ಕೇಂದ್ರಗಳಲ್ಲಿ ನೀರವ ಮೌನ ಆವರಿಸಿದೆ.

ಇಂದು ಬೆಳಿಗ್ಗೆ ಸಿದ್ಧಾರ್ಥ ಅವರು ಕಣ್ಮರೆಯಾಗಿದ್ದಾರೆಂಬ ವಿಷಯ ಕ್ಷಿಪ್ರ ರೀತಿ ಹರಡುತ್ತಿದ್ದಂತೆಯೇ ರಾಜ್ಯ ಹಾಗೂ ದೇಶಾದ್ಯಂತ ಇರುವ ಕಾಫಿ ಡೇ ಕೇಂದ್ರ ಗಳಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ಸಿಬ್ಬಂದಿ ಆತಂಕಕ್ಕೀಡಾಗಿದ್ದಾರೆ.

ಅಲ್ಲದೆ ಕಾಫಿ ಡೇ ಗ್ರಾಹಕರೂ ಆತಂಕ ಗೊಂಡಿದ್ದಾರೆ. ಮೈಸೂರಿನ ಡಿ.ದೇವ ರಾಜ ಅರಸು ರಸ್ತೆಯ ಜೆಎಲ್‍ಬಿ ರಸ್ತೆ ಜಂಕ್ಷನ್, ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆ ಹಾಗೂ ಗೋಕುಲಂ ಮೇನ್ ರೋಡ್‍ನಲ್ಲಿರುವ ಕಾಫಿ ಡೇ ಸೆಂಟರ್ ಗಳಲ್ಲಿ ಸಿಬ್ಬಂದಿ ತಮ್ಮ ಮಾಲೀಕರ ಕಣ್ಮರೆಯಿಂದ ತೀವ್ರ ಆಘಾತಕ್ಕೊಳಗಾಗಿದ್ದಾರೆ.

ಈಗಷ್ಟೇ ವಿಷಯ ತಿಳಿಯಿತು. ಅವರಿಗೆ ಏನಾಯಿತೆಂಬುದು ಗೊತ್ತಿಲ್ಲ. ಒಟ್ಟಿನಲ್ಲಿ ನಮಗೆ ಕೆಲಸ ನೀಡಿ ಜೀವನಕ್ಕೆ ಆಶ್ರಯ ನೀಡಿದ ಮಾಲೀಕರು ಕಾಣುತ್ತಿಲ್ಲ ಎಂದು ತಿಳಿಯುತ್ತಿದ್ದಂತೆಯೇ ನಮಗೆ ದಿಕ್ಕು ತೋಚದಂತಾಗಿದೆ ಅವರು ಸುರಕ್ಷಿತವಾಗಿ ಬರಲೆಂದು ದೇವರಲ್ಲಿ ಪ್ರಾರ್ಥನೆ ಮಾಡು ತ್ತೇವೆ ಎಂದು ಅರಸು ರಸ್ತೆ -ಜೆಎಲ್‍ಬಿ ರಸ್ತೆ  ಜಂಕ್ಷನ್‍ನ ಕಾಫಿ ಡೇ ಸಿಬ್ಬಂದಿಯೊಬ್ಬರು `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯೆ ನೀಡಿದರು.

ವಿಚಾರ ತಿಳಿದು ತುಂಬಾ ಬೇಜಾರಾ ಯಿತು. ನಮ್ಮ ಸಹೋದ್ಯೋಗಿಗಳೆಲ್ಲರಿಗೂ ನೋವಾಗಿದೆ. ಸಿದ್ದಾರ್ಥ ಅವರು ತುಂಬಾ ಒಳ್ಳೆಯವರು. ಕಾಫಿ ಡೇ ಉದ್ಯಮ ಶುರು ಮಾಡಿದಂದಿನಿಂದ ಎಲ್ಲಾ ಕೇಂದ್ರಗಳಲ್ಲೂ ಒಂದೇ ಬಗೆಯ ಹಾಗೂ ಗುಣಮಟ್ಟದಲ್ಲಿ ಕಿಂಚಿತ್ತೂ ವ್ಯತ್ಯಾಸವಾಗದಂತೆ ನಿಭಾಯಿ ಸುತ್ತಿದ್ದಾರೆ. ಅದರಿಂದಾಗಿ ನಮ್ಮದೇ ಆದ ಖಾಯಂ ಗ್ರಾಹಕರನ್ನು ಉಳಿಸಿಕೊಳ್ಳುವ ಜತೆಗೆ ಹೊಸಬರನ್ನು ಆಕರ್ಷಿಸಲು ಸಾಧ್ಯ ವಾಗುತ್ತಿದೆ ಎಂದು ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯ ಕಾಫಿ ಡೇ ಸಿಬ್ಬಂದಿ ನುಡಿದರು.

ನಾವು 22 ಮಂದಿ ಕಳೆದ 10 ವರ್ಷ ಗಳಿಂದ ಕೆಲಸ ಮಾಡುತ್ತಿದ್ದೇವೆ. ಮಾಲೀ ಕರೂ ಸಹ ನಮ್ಮನ್ನು ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಸಿದ್ದಾರ್ಥ ಅವರು ಸಾವಿರಾರು ಮಂದಿಗೆ ಕೆಲಸ ಕೊಟ್ಟು ಅನ್ನದಾತ ರಾಗಿದ್ದಾರೆ. ಅವರ ತಂದೆ ಅನಾರೋಗ್ಯ ದಿಂದ ಆಸ್ಪತ್ರೆ ಸೇರಿದ್ದಾರೆ. ಇಂತಹ ಸ್ಥಿತಿ ಯಲ್ಲಿ ಸಿದ್ದಾರ್ಥ ಅವರು ನಾಪತ್ತೆಯಾಗಿ ರುವುದು ನಮ್ಮೆಲ್ಲರಿಗೂ ಆಘಾತವಾದಂತಾ ಗಿದೆ ಎಂದು ಅವರು ತಿಳಿಸಿದರು.

ಮಂಗಳೂರು ನಗರದ ಎಲ್ಲಾ ಕೆಫೆ ಕಾಫಿ ಡೇ ಸೆಂಟರ್‍ಗಳಿಗೆ ಇಂದು ಮಧ್ಯಾಹ್ನ ರಜೆ ಘೋಷಿಸಲಾಗಿದೆ ಎಂದು ಖಾಸಗಿ ಸುದ್ದಿ ವಾಹಿನಿಗಳಲ್ಲಿ ಪ್ರಕಟವಾಯಿ ತಾದರೂ ಮೈಸೂರಿನ ಅರಸು ರಸ್ತೆ, ವಿಶ್ವಮಾನವ ಜೋಡಿ ರಸ್ತೆ, ಗೋಕುಲಂ ಮುಖ್ಯ ರಸ್ತೆ, ವಿದ್ಯಾವರ್ಧಕ ಇಂಜಿನಿಯ ರಿಂಗ್ ಕಾಲೇಜು ಆವರಣದಲ್ಲಿರುವ ಕಾಫಿ ಡೇ ಸೆಂಟರ್‍ಗಳು ಸಂಜೆವರೆಗೂ ಎಂದಿನಂತೆ ಕಾರ್ಯನಿರ್ವಹಿಸಿದವು.

ಮೈಸೂರಿನಲ್ಲಿ ಸಿದ್ದಾರ್ಥ ತಂದೆ ಗಂಗಯ್ಯ ಹೆಗ್ಡೆ ಅವರಿಗೆ ಚಿಕಿತ್ಸೆ!

ಭಾನುವಾರವೇ ಡಿಸ್‍ಚಾರ್ಜ್: ಖಾಸಗಿ ಆಸ್ಪತ್ರೆ ಸಿಬ್ಬಂದಿ ಮಾಹಿತಿ

ಮೈಸೂರು: ಮಂಗಳೂರು ಬಳಿ ನೇತ್ರಾವತಿ ನದಿ ಬಳಿ ನಿಗೂಢ ರೀತಿ ನಾಪತ್ತೆಯಾಗಿರುವ ಕಾಫಿ ಡೇ ಮಾಲೀಕ ಸಿದ್ದಾರ್ಥ ಅವರ ತಂದೆ ಗಂಗಯ್ಯ ಹೆಗ್ಡೆ, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯರಾದ ಸಿದ್ದಾರ್ಥ ನಿಗೂಢ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅಲ್ಲಿ ಪತ್ತೆ ಕಾರ್ಯ ನಡೆಯುತ್ತಿದ್ದರೆ, ಇತ್ತ 90 ವರ್ಷ ವಯೋಮಾನದ ಅವರ ತಂದೆ ಗಂಗಯ್ಯ ಹೆಗ್ಡೆ ಅವರು ಅನಾರೋಗ್ಯ ನಿಮಿತ್ತ ಮೈಸೂರಿನ ನಜರ್‍ಬಾದ್‍ನಲ್ಲಿರುವ ಶಾಂತವೇರಿ ಗೋಪಾಲಗೌಡ ಸ್ಮಾರಕ ಆಸ್ಪತ್ರೆಯಲ್ಲಿ ಕಳೆದ 15 ದಿನಗಳಿಂದ ಒಳ ರೋಗಿಯಾಗಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಆಸ್ಪತ್ರೆಯ ಎರಡನೇ ಮಹಡಿಯ ಸ್ಪೆಷಲ್ ವಾರ್ಡ್‍ನಲ್ಲಿ ಗಂಗಯ್ಯ ಹೆಗ್ಡೆ ಅವರು ಚಿಕಿತ್ಸೆ ಪಡೆಯುತ್ತಿದ್ದು, ಜುಲೈ 25 ರಂದು ಎಸ್.ಎಂ. ಕೃಷ್ಣ ಅವರು ಕುಟುಂಬ ಸಮೇತ ಆಸ್ಪತ್ರೆಗೆ ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸಿ ಹೋಗಿದ್ದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ತೀವ್ರ ಉಸಿರಾಟದ ತೊಂದರೆ ಇರುವುದರಿಂದ ಗಂಗಯ್ಯ ಹೆಗ್ಡೆ ಅವರಿಗೆ ವಿಶೇಷ ವಾರ್ಡ್‍ನಲ್ಲಿ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದ್ದು, ಹತ್ತಿರದ ಕುಟುಂಬ ಸದಸ್ಯರನ್ನು ಹೊರತುಪಡಿಸಿ ಬೇರೆ ಯಾರನ್ನೂ ಆ ವಾರ್ಡ್‍ಗೆ ಬಿಡದಂತೆ ಆಸ್ಪತ್ರೆ ಆಡಳಿತ ಮಂಡಳಿಯು  ಕ್ರಮ ವಹಿಸಿದೆ ಎಂದು ಹೇಳಲಾಗುತ್ತಿದೆ.

ಆದರೆ ಗಂಗಯ್ಯ ಹೆಗ್ಡೆ ಅವರು ಕಳೆದ 15 ದಿನಗಳ ಕಾಲ ಚಿಕಿತ್ಸೆ ಪಡೆದು, ಭಾನು ವಾರವಷ್ಟೇ ಡಿಸ್‍ಚಾರ್ಜ್ ಆಗಿ ಮನೆಗೆ ಹೋಗಿದ್ದಾರೆ ಎಂದು ಶಾಂತವೇರಿ ಗೋಪಾಲಗೌಡ ಆಸ್ಪತ್ರೆ ಮೂಲಗಳು ತಿಳಿಸಿವೆ. ಯಾವ ತೊಂದರೆಗಾಗಿ ಗಂಗಯ್ಯ ಹೆಗ್ಡೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಯಾವ ವಾರ್ಡ್‍ನಲ್ಲಿದ್ದರು. ಚಿಕಿತ್ಸೆ ನೀಡಿದ ವೈದ್ಯರ್ಯಾರು ಎಂಬಿತ್ಯಾದಿ ಮಾಹಿತಿ ನೀಡಲು ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿ, ವೈದ್ಯರನ್ನು ಕೇಳಬೇಕು ಎಂದಷ್ಟೇ ಉತ್ತರಿಸಿದ್ದಾರೆ. ಆ ಕುರಿತು ಮಾಹಿತಿ ಪಡೆಯಲು ಪ್ರಯತ್ನಿಸಿದರೂ ಆಸ್ಪತ್ರೆ ಮುಖ್ಯಸ್ಥೆ ಡಾ. ಸಂತೃಪ್ತ ಅವರು ದೂರವಾಣಿ ಸಂಪರ್ಕಕಕ್ಕೆ ಲಭ್ಯವಾಗಲಿಲ್ಲ. ನೇತ್ರಾವತಿ ನದಿಯಲ್ಲಿ ಸಿದ್ದಾರ್ಥ ಅವರ ಪತ್ತೆಗೆ ತೀವ್ರ ಶೋಧ ನಡೆಯುತ್ತಿದ್ದರೆ, ಇತ್ತ ಅವರ ಅವರ ತಂದೆ ಗಂಗಯ್ಯ ಹೆಗ್ಡೆ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಕುಟುಂಬದವರಲ್ಲಿ ದುಃಖ ಮಡುಗಟ್ಟಿದೆ.

 

 

Translate »