ಮೈಸೂರು,ಆ.4(ಎಂಕೆ)- ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಸಹಜ ಸಮೃದ್ಧ ಸಂಸ್ಥೆ ಹಾಗೂ ರೋಟರಿ ಕ್ಲಬ್ ಆಫ್ ಮೈಸೂರು ಪಶ್ಚಿಮ ವತಿಯಿಂದ ನಡೆದ ಎರಡು ದಿನದ ‘ಹಲಸಿನ ಹಬ್ಬ’ಕ್ಕೆ ಭಾನುವಾರ ತೆರೆ ಬಿದ್ದಿತು.
‘ಬಡವರ ಹಣ್ಣು’ ಎಂದೇ ಕರೆಯಲ್ಪ ಡುವ ಹಲಸಿನ ಹಣ್ಣಿನ ಮೇಳಕ್ಕೆ ಮುಗಿ ಬಿದ್ದ ಜನರು, ವಿವಿಧ ತಳಿಯ ಹಲಸಿನ ಹಣ್ಣುಗಳನ್ನು ಸವಿಯುವುದರ ಜತೆಗೆ ಹಲಸಿನ ಹಣ್ಣಿನಿಂದ ಮಾಡಿದ ಕಬಾಬ್, ಬೋಂಡಾ, ಹಲ್ವ, ಐಸ್‍ಕ್ರಿಂ, ಚಿಪ್ಸ್, ಚಾಕೋಲೆಟ್‍ಗಳನ್ನು ಚಪ್ಪರಿಸಿದರು.
13ಕ್ಕೂ ಹೆಚ್ಚು ಮಳಿಗೆಗಳಲ್ಲಿ ಬಗೆ ಬಗೆಯ ಹಲಸಿನ ಹಣ್ಣುಗಳನ್ನು ಹಾಗೂ ಹಣ್ಣಿನಿಂದ ತಯಾರಾದ ತಿನಿಸುಗಳನ್ನು ಖರೀದಿಸಲು ನಿರೀಕ್ಷೆಗೂ ಮೀರಿದ ಹಲಸು ಪ್ರಿಯರ ಆಗಮನದಿಂದ ನೂರಾರು ಜನ ಹಲಸಿನ ಹಣ್ಣಿನ ರುಚಿಯನ್ನು ಸವಿಯಲು ಸಾಧ್ಯವಾಗದೆ ಇನ್ನೂ ಎರಡು ದಿನ ಮೇಳವನ್ನು ವಿಸ್ತರಿಸಬೇಕಾಗಿತ್ತು ಎಂದು ಪ್ರತಿಕ್ರಿಯಿಸಿ, ನಿರಾಶೆಯಿಂದ ಹಿಂದಿರುಗಿದರು.
ಒಂದು ತೊಳೆಯಾದರೂ ಕೊಡಿ: ಕೆಂಪ ಗಿನ ತೊಳೆಯಿರುವ ಹಲಸಿನ ಹಣ್ಣನ್ನು (ಚಂದ್ರ ಹಲಸು) ಸವಿಯಲು ಮೈಸೂರಿನ ಕುವೆಂಪುನಗರದಿಂದ ಬಂದಿದ್ದ ಯುವತಿ ಬಿಂದು, ಹಣ್ಣುಸಿಗದೆ ನಿರಾಸೆಗೊಂಡರು. ನಮ್ಮ ಮನೆಯ ಲ್ಲಿಯೂ ಹಲಸಿನ ಹಣ್ಣಿನ ಮರಗಳಿವೆ. ಆದರೆ ಕೆಂಪಗಿರುವ ಹಲಸಿನ ಹಣ್ಣಿನ ಮರ ಇಲ್ಲ. ಮೇಳದಲ್ಲಿ ಸಿಗುತ್ತೆ ಎಂದು ಬಂದೆ. ಇಲ್ಲಿಯೂ ಖಾಲಿ ಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
2 ಸಾವಿರಕ್ಕೂ ಹೆಚ್ಚು ಗಿಡಗಳ ಮಾರಾಟ: ಹಲಸಿನ ಹಣ್ಣಿನೊಂದಿಗೆ ವಿವಿಧ ತಳಿಗಳ ಗಿಡಗಳ ಮಾರಾಟವೂ ಜೋರಾಗಿತ್ತು. ಸಿಂದೂ, ಹೆಜ್ಜೇನು, ಅಂಟು ರಹಿತ, ಬೈರ, ವಿಯಟ್ನಾಂ ಸೂಪರ್ ಅರ್ಲಿ, ಬೆಂಗ್ ಸೂರ್ಯ, ನಾಗಚಂದ್ರ, ರಾಮಚಂದ್ರ, ಕಾಚಳ್ಳಿ ಹಲಸು, ಲಾಲ್‍ಬಾಗ್ ಮಧುರ ಮುಂತಾದ ತಳಿಯ 2 ಸಾವಿರಕ್ಕೂ ಹೆಚ್ಚು ಸಸಿಗಳ ಮಾರಾಟವಾಗಿದೆ.
ಬಹುಮಾನ ವಿತರಣೆ: ಇದೇ ವೇಳೆ ನಡೆದ ಹಲಸಿನ ಹಣ್ಣಿನ ಅಡುಗೆ ಸ್ಪರ್ಧೆ ಹಾಗೂ ಹಲಸಿನ ಹಣ್ಣು ತಿನ್ನುವ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾ ಯಿತು. ಅಡುಗೆ ಸ್ಪರ್ಧೆಯಲ್ಲಿ ಮೈಸೂರಿನ ಬೋಗಾದಿ ನಿವಾಸಿ ಮಂಗಳ ಪ್ರಕಾಶ್ ಪ್ರಥಮ, ಲತಾ ಶೇಖರ್ ದ್ವಿತೀಯ ಹಾಗೂ ವಿರಾಜಪೇಟೆಯ ರಾಜೇಶ್ವರಿ ಮುತ್ತಣ್ಣ ತೃತೀಯ ಸ್ಥಾನ ಪಡೆದರೆ, ಹಲಸಿನ ಹಣ್ಣು ತಿನ್ನುವ ಸ್ಪರ್ಧೆಯಲ್ಲಿ ಚಿಕ್ಕಮಗ ಳೂರಿನ ಸುಧಾಕರ್ ವಿಠಲ ಪ್ರಥಮ, ಮೈಸೂ ರಿನ ರಾಧ ದ್ವಿತೀಯ ಹಾಗೂ ಬೇಲೂರಿನ ಸುಧಾ ತೃತೀಯ ಸ್ಥಾನ ಪಡೆದುಕೊಂಡರು.
ವಿಜೇತರಿಗೆ ಬಹುಮಾನ ವಿತರಿಸಿದ ಬಳಿಕ ಸಹಜ ಸಮೃದ್ಧ ಸಂಸ್ಥೆ ಮುಖ್ಯಸ್ಥ ಕೃಷ್ಣ ಪ್ರಸಾದ್ ಮಾತನಾಡಿ, ವಿದೇಶಿ ಹಾಗೂ ರಾಸಾಯನಿಕಯುಕ್ತ ಹಣ್ಣುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಆರೋಗ್ಯಕ್ಕೆ ಉಪಯುಕ್ತವಾದ ಹಲಸಿನ ಹಣ್ಣಿಗೆ ಯಾವುದೇ ಹಣ್ಣಿನ ಅಂಗಡಿಯಲ್ಲಿ ಸ್ಥಳವಿಲ್ಲದಂತಾಗಿರುವುದು ವಿಷಾದ ನೀಯ. ಈ ನಿಟ್ಟಿನಲ್ಲಿ ಹಲಸಿನ ಹಣ್ಣಿನ ಪ್ರಾಮುಖ್ಯತೆಯನ್ನು ಸಾರ್ವಜನಿಕರಿಗೆ ಪರಿಚಯಿ ಸುವ ದೃಷ್ಟಿಯಿಂದ ‘ಹಲಸಿನ ಹಬ್ಬ’ವನ್ನು ಆಚರಿಸಲಾಯಿತು ಎಂದರು.
ಸಾಕಷ್ಟು ಜನರಿಗೆ ಹಲಸಿನ ಹಣ್ಣು ಸಿಗದೆ ನಿರಾಶೆಯಾಗಿದೆ. ಹಣ್ಣಿನ ಸೀಸನ್ ಕಡೆಯಲ್ಲಿ ಮೇಳವನ್ನು ಆಯೋಜಿ ಸಿರುವುದರಿಂದ ಹಣ್ಣುಗಳ ಕೊರತೆ ಉಂಟಾಯಿತು. ಮುಂದಿನ ಬಾರಿ ದೊಡ್ಡ ಮಟ್ಟದಲ್ಲಿ ಮೇಳವನ್ನು ಆಯೋಜಿಸಲಾಗುತ್ತದೆ ಎಂದು ಹೇಳಿದರು.