ಡಾಕ್ಟರ್ಸ್ ಪೆಯಿಂಟ್ ಬ್ರಷ್: ಮೈಸೂರಲ್ಲಿ ಶಿಶು ವೈದ್ಯೆಯ ಬಿಡುವಿನ ವೇಳೆಯ ಕಲಾ ಪ್ರೌಢಿಮೆಯ ಪ್ರದರ್ಶನ
ಮೈಸೂರು

ಡಾಕ್ಟರ್ಸ್ ಪೆಯಿಂಟ್ ಬ್ರಷ್: ಮೈಸೂರಲ್ಲಿ ಶಿಶು ವೈದ್ಯೆಯ ಬಿಡುವಿನ ವೇಳೆಯ ಕಲಾ ಪ್ರೌಢಿಮೆಯ ಪ್ರದರ್ಶನ

August 5, 2019

ಮೈಸೂರು,ಆ.4(ಆರ್‍ಕೆಬಿ)-ಶಿಶು ವೈದ್ಯೆ ಡಾ.ಶೈಲಜಾ ಪ್ರಶಾಂತ್ ವಿವಿಧ ಕಲಾ ಪ್ರಕಾರಗಳಲ್ಲಿ ರಚಿಸಿರುವ ಚಿತ್ರಕಲೆ ಗಳ `ಡಾಕ್ಟರ್ಸ್ ಪೆಯಿಂಟ್ ಬ್ರಷ್’ ಪ್ರದ ರ್ಶನ ಭಾನುವಾರ ಮೈಸೂರಿನ ಕಲಾ ಮಂದಿರ ಸುಚಿತ್ರ ಆರ್ಟ್ ಗ್ಯಾಲರಿಯಲ್ಲಿ ನೋಡುಗರ ಕಣ್ಮನ ಸೆಳೆಯಿತು. ಅವರ ಮೊದಲ ಚಿತ್ರಕಲಾ ಪ್ರದರ್ಶನಕ್ಕೆ ಅಭೂತ ಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು.

ಚಿತ್ರಕಲಾ ಪ್ರದರ್ಶನದಲ್ಲಿ ಮೈಸೂರು ಮತ್ತು ಕೇರಳದ ಸಾಂಪ್ರದಾಯಿಕ ಶೈಲಿಯ ದೇವತೆಗಳು ಮತ್ತು ಪುರಾಣ ಹೇಳುವ ಚಿತ್ರಗಳು ಕೇಂದ್ರ ಬಿಂದುವಾಗಿತ್ತು. ಗಣ ಪತಿ, ಸುಬ್ರಹ್ಮಣ್ಯ, ಶಿವ, ಪಾರ್ವತಿ, ಸರಸ್ವತಿ, ಲಕ್ಷ್ಮೀ, ಸತ್ಯನಾರಾಯಣ, ಬಾಲಕೃಷ್ಣ, ಯಶೋದ ಕೃಷ್ಣ, ರಾಧಾ ಕೃಷ್ಣ ಇಂತಹ ಹಲವು ಪೌರಾಣಿಕ ಚಿತ್ರಕಲೆ ಆಕರ್ಷಕ ವಾಗಿದ್ದವು. ಗಂಜೀಫಾ ಶೈಲಿಯ ವಾದ್ಯ ಗಣಪತಿ, ವಿಷ್ಣುವಿನ ದಶಾವತಾರ ಚಿತ್ರ ಗಳು, ಪ್ರಾಣಿ, ಪಕ್ಷಿಗಳ ಗೋಂಡ್ ಕಲಾ ಕೃತಿಗಳು ಇಲ್ಲಿದ್ದವು. ತೈಲ ವರ್ಣದಲ್ಲಿ ಬುದ್ಧನ ನಾನಾ ಭಾವದ ಚಿತ್ರಗಳು ಗಮನ ಸೆಳೆದವು. ಚಿತ್ತಾರದ ರಂಗೋಲಿ ಚಿತ್ರ ಕಲೆಯೂ ರೂಪುಗೊಂಡಿತ್ತು.

ನಿಸರ್ಗ, ಮರ-ಗಿಡ, ತೊರೆ, ಕಾಡಿನ ಚಿತ್ರಗಳು, ವಾರ್ಲಿ, ಮಧುಬನಿ ಸೇರಿ ದಂತೆ 13 ಶೈಲಿಯ ಕಲಾ ಪ್ರಕಾರಗಳ 103ಕ್ಕೂ ಹೆಚ್ಚು ಚಿತ್ರಕಲೆಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು. `ಮೈಸೂರು ಮಿತ್ರ’ ಹಾಗೂ `ಸ್ಟಾರ್ ಆಫ್ ಮೈಸೂರ್’ ವ್ಯವ ಸ್ಥಾಪಕ ಸಂಪಾದಕ ವಿಕ್ರಂ ಮುತ್ತಣ್ಣ ಚಿತ್ರ ಕಲಾ ಪ್ರದರ್ಶನವನ್ನು ಉದ್ಘಾಟಿಸಿದರು. ಕಾವಾದ ಸಾಂಪ್ರದಾಯಿಕ ಚಿತ್ರ ಕಲಾವಿದೆ ಗಿರಿಜಾ, ಜೆಎಸ್‍ಎಸ್ ಶಿಶು ವೈದ್ಯ ವಿಭಾಗದ ಮುಖ್ಯಸ್ಥ ಡಾ.ನಾರಾಯಣಪ್ಪ ಇನ್ನಿತರರು ಉಪಸ್ಥಿತರಿದ್ದರು.

ಡಾ.ಶೈಲಜಾ ಪ್ರಶಾಂತ್ ವೃತ್ತಿಯಲ್ಲಿ ವೈದ್ಯೆ. ಜೆಎಸ್‍ಎಸ್ ಆಸ್ಪತ್ರೆಯ ಶಿಶು ವೈದ್ಯ ರಾಗಿದ್ದರೂ, ಸಾಂಪ್ರದಾಯಿಕ ಚಿತ್ರಕಲೆ ಅವರ ಪ್ರವೃತ್ತಿ. ಬಾಲ್ಯದಿಂದಲೇ ಮೈಸೂ ರಿನ ಸಾಂಪ್ರದಾಯಿಕ ಚಿತ್ರಕಲೆಯಲ್ಲಿ ವಿಶೇಷ ಒಲವು ಹೊಂದಿ, ಅಭ್ಯಾಸ ಮಾಡಿದರು. ಇಂಗ್ಲೆಂಡ್‍ನಿಂದ ಭಾರತಕ್ಕೆ ಮರಳಿದ ಬಳಿಕ ಚಿತ್ರ ರಚನೆಗೆ ಹೆಚ್ಚು ಒತ್ತು ನೀಡಿದರು. ತಮ್ಮ ವೃತ್ತಿಯ ಜೊತೆ ಜೊತೆಗೆ ಕಲಾವಿದ ವೆಂಕಟರಮಣಪ್ಪ ಹಾಗೂ ಇಂದಿರಾಗಾಂಧಿ ರಾಷ್ಟ್ರೀಯ ಮಾನವ ವಸ್ತು ಸಂಗ್ರಹಾಲಯದಲ್ಲಿ ನಡೆಸಲಾಗುತ್ತಿದ್ದ ಮಾಡು ಮತ್ತು ಕಲಿ ಕಾರ್ಯಕ್ರಮದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದರ ಪರಿಣಾಮ ಅವರು ಚಿತ್ರಕಲೆಯನ್ನು ಮೈಗೂಡಿಸಿಕೊಳ್ಳಲು ಸಾಧ್ಯವಾಯಿತು. ಕೆಲಸದ ನಡುವೆ ಸಿಗುವ ವಾರಾಂತ್ಯದ ರಜೆಯಲ್ಲಿ ಬರೆದ ಚಿತ್ರಗಳನ್ನು ಅವರು ಇಂದಿಲ್ಲಿ ಪ್ರದರ್ಶಿಸಿದ್ದು, ಇದು ಅವರ ಮೊದಲ ಚಿತ್ರಕಲಾ ಪ್ರದರ್ಶನವಾಗಿದೆ.

Translate »