ಆಪರೇಷನ್ ಕಮಲ ನಿಲ್ಲಿಸಿ, ನಾವಂತೂ ಅಧಿಕಾರ ಕಿತ್ತುಕೊಳ್ಳಲ್ಲ
ಮೈಸೂರು

ಆಪರೇಷನ್ ಕಮಲ ನಿಲ್ಲಿಸಿ, ನಾವಂತೂ ಅಧಿಕಾರ ಕಿತ್ತುಕೊಳ್ಳಲ್ಲ

July 30, 2019

ಬೆಂಗಳೂರು, ಜು.29(ಕೆಎಂಶಿ)- ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್-ಜೆಡಿಎಸ್ ಶಾಸಕರ ರಾಜೀ ನಾಮೆ ಕೊಡಿಸಲು ಮಾಡುತ್ತಿರುವ ಹುನ್ನಾರ ವನ್ನು ಈಗಲಾದರೂ ನಿಲ್ಲಿಸಿ. ಅಧಿಕಾರ ಸಿಕ್ಕಿದೆ, ನಡೆಸಿ ನಾವೇನು ತರಾತುರಿಯಲ್ಲಿ ನಿಮ್ಮ ಸಂಖ್ಯೆ ಯನ್ನು ನೂರಕ್ಕೆ ಮಾಡಿ, ಮತ್ತೆ ನಿಮ್ಮನ್ನು ಸ್ಥಾನಪಲ್ಲಟ ಮಾಡುವುದಿಲ್ಲ ಎಂದು ವಿಧಾನಸಭೆ ಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಯಡಿ ಯೂರಪ್ಪನವರಿಗೆ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿಯ ವರು ವಿಶ್ವಾಸಮತ ಯಾಚಿಸಿದ ನಂತರ ಮಾತನಾಡಿದ ಕುಮಾರ ಸ್ವಾಮಿ ಪ್ರಧಾನಿ ನರೇಂದ್ರ ಮೋದಿ, ಜೆ.ಪಿ. ನಡ್ಡಾ, ಅಥವಾ ದೆಹಲಿಯ ಬಿಜೆಪಿಯ ಯಾವುದೇ ಕೇಂದ್ರ ನಾಯಕರಿಂದ ನೀವು ಅಧಿಕಾರಕ್ಕೆ ಬಂದಿಲ್ಲ.

ಕುತಂತ್ರದಿಂದಲೇ ಅಧಿಕಾರ ಹಿಡಿದಿದ್ದೀರಿ ಎಂದು ಟೀಕಿಸಿದರು. ನೀವು ಇವರಿಗೆ ಧನ್ಯವಾದ ಹೇಳಬೇಕಾಗಿಲ್ಲ. ನಮ್ಮಿಂದ ಹೊರ ನಡೆದ ತೃಪ್ತಿ ಹೊಂದಿರುವ ಇಲ್ಲವೆ ಅತೃಪ್ತ ಶಾಸಕರಿಂದ ಈ ಸರ್ಕಾರ ರಚನೆಯಾಗಿದೆ. ಮೈತ್ರಿ ಸರ್ಕಾರ ಯಾವ ರೀತಿ ಜನಪರ ಕೆಲಸ ಮಾಡಿದೆ ಎನ್ನುವುದು ಈಗಾಗಲೇ ದಾಖಲಾಗಿದೆ. ಮೈತ್ರಿ ಸರ್ಕಾರದಿಂದಾಗಿ ಆಡಳಿತ ಕುಸಿದಿತ್ತು ಎಂಬುದು ಸುಳ್ಳು. ಇದು ಬಾಯಿ ಚಪಲದ ಮಾತು.

ನನ್ನ ಆಡಳಿತ ಕುಸಿತಗೊಂಡಿತ್ತು ಎನ್ನುವುದಾದರೆ ಅದಕ್ಕೆ ಎಲ್ಲಾ ಸಮರ್ಪಕ ದಾಖಲೆಗಳನ್ನು ಸದನದಲ್ಲಿ ಮಂಡಿಸಿ ಎಂದು ಮುಖ್ಯಮಂತ್ರಿಯವರಿಗೆ ಕುಮಾರಸ್ವಾಮಿ ಸವಾಲು ಹಾಕಿದರು. ನೀವು, ಮುಖ್ಯಮಂತ್ರಿ ಸ್ಥಾನಕ್ಕೆ ಬರಲು 14 ತಿಂಗಳಿನಿಂದಲೂ ಅವಿರತ ಶ್ರಮಿಸಿದ್ದೀರಿ. ತೃಪ್ತರೂ, ಅತೃಪ್ತರು ಅದು ಯಾವಾಗ ಪಿಚಾಚಿಗಳಾಗುವರು ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು. ಪ್ರತಿಪಕ್ಷದ ನಾಯಕರಾಗಿ ನೀವು ಮಾಡಿದ ಕೆಲಸ ಸರ್ಕಾರವನ್ನು ಉರುಳಿಸಲು ಸಂಚು ನಡೆಸಿದರೆ ಹೊರತು ಎಂದೂ ನಮ್ಮ ತಪ್ಪು ಒಪ್ಪುಗಳನ್ನು ಬೆಟ್ಟು ಮಾಡಿ ತೋರುವ ಕಾರ್ಯ ಮಾಡಲಿಲ್ಲ.

ಅಧಿಕಾರ ವಹಿಸಿಕೊಂಡ ತಕ್ಷಣ ಇಂತಹ ಮಾತುಗಳನ್ನಾಡುತ್ತೀರಿ. ಇದಕ್ಕೆ ಪೂರಕ ದಾಖಲೆಗಳನ್ನು ಮುಂದಿನ ದಿನಗಳಲ್ಲಿ ಒದಗಿಸಲೇಬೇಕು. 37 ಶಾಸಕ ಸ್ಥಾನಗಳನ್ನು ಹೊಂದಿರುವ ಕುಮಾರಸ್ವಾಮಿ ಅವರ ಪಾಪದ ದಿನಗಳನ್ನು ನೋಡಿದ್ದೇನೆ ಎಂದು ಹೇಳಿದ್ದೀರಿ. ಇಂದು ಈ ರಾಜ್ಯದಲ್ಲಿ ಪವಿತ್ರದಿನಗಳು ಪ್ರಾರಂಭವಾಗುತ್ತವೆ ಎಂದು ಹೇಳಿದ್ದೀರಿ. ಬಹಳ ಸಂತೋಷ. ಹಲವಾರು ರೀತಿ ಅಡಚಣೆ ಇದ್ದರೂ, ಮೈತ್ರಿ ಸರ್ಕಾರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ ಸಂತೋಷ ನನ್ನ ಆತ್ಮಸಾಕ್ಷಿಗಿದೆ.

ಬೆಳಿಗ್ಗೆ 5 ಗಂಟೆಗೆ ನೀವು ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಿ, ಈ ಹಿಂದೆ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದೀರಿ. ಅಂದು ಕೂಡಾ ನಿಮಗೆ ರಾಜ್ಯದ ಜನತೆ ಪೂರ್ಣ ಬಹುಮತ ನೀಡಿರಲಿಲ್ಲ. ಅಂದು ಆರು ಜನ ಪಕ್ಷೇತರ ಶಾಸಕರಿಂದ ನೀವು ಮುಖ್ಯಮಂತ್ರಿಯಾಗಿದ್ದೀರಿ. ಆದರೆ ನಂತರ ಅವರನ್ನು ಯಾವ ಸ್ಥಿತಿಗೆ ತಂದು ನಿಲ್ಲಿಸಿದ್ದೀರಿ. ಅವೆಲ್ಲವೂ ಇತಿಹಾಸ ಪುಟದಲ್ಲಿವೆ. ಈಗ ನಿಮ್ಮನ್ನು ಬೆಂಬಲಿಸಿರುವ ಅತೃಪ್ತ ಶಾಸಕರು ಬೀದಿಗೆ ಬಂದಾಗಿದೆ. ಮುಂದಿನ ದಿನಗಳಲ್ಲಿ ಅವರ ಸ್ಥಿತಿ ಏನು ಮಾಡುತ್ತೀರೋ ನೋಡೋಣ ಎಂದರು. ನಮ್ಮ ಅಧ್ಯಕ್ಷರು ಯಾವುದೇ ತರಾತುರಿಯಲ್ಲಿ ಶಾಸಕರನ್ನು ಅನರ್ಹಗೊಳಿಸಿಲ್ಲ. ಅವರನ್ನು ಕರೆಸಿ, ಪ್ರಶ್ನೆಗಳನ್ನು ಮಾಡಿದರೆ, ಅವರಿಂದ ಉತ್ತರ ನೀಡಲು ಸಾಧ್ಯವಾಗಿಲ್ಲ. ಅಂದು ಸಭಾಧ್ಯಕ್ಷರಾಗಿದ್ದ ಬೋಪಯ್ಯ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಬುಡಮೇಲು ಮಾಡಿದರು ಎಂದು ಟೀಕಿಸಿದರು.

Translate »