ದ್ವಿತೀಯ ಪಿಯು ಸಂಸ್ಕೃತ ಪತ್ರಿಕೆ ಅಂಕ ಮರು ಎಣಿಕೆ ಫಲಶ್ರುತಿ :ಮರಿಮಲ್ಲಪ್ಪ ಕಾಲೇಜು ವಿದ್ಯಾರ್ಥಿನಿ ಅನ್ಸಿ ಜಾಸ್ಮಿನ್ ಡಿಮೆಲೋ ಮೈಸೂರಿಗೆ ಪ್ರಥಮ, ರಾಜ್ಯಕ್ಕೆ 5ನೇ ಸ್ಥಾನ
ಮೈಸೂರು

ದ್ವಿತೀಯ ಪಿಯು ಸಂಸ್ಕೃತ ಪತ್ರಿಕೆ ಅಂಕ ಮರು ಎಣಿಕೆ ಫಲಶ್ರುತಿ :ಮರಿಮಲ್ಲಪ್ಪ ಕಾಲೇಜು ವಿದ್ಯಾರ್ಥಿನಿ ಅನ್ಸಿ ಜಾಸ್ಮಿನ್ ಡಿಮೆಲೋ ಮೈಸೂರಿಗೆ ಪ್ರಥಮ, ರಾಜ್ಯಕ್ಕೆ 5ನೇ ಸ್ಥಾನ

June 12, 2018

ಮೈಸೂರು:  ಪ್ರಸಕ್ತ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ 589 ಅಂಕಗಳನ್ನು ದಾಖಲಿಸಿ ಮರಿಮಲ್ಲಪ್ಪ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದ ವಿಜ್ಞಾನ ವಿಭಾಗದ ಅನ್ಸಿ ಜಾಸ್ಮಿನ್ ಡಿಮೆಲೋ ಅಂಕಗಳ ಮರು ಎಣಿಕೆಯಲ್ಲಿ 2 ಅಂಕಗಳನ್ನು ಹೆಚ್ಚಳವಾಗಿ ಪಡೆದು ಮೈಸೂರು ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ 5ನೇ ಸ್ಥಾನ ಪಡೆದುಕೊಂಡಿದ್ದಾರೆ.

ಸಂಸ್ಕೃತ ವಿಷಯದಲ್ಲಿ 96 ಅಂಕಗಳನ್ನು ಪಡೆದಿದ್ದ ವಿದ್ಯಾರ್ಥಿನಿ ಅನ್ಸಿ ಜಾಸ್ಮಿನ್ ಡಿಮೆಲೋ, ತನಗೆ 100ಕ್ಕೆ 100 ಅಂಕಗಳು ಬರಬೇಕೆಂಬ ವಿಶ್ವಾಸ ವ್ಯಕ್ತಪಡಿಸಿದ್ದರು. ಪುತ್ರಿಯ ಈ ವಿಶ್ವಾಸದ ಹಿನ್ನೆಲೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಗೆ ಆನ್‍ಲೈನ್ ಮೂಲಕ ಮರು ಎಣಿಕೆ ನಡೆಸುವಂತೆ ಪೋಷಕರು ಮನವಿ ಸಲ್ಲಿಸಿದ್ದರು. ಅದರಂತೆ ಮರು ಎಣಿಕೆಯಲ್ಲಿ ಮತ್ತೆರಡು ಅಂಕ ಹೆಚ್ಚಳಗೊಂಡಿದ್ದು, ಒಟ್ಟು 98 ಅಂಕ ಪಡೆದುಕೊಂಡಿದ್ದಾರೆ.

ಕಾಲೇಜಿನ ಪ್ರಾಂಶುಪಾಲರ ಕೊಠಡಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಾಂಶುಪಾಲ ಬಿ.ಆರ್.ನೀಲಕಂಠ ಈ ವಿಷಯ ಪ್ರಕಟಿಸಿದರು. ಎಲ್ ಅಂಡ್ ಟಿ ಕಂಪನಿಯಲ್ಲಿ ಯೋಜನಾ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಅನ್ಸಿ ಜಾಸ್ಮಿನ್ ಡಿಮೆಲೋ ಅವರ ತಂದೆ ಸಿಲ್ವೆಸ್ಟರ್ ಡಿಮೆಲೋ ಅವರು ತಮ್ಮ ಪುತ್ರಿಗೆ ಹೆಚ್ಚು ಅಂಕ ಬರಬೇಕೆನ್ನುವ ವಿಶ್ವಾಸದ ಹಿನ್ನೆಲೆಯಲ್ಲಿ ಸಂಸ್ಕೃತ ಉತ್ತರ ಪತ್ರಿಕೆಯ ಸ್ಕ್ಯಾನ್ ಕಾಪಿಯನ್ನು (ನಕಲು ಪತ್ರಿ) ಇಲಾಖೆಯಿಂದ ತರಿಸಿಕೊಂಡಿದ್ದರು.

ಬಳಿಕ ಉತ್ತರ ಪತ್ರಿಕೆಯ ನಕಲು ಪ್ರತಿಯನ್ನು ಕಾಲೇಜಿನ ಪ್ರಾಂಶುಪಾಲರು ಹಾಗೂ ಸಂಸ್ಕೃತ ಪ್ರಾಧ್ಯಾಪಕರು ಪರಿಶೀಲಿಸಿ ಅಂಕಗಳ ಎಣಿಕೆಯಲ್ಲಿ ತಪ್ಪಾಗಿರುವ ಅಂಶವನ್ನು ಗುರುತಿಸಿದ್ದರು. ಬಳಿಕ ಮರು ಎಣಿಕೆ ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಇದೀಗ 2 ಅಂಕ ಹೆಚ್ಚಳವಾಗಿದೆ.

ಮುಂಚೆಯೇ ಬಂದಿದ್ದರೇ ಅದರ ಮಹತ್ವವೇ ಬೇರೆ: ಪತ್ರಿಕೆಯೊಂದಿಗೆ ಮಾತನಾಡಿದ ವಿದ್ಯಾರ್ಥಿನಿ ಅನ್ಸಿ ಜಾಸ್ಮಿನ್ ಡಿಮೆಲೋ, ಈಗೇನೋ ಸಂತಸವಾಗಿದೆ. ಆದರೆ ಮುಂಚೆಯೇ ಇಷ್ಟು ಅಂಕ ಬಂದಿದ್ದರೆ, ಅದರ ಮಹತ್ವವೇ ಬೇರೆ ಇರುತ್ತಿತ್ತು. ನನಗೆ 100ಕ್ಕೆ 100 ಅಂಕವೇ ಬರಬೇಕೆನ್ನುವ ವಿಶ್ವಾಸವಿತ್ತು. ಈ ರೀತಿಯ ತಪ್ಪುಗಳನ್ನು ಮಾಡದಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಹೆಚ್ಚಿನ ನಿಗಾ ವಹಿಸಬೇಕು. ಇಲ್ಲವಾದರೆ ವಿನಾಕಾರಣ ವಿದ್ಯಾರ್ಥಿಗಳು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿನಿ ತಂದೆ ಸಿಲ್ವೆಸ್ಟರ್ ಡಿಮೆಲೋ ಮಾತನಾಡಿ, ಈ ರೀತಿಯ ತಪ್ಪುಗಳ ಆಗಲೇಬಾರದು. ಇಂತಹ ಎಡವಟ್ಟುಗಳಿಂದ ಮಕ್ಕಳಿಗೆ ಅನಗತ್ಯವಾಗಿ ಒತ್ತಡ ಹೆಚ್ಚಾಗಲಿದೆ. ಸಂಬಂಧಿಸಿದ ಅಧಿಕಾರಿಗಳು ಕಟ್ಟುನಿಟ್ಟಾಗಿ ಮೌಲ್ಯಮಾಪನ ಹಾಗೂ ಅಂಕಗಳ ದಾಖಲು ಕಾರ್ಯವನ್ನು ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅಭಿನಂದನೆ: ಕಾಲೇಜಿನ ಆವರಣದಲ್ಲಿರುವ ಮರಿಮಲ್ಲಪ್ಪ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯವರ ಕೊಠಡಿಯಲ್ಲಿ ಅನ್ಸಿಜಾಸ್ಮಿನ್ ಡಿಮೆಲೋ ಅವರಿಗೆ ಹೂಗುಚ್ಛ ನೀಡುವ ಮೂಲಕ ಕಾರ್ಯದರ್ಶಿ ಪಂಚಾಕ್ಷರಸ್ವಾಮಿ ಅಭಿನಂದಿಸಿದರು. ಈ ವೇಳೆ ಪ್ರಾಂಶುಪಾಲ ಬಿ.ಆರ್.ನೀಲಕಂಠ, ಉಪಪ್ರಾಂಶುಪಾಲರಾದ ಎಂ.ಎಸ್.ವಿಜಯಾ, ಅನ್ಸಿ ಜಾಸ್ಮಿನ್ ಡಿಮೆಲೋ ತಂದೆ ಸಿಲ್ವೆಸ್ಟರ್ ಡಿಮೆಲೋ, ತಾಯಿ ಜನೆಟ್ ಡಿಮೆಲೋ ಹಾಜರಿದ್ದರು.

Translate »