ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದ
ಮೈಸೂರು

ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದ

July 30, 2019

ಬೆಂಗಳೂರು, ಜು.29(ಕೆಎಂಶಿ)-ಮುಖ್ಯಮಂತ್ರಿ ಬಿ.ಎಸ್. ಯಡಿಯೂ ರಪ್ಪ ನೇತೃತ್ವದ ಬಿಜೆಪಿ ಸರಕಾರ ವಿಧಾನಸಭೆಯಲ್ಲಿ ಇಂದು ನಡೆದ ವಿಶ್ವಾಸಮತ ಯಾಚನೆಯಲ್ಲಿ ಗೆಲುವು ಸಾಧಿಸಿದೆ. ಅಲ್ಲದೇ ಮಹತ್ವದ ಧನವಿನಿಯೋಗ ವಿಧೇಯಕ ಮಸೂದೆ ಕೂಡ ಅಂಗೀಕಾರಗೊಂಡಿದೆ.

ಸದನ ಆರಂಭವಾಗುತ್ತಿದ್ದಂತೆಯೇ ಯಡಿಯೂರಪ್ಪ ವಿಶ್ವಾಸ ಮತ ಯಾಚಿಸಿದರು. ಇದಕ್ಕೆ ಪ್ರತಿಪಕ್ಷ ಕಾಂಗ್ರೆಸ್-ಜೆಡಿಎಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರೂ, ಮತಕ್ಕೆ ಒತ್ತಾಯ ಮಾಡಲಿಲ್ಲ. ಧ್ವನಿಮತದ ಮೂಲಕ ಯಡಿಯೂರಪ್ಪ ವಿಶ್ವಾಸಮತ ಗಳಿಸುತ್ತಿ ದ್ದಂತೆ ಮುಂದಿನ ಆರು ತಿಂಗಳು ಬಿಜೆಪಿ ಸರ್ಕಾರಕ್ಕೆ ಯಾವುದೇ ಗಂಡಾಂತರವಿಲ್ಲ. ಆಡಳಿತ ಪಕ್ಷದ ಜತೆ 106 ಮಂದಿ ಇದ್ದರೆ ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಸಾಲಿನಲ್ಲಿ 99 ಮಂದಿ ಇದ್ದರು. ಉಳಿದಂತೆ ಬಿಎಸ್‍ಪಿಯ ಮಹೇಶ್ ಹಾಗೂ ಸಭಾಧ್ಯಕ್ಷ ರಮೇಶ್ ಕುಮಾರ್ ಅವರ ಮತಗಳು ಚಲಾಯಿಸುವ ಪ್ರಮೇಯವೇ ಬರಲಿಲ್ಲ.

ಸರ್ಕಾರ ಬಹುಮತವನ್ನು ಸಾಬೀತುಪಡಿಸುತ್ತಿದ್ದಂತೆಯೇ 2.31 ಲಕ್ಷ ಕೋಟಿ ರೂಗಳ ಧನವಿನಿಯೋಗ ಮಸೂದೆಗೆ ಈ ಹಿಂದೆ ನೀಡಿದ್ದ ಲೇಖಾನುದಾನವನ್ನು ಮತ್ತೆ ಮೂರು ತಿಂಗಳವರೆಗೆ ಅಂಗೀಕಾರ ಮಾಡಲಾಯಿತು. ಧನವಿನಿಯೋಗ ಮಸೂದೆಯನ್ನು ಸದನ ಧ್ವನಿ ಮತದ ಮೂಲಕ ಅಂಗೀಕರಿಸಿತು. ಇದಕ್ಕೂ ಮುನ್ನ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿ, ಲೇಖಾನುದಾನಕ್ಕೆ ಎಂಟು ತಿಂಗಳ ಮಟ್ಟಿಗೆ ಅಂಗೀಕಾರ ಪಡೆಯಬೇಕೇ ಹೊರತು ಮೂರು ತಿಂಗಳಿಗೆ ಪಡೆಯುವುದು ಸರಿಯಲ್ಲ ಎಂದರು.

ಆದರೂ ಧನ ವಿನಿಯೋಗ ಮಸೂದೆಯನ್ನು ಮತಕ್ಕೆ ಹಾಕಿ ಅಂಗೀಕಾರ ಪಡೆಯಲಾ ಯಿತು. ಮತ್ತೆ ಪೂರಕ ಅಂದಾಜುಗಳ ಬಜೆಟ್ ಮಂಡನೆಗೆ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು. ವಿಶ್ವಾಸಮತ ಯಾಚಿಸಿ, ಮಾತನಾಡಿದ ಮುಖ್ಯಮಂತ್ರಿಯವರು ದ್ವೇಷದ ರಾಜಕಾರಣ ಮಾಡುವುದಿಲ್ಲ. ವಿರೋಧಿಗಳನ್ನು ಪ್ರೀತಿಯಿಂದ ಕಾಣುತ್ತೇನೆ ಎಂದು ವಿಧಾನಸಭೆಯಲ್ಲಿ ಭರವಸೆ ನೀಡಿದರು. ಸಿದ್ದರಾಮಯ್ಯ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಸಂದರ್ಭದಲ್ಲಿ ಅವರು ದ್ವೇಷದ ರಾಜಕಾರಣ ಮಾಡಲಿಲ್ಲ. ವಿರೋಧಿಗಳನ್ನು ಪ್ರೀತಿಯಿಂದ ಕಂಡಿದ್ದಾರೆ.

ರಾಜಕೀಯವಾಗಿ ನಾವು ಹೋರಾಟ ಮಾಡಿದ್ದೇವೆ, ಆದರೆ ಅವರು ಅದನ್ನು ವೈಯಕ್ತಿಕವಾಗಿ ತೆಗೆದುಕೊಂಡಿಲ್ಲ ಎಂದು ಅಭಿನಂದಿಸಿದರು. ಮತ್ತೊಮ್ಮೆ ನಾನು ಮುಖ್ಯಮಂತ್ರಿಯಾಗಲೇಬೇಕೆಂಬ ಹಠಕ್ಕೆ ಹಲವಾರು ಕಾರಣಗಳಿವೆ. ಈ ಸ್ಥಾನ ಪಡೆಯಲು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಬಿಜೆಪಿಯ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಜನರ ಆಶೀರ್ವಾದವೇ ಕಾರಣ.

ಕಳೆದ 14 ತಿಂಗಳಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಅದನ್ನು ಸರಿಪಡಿಸಿ, ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರುವುದು ನನ್ನ ಆದ್ಯತೆ. ಅಧಿಕಾರಕ್ಕೆ ಬಂದ ಕೂಡಲೇ ರೈತರ ಪರವಾದ ನನ್ನ ಕಾಳಜಿಯನ್ನು ತೋರಿಸಿದ್ದೇನೆ. ನೇಕಾರರ ಸಾಲವನ್ನು ಮನ್ನಾ ಮಾಡಿದ್ದೇನೆ ಎಂದ ಅವರು, ಎಲ್ಲರೂ ಸೇರಿ ರಾಜ್ಯದ ಹಿತಕ್ಕೆ ಪೂರಕವಾಗಿ ಸರ್ಕಾರ ನಡೆಸೋಣ ಎಂದರಲ್ಲದೆ ವಿಶ್ವಾಸಮತಕ್ಕೆ ಬೆಂಬಲ ನೀಡುವಂತೆ ಸದನವನ್ನು ಕೋರಿದರು. ರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿದೆ. 87 ತಾಲೂಕುಗಳು ಸಂಕಷ್ಟಕ್ಕೆ ಸಿಲುಕಿವೆ. ಇದನ್ನು ಅರ್ಥ ಮಾಡಿಕೊಂಡು ನಾನು ಕಾರ್ಯನಿರ್ವಹಿಸುತ್ತೇನೆ. ಮತದಾರರಿಗೆ ನಾನು ಎಂದೂ ಮೋಸ ಮಾಡುವುದಿಲ್ಲ. ಅವರ ಸೇವೆ ಮಾಡುವುದೇ ನನ್ನ ಕೆಲಸ. ಇದಕ್ಕೆ ಪ್ರತಿಪಕ್ಷ ಸಹಕಾರ ಕೋರುತ್ತೇನೆ. ವಿಶ್ವಾಸಮತಕ್ಕೆ ಸರ್ವಾನುಮತದ ಬೆಂಬಲ ನೀಡಬೇಕೆಂದು ಮನವಿ ಮಾಡಿಕೊಂಡರು. ಇದಾದ ನಂತರ ಮಾತನಾಡಿದ ಸಿದ್ದರಾಮಯ್ಯ, ಇದುವರೆಗೂ ಅಸ್ತಿತ್ವದಲ್ಲಿದ್ದ ಸಮ್ಮಿಶ್ರ ಸರ್ಕಾರ ಅತ್ಯುತ್ತಮವಾಗಿ ಕೆಲಸ ಮಾಡುತ್ತಿತ್ತು. ಹೀಗಾಗಿ ಅದು ಅಧಿಕಾರದಲ್ಲಿನ ಲೋಪದಿಂದ ಪದಚ್ಯುತಗೊಳ್ಳಲಿಲ್ಲ ಎಂದು ಹೇಳಿದರು. ಆ ಸರ್ಕಾರವನ್ನು ನೀವು ಬೀಳಿಸಿದ್ದೀರಿ. ಅದಕ್ಕಾಗಿ ಯಾವ ಮಾರ್ಗವನ್ನು ಹಿಡಿದಿರಿ ಎಂದು ನಾನು ಇವತ್ತು ಹೇಳಲು ಹೋಗುವುದಿಲ್ಲ.ಬದಲಿಗೆ ಮುಖ್ಯಮಂತ್ರಿಯಾಗಿರುವ ನಿಮಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ಕೆ.ಜಿ. ಬೋಪಯ್ಯ ನೂತನ ಸ್ಪೀಕರ್ ಖಚಿತ
ಬೆಂಗಳೂರು, ಜು.29-ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರನ್ನು ನೂತನ ವಿಧಾನ ಸಭಾಧ್ಯಕ್ಷರ ಸ್ಥಾನಕ್ಕೆ ಬಿಜೆಪಿ ಮುಖಂಡರು ಆಯ್ಕೆ ಮಾಡಿದ್ದು, ಅವರು ನಾಳೆ (ಜು.30) ವಿಧಾನಸಭೆ ಕಾರ್ಯ ದರ್ಶಿಗಳಿಗೆ ನಾಮಪತ್ರ ಸಲ್ಲಿಸಲಿದ್ದಾರೆ. ಸ್ಪೀಕರ್ ಆಗಿದ್ದ ರಮೇಶ್‍ಕುಮಾರ್ ಅವರು ಇಂದು ರಾಜೀ ನಾಮೆ ನೀಡಿದ ಹಿನ್ನೆಲೆಯಲ್ಲಿ ಅವರಿಂದ ತೆರವಾದ ಸ್ಥಾನಕ್ಕೆ ಜು. 31ಕ್ಕೆ ಚುನಾವಣೆ ನಿಗದಿಪಡಿಸಿ ರಾಜ್ಯಪಾಲ ವಜುಭಾಯ್ ವಾಲಾ ಆದೇಶ ಹೊರಡಿಸಿದ್ದಾರೆ. ವಿಧಾನಸಭಾಧ್ಯಕ್ಷರ ಸ್ಥಾನಕ್ಕೆ ಬುಧವಾರ ಬೆಳಿಗ್ಗೆ 11 ಗಂಟೆಗೆ ಚುನಾವಣೆ ನಡೆಯಲಿದ್ದು, ನಾಳೆ (ಮಂಗಳವಾರ) ಮಧ್ಯಾಹ್ನ 12 ಗಂಟೆವರೆಗೆ ವಿಧಾನ ಸಭೆ ಕಾರ್ಯದರ್ಶಿಗಳಿಗೆ ನಾಮಪತ್ರ ಸಲ್ಲಿಸಬಹುದು ಎಂದು ಉಪಸಭಾಧ್ಯಕ್ಷ ಕೃಷ್ಣಾ ರೆಡ್ಡಿ ಘೋಷಿಸಿದ್ದಾರೆ. ಈ ಸಂಬಂಧ ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ಬೋಪಯ್ಯ, ಪಕ್ಷದ ಸೂಚನೆ ಮೇರೆಗೆ ತಾವು ವಿಧಾನಸಭಾಧ್ಯಕ್ಷರ ಸ್ಥಾನಕ್ಕೆ ನಾಳೆ ನಾಮಪತ್ರ ಸಲ್ಲಿಸಲಿರುವುದಾಗಿ ತಿಳಿಸಿದರು.

Translate »