ಸ್ಪೀಕರ್ ಸ್ಥಾನಕ್ಕೆ ರಮೇಶ್‍ಕುಮಾರ್ ಅಂತೂ ರಾಜೀನಾಮೆ ಸಲ್ಲಿಕೆ
ಮೈಸೂರು

ಸ್ಪೀಕರ್ ಸ್ಥಾನಕ್ಕೆ ರಮೇಶ್‍ಕುಮಾರ್ ಅಂತೂ ರಾಜೀನಾಮೆ ಸಲ್ಲಿಕೆ

July 30, 2019

ಬೆಂಗಳೂರು:  ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನ ಗೊಳ್ಳುವ ಸಂದರ್ಭದಲ್ಲಿ ಅತ್ಯಂತ ಕ್ಲಿಷ್ಟ ಪರಿಸ್ಥಿತಿಯನ್ನು ಎದುರಿಸಿದ ಸಭಾಧ್ಯಕ್ಷ ರಮೇಶ್ ಕುಮಾರ್ ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವ ಹಿಸಿದ ಬಗ್ಗೆ ತೃಪ್ತಿ ವ್ಯಕ್ತಪಡಿಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಮೇಶ್‍ಕುಮಾರ್ ಅವರ ಈ ರಾಜೀನಾಮೆ ಯಡಿಯೂರಪ್ಪ ನೇತೃತ್ವದ ಸರ್ಕಾರದಿಂದ ಹೊಸ ಅಧ್ಯಕ್ಷರ ಆಯ್ಕೆಗೆ ಅವಕಾಶ ದೊರೆ ತಿದೆ. ಯಡಿಯೂರಪ್ಪ ಇಂದು ವಿಧಾನಸಭೆಯಲ್ಲಿ ತಮ್ಮ ಸರ್ಕಾರಕ್ಕಿರುವ ಬಹುಮತ ವನ್ನು ಸಾಬೀತುಪಡಿಸಿದ ನಂತರ ಧನವಿನಿಯೋಗ ಮಸೂದೆ ಮತ್ತು ಪೂರಕ ಅಂದಾಜುಗಳ ಪಟ್ಟಿಗೆ ಅಂಗೀಕಾರ ಪಡೆದ ನಂತರ ರಮೇಶ್ ಕುಮಾರ್ ತಮ್ಮ ರಾಜೀನಾಮೆ ನಿರ್ಧಾರ ಪ್ರಕಟಿಸಿದರು. ನಾನೊಬ್ಬ ಸಾಮಾನ್ಯ ಕುಟುಂಬದಿಂದ ಬಂದ ವ್ಯಕ್ತಿ.ಲಾಠಿ ಚಾರ್ಜ್ ಪ್ರಕರಣ ವೊಂದಕ್ಕೆ ಸಂಬಂಧಿಸಿದಂತೆ ಅಂದಿನ ಮುಖ್ಯಮಂತ್ರಿ ದೇವರಾಜ ಅರಸರನ್ನು ನೋಡುವ ಅವಕಾಶ ಸಿಕ್ಕಿತು.ಅವತ್ತು ಅವರ ಪ್ರಭಾವಕ್ಕೆ ಸಿಕ್ಕವನು ಬಿಡಿಸಿಕೊಳ್ಳ ಲಾಗಲಿಲ್ಲ ಎಂದವರು ಹೇಳಿದರು. ಯಡಿಯೂರಪ್ಪನವರೇ ನೀವು ಮುಖ್ಯಮಂತ್ರಿಯಾದ ಕೂಡಲೇ ಬಲಾಢ್ಯರು ನಿಮ್ಮ ಅಕ್ಕ ಪಕ್ಕ ಸೇರಿಕೊಂಡು ಬಿಡುತ್ತಾರೆ. ಅವರೇನೂ ನಿಮ್ಮ ಅಭಿಮಾನಿಗಳಲ್ಲ. ಬದಲಿಗೆ ಮುಖ್ಯಮಂತ್ರಿ ಹುದ್ದೆಯ ಅಭಿಮಾನಿಗಳು.ಯಾರೇ ಅಧಿಕಾರ ವಹಿಸಿಕೊಂಡರೂ ಅವರ ನಿಷ್ಠೆ ಆ ಹುದ್ದೆಯ ಮೇಲಿರುತ್ತದೆ. ಆದರೆ ಅಂಥವರನ್ನು ನಿಮ್ಮ ಅಕ್ಕ ಪಕ್ಕ ಸೇರಿಸಿಕೊಂಡರೆ ಆಡಳಿತ ಹದಗೆಡುತ್ತದೆ.ಹೀಗಾಗಿ ಇಂತಹ ಬಲಾಢ್ಯರನ್ನು ಸೇರಿಸಿಕೊಳ್ಳುವುದಕ್ಕಿಂತ ಮುಖ್ಯವಾಗಿ ಬಡವರು,ದಿಕ್ಕಿಲ್ಲದವರು,ಧ್ವನಿಯಿಲ್ಲದವರ,ದುರ್ಬಲರ ಕಡೆ ನೋಡಿ ಎಂದು ಹೇಳಿದರು.

ಸಭಾಧ್ಯಕ್ಷ ಹುದ್ದೆಗೆ ಬಂದು ಕುಳಿತು  ಹದಿನಾಲ್ಕು ತಿಂಗಳು, ನಾಲ್ಕು ದಿನಗಳಾದವು. ಈ ಅವಧಿಯಲ್ಲಿ ನಾನು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದೇನೆ ಎಂದು ಅವರು ಸಮಾಧಾನಪಟ್ಟುಕೊಂಡರು. ಈ ಜಾಗದಲ್ಲಿ ಕುಳಿತು ನಾನು ಕೈಗೊಂಡ ನಿರ್ಣಯಗಳು  ಹಲವು ಬಾರಿ ಇಲ್ಲಿರುವವರಿಗೆ ಕಟುವಾಗಿ ಕಂಡಿರಬಹುದು. ಆದರೂ ಅದನ್ನು ನಾನು ನಾಡಿನ ಹಿತದೃಷ್ಟಿಯಿಂದಾಗಿ ತೆಗೆದುಕೊಂಡಿದ್ದೇನೆ.ಹೀಗಾಗಿ ನನ್ನ ಕರ್ತವ್ಯ ನಿರ್ವಹಣೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದರು.

ಹದಿನೇಳು ಮಂದಿ ಶಾಸಕರನ್ನು ನಾನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸಿದ್ದೇನೆ. ಇದನ್ನು ಐತಿಹಾಸಿಕ ನಿರ್ಧಾರ ಎಂದು ಹಲವರು ಬಣ್ಣಿಸಿದ್ದಾರೆ. ಹಲವರು ಟೀಕಿಸಿದ್ದಾರೆ. ನಾನು ಹೊಗಳಿಕೆಯಿಂದ ಉಬ್ಬುವುದಿಲ್ಲ. ತೆಗಳಿಕೆಯಿಂದ ಕುಗ್ಗುವುದಿಲ್ಲ ಎಂದು ಹೇಳಿದರು. ನನ್ನ ನಿರ್ಧಾರಗಳ ಬಗ್ಗೆ ಏನೇ ವ್ಯಾಖ್ಯಾನ ಮಾಡಲು ನಿಮಗೆ ಹಕ್ಕಿದೆ.ಆದರೆ ನಾನು ನನ್ನ ಆತ್ಮಸಾಕ್ಷಿಗನುಗುಣವಾಗಿ ತೀರ್ಮಾನ ಕೈಗೊಂಡಿದ್ದೇನೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ನನಗೆ ಈ ಹುದ್ದೆಗೆ ಬರಬೇಕು ಎಂಬ ಕನಸಿರಲಿಲ್ಲ. ಆದರೆ ಕೆ.ಸಿ.ವೇಣುಗೋಪಾಲ್ ಅವರು ಒಮ್ಮೆ ನನಗೆ ದೂರವಾಣಿ ಕರೆ ಮಾಡಿ, ಸಭಾಧ್ಯಕ್ಷ ಹುದ್ದೆಗೆ ಬರಲು ಆರೇಳು ಮಂದಿ ಬಯಸಿದ್ದಾರೆ. ಆದರೆ ಉಭಯ ಪಕ್ಷಗಳ ನಾಯಕರು ನಿಮ್ಮನ್ನು ಈ ಜಾಗದಲ್ಲಿ ನೋಡಲು ಅಪೇಕ್ಷಿಸುತ್ತಿದ್ದಾರೆ ಎಂದು ನುಡಿದರು. ಅಧ್ಯಕ್ಷನಾದ ನಂತರ ನನಗೆಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಣೆ ಮಾಡಿದ್ದೇನೆ ಎಂದ ಅವರು, ಒಂದು ಹಂತದಲ್ಲಿ ಮಾಧ್ಯಮದವರಿಗೂ ಕಿವಿಮಾತು ಹೇಳಿದರು. ನೀವು ಸುದ್ದಿಗೆ ರೋಚಕತೆ ನೀಡುವ ಸಲುವಾಗಿ ಯಾರನ್ನೂ ನೋಯಿಸಬೇಡಿ. ಆ ಮೂಲಕ ಅವರಿಗೆ,ಅವರ ಕುಟುಂಬ ವರ್ಗದವರಿಗೆ, ಸ್ನೇಹಿತ ವರ್ಗದವರಿಗೆ ನೋವುಂಟು ಮಾಡಬೇಡಿ.ಈ ವಿಷಯದಲ್ಲಿ ನೀವು ಹೆಚ್ಚು ಎಚ್ಚರದಿಂದ ನಡೆದುಕೊಂಡರೆ ಒಳ್ಳೆಯದು ಎಂದು ಅವರು ಹೇಳಿದರು.ತದ ನಂತರ ಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ನುಡಿದ ಅವರು ಸದನದಲ್ಲೇ ಇದ್ದ ಉಪಸಭಾಧ್ಯಕ್ಷರನ್ನು ಪೀಠಕ್ಕೆ ಕರೆಸಿ, ತಮ್ಮ ರಾಜೀನಾಮೆ ಪತ್ರವನ್ನು ಅವರಿಗೆ ಸಲ್ಲಿಸಿದರು. ಆನಂತರ ಉಪಸಭಾಧ್ಯಕ್ಷ ರಿಗೆ ತಮ್ಮ ಖುರ್ಚಿಯನ್ನು ಬಿಟ್ಟುಕೊಟ್ಟು ಕಲಾಪದಿಂದ ಹೊರ ನಡೆದರು.

 

Translate »