ಜನಾದೇಶ ಧಿಕ್ಕರಿಸುವ ಶಾಸಕರು ಮತ್ತೆ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗದ ಕಾನೂನು ರಚನೆಗೆ ಆಗ್ರಹ
ಮೈಸೂರು

ಜನಾದೇಶ ಧಿಕ್ಕರಿಸುವ ಶಾಸಕರು ಮತ್ತೆ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗದ ಕಾನೂನು ರಚನೆಗೆ ಆಗ್ರಹ

July 31, 2019

ಮೈಸೂರು, ಜು.30(ಪಿಎಂ)- ಜನಾದೇಶ ಧಿಕ್ಕರಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವವರು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಕಾನೂನು ರೂಪಿಸಬೇಕೆಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಾಗರಿಕ ಹಕ್ಕು ರಕ್ಷಣಾ ಸಮಿತಿ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರಿನ ಪುರಭವನ ಆವರಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಜನಾದೇಶ ಧಿಕ್ಕರಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡ ಶಾಸಕರು ಸೇರಿದಂತೆ ಇನ್ನು ಮುಂದೆ ಈ ರೀತಿ ರಾಜೀನಾಮೆ ನೀಡುವವರು ಮತ್ತೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶವಾಗದಂತೆ ಕಾನೂನು ರೂಪಿಸಬೇಕೆಂದು ಒತ್ತಾಯಿಸಿದರು.

ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾಗಿ ಮುಂಬೈನ ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿದ್ದ 14 ಅನರ್ಹ ಶಾಸಕರು ಜನಾದೇಶವನ್ನೂ ಗಾಳಿಗೆ ತೂರಿದ್ದಾರೆ. ಈ ರೀತಿ ತಮ್ಮ ಸ್ವಾರ್ಥ ಹಾಗೂ ರಾಜಕೀಯ ಲಾಭಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಹಾರುವ ಶಾಸಕರಿಗೆ ತಕ್ಕ ಪಾಠ ಕಲಿಸಬೇಕು. ಅವರು ಶಾಶ್ವತವಾಗಿ ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು.

ಆಧಾರ್ ನೋಂದಣಿ ಕೇಂದ್ರಗಳಲ್ಲಿ ಸರ್ವರ್‍ಡೌನ್ ದೋಷದಿಂದ ಆಧಾರ್‍ಗೆ ಮೊಬೈಲ್ ನಂಬರ್ ಲಿಂಕ್ ಆಗಿರದ ಹಿನ್ನೆಲೆಯಲ್ಲಿ ಇದೀಗ ಬಡವರು, ಕೂಲಿ ಕಾರ್ಮಿ ಕರು, ವೃದ್ಧರು, ಮಹಿಳೆಯರು ದಿನಗಟ್ಟಲೇ ಸಾಲುಗಟ್ಟಿ ನಿಂತು ಆಧಾರ್ ಲಿಂಕ್ ಮಾಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಈ ಸಮಸ್ಯೆ ಪರಿಹರಿಸಬೇಕು. ಮೈಸೂರಿನ ರೈಲ್ವೆ ಸೇತುವೆಗಳ ಕೆಳಗಿನ ರಸ್ತೆಗಳನ್ನು ದುರಸ್ತಿಗೊಳಿಸಬೇಕು. ಹೋಂ ಗಾರ್ಡ್‍ಗಳಿಗೆ ಕನಿಷ್ಠ ವೇತನ ನೀಡಬೇಕು ಎಂದು ಒತ್ತಾಯಿಸಿದರು.

ಸಮಿತಿ ಅಧ್ಯಕ್ಷ ಗೋವಿಂದರಾಜು, ಉಪಾಧ್ಯಕ್ಷೆ ಜಿ.ತಾರಾ, ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಪದಾಧಿಕಾರಿಗಳಾದ ರಾಮಕೃಷ್ಣ, ವಿ.ಮಣಿಯಮ್ಮ, ಸುಶೀಲಮ್ಮ, ಪಾರ್ವತಮ್ಮ, ಪುಟ್ಟ ಮಾದಯ್ಯ, ಗೋಪಾಲ್ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »