ಉತ್ತಮ ಕೆಲಸ ಮಾಡಿದರೆ ಜನ ಮರೆಯಲ್ಲ ಅಧಿಕಾರಿಗಳಿಗೆ ಮಾಜಿ ಶಾಸಕ ವಾಸು ಕಿವಿಮಾತು
ಮೈಸೂರು

ಉತ್ತಮ ಕೆಲಸ ಮಾಡಿದರೆ ಜನ ಮರೆಯಲ್ಲ ಅಧಿಕಾರಿಗಳಿಗೆ ಮಾಜಿ ಶಾಸಕ ವಾಸು ಕಿವಿಮಾತು

June 12, 2018

ಮೈಸೂರು:  ಅಧಿಕಾರದಲ್ಲಿದ್ದಾಗ ಉತ್ತಮ ಕೆಲಸ ಮಾಡಿದರೆ ನಿವೃತ್ತಿ ನಂತರವೂ ಜನರು ನಿಮ್ಮನ್ನು ಮರೆಯುವುದಿಲ್ಲ ಎಂದು ಮಾಜಿ ಶಾಸಕ ವಾಸು ಅವರು ಇಂದಿಲ್ಲಿ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ನಗರ ಪಾಲಿಕೆ ಸದಸ್ಯ ಪಿ.ಪ್ರಶಾಂತಗೌಡ ನೇತೃತ್ವದಲ್ಲಿ ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ದೇವರಾಜ ಮೊಹಲ್ಲ ನಾಗರಿಕರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಮೈಸೂರು ಮಹಾನಗರ ಪಾಲಿಕೆ ಅಸಿಸ್ಟೆಂಟ್ ಇಂಜಿನಿಯರ್ ಎ.ಎಂ.ಮಂಜುನಾಥ್ ದಂಪತಿಗೆ ಅಭಿನಂದಿಸಿದ ನಂತರ ಅವರು ಮಾತನಾಡುತ್ತಿದ್ದರು.
ತಾವು ಶಾಸಕರಾಗಿದ್ದ ಅವಧಿಯಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಂಡ ಜೆಎಲ್‍ಬಿ ರಸ್ತೆ, ಬುಲೆವಾರ್ಡ್ ರಸ್ತೆ, ಕೆಆರ್‍ಎಸ್ ರಸ್ತೆ ಹಾಗೂ ದೇವರಾಜ ಮೊಹಲ್ಲದ ಹಲವು ರಸ್ತೆ ಮತ್ತು ಚರಂಡಿ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಂಡು ನಿಗಧಿತ ಅವಧಿಯಲ್ಲಿ ಪೂರ್ಣಗೊಳ್ಳಸುವಲ್ಲಿ ಮಂಜುನಾಥ್ ಮತ್ತು ಇತರರು ಯಶಸ್ವಿಯಾಗಿದ್ದಾರೆ.

ನೀವು ಮಾಡಿದ ಉತ್ತಮ ಕೆಲಸಗಳು ನಿಮ್ಮನ್ನು ನಿವೃತ್ತಿ ನಂತರವೂ ಜನ ನೆನಪಿಸಿಕೊಳ್ಳುವಂತೆ ಮಾಡುತ್ತವೆ. ಮೈಸೂರು ಪಾಲಿಕೆಯಲ್ಲಿ ಕೆಲಸ ಮಾಡಿದವರು ಈ ರಾಜ್ಯದ ಯಾವುದೇ ಸ್ಥಳದಲ್ಲೂ ನಿಭಾಯಿಸುವರು. ಸಾರ್ವಜನಿಕ ಸೇವೆಯಲ್ಲಿದ್ದಾಗ ನಿರ್ವಂಚನೆಯಿಂದ ಪ್ರಾಮಾಣಿಕ ಕೆಲಸ ಮಾಡಿ ಸೈ ಎನಿಸಿಕೊಳ್ಳಬೇಕು. ಆ ಕೆಲಸವನ್ನು ಮಂಜುನಾಥ್ ಮಾಡಿದ್ದಾರೆ ಎಂದು ಪ್ರಸಂಸಿಸಿದರು.

ಇದೇ ವೇಳೆ ಮೈಸೂರು ಪೇಟ ತೊಡಿಸಿ ಸ್ಮರಣ ಫಲಕ ನೀಡುವ ಮೂಲಕ ಮಂಜುನಾಥ ದಂಪತಿಗಳನ್ನು ಅಭಿನಂದಿಸಿ, ಆತ್ಮೀಯವಾಗಿ ಬೀಳ್ಕೊಡಲಾಯಿತು. ಅದಕ್ಕೆ ಕೃತಜ್ಞತೆ ಹೇಳಿದ ಮಂಜುನಾಥ ಶಾಸಕರಾಗಿ ವಾಸು, ಹಿರಿಯ ಅಧಿಕಾರಿಗಳು, ಸಾರ್ವಜನಿಕರು ಹಾಗೂ ಗುತ್ತಿಗೆದಾರರ ಸಹಕಾರದಿಂದ ತಾವು ಗುಣಮಟ್ಟದ ಕೆಲಸಗಳನ್ನು ನಿರ್ವಹಿಸಲು ಸಾಧ್ಯವಾಯಿತು ಎಂದರು.

ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷ ಡಾ.ಕೃಷ್ಣಮೂರ್ತಿ, ಪಾಲಿಕೆ ಸದಸ್ಯ ಪಿ.ಪ್ರಶಾಂತ್‍ಗೌಡ ಸೂಪರಿಂಟೆಂಡಿಂಗ್ ಇಂಜಿನಿಯರ್ ಸುರೇಶ್, ವಲಯಾಧಿಕಾರಿ ನಾಗರಾಜು, ನಿವೃತ್ತ ಅಭಿವೃದ್ಧಿ ಅಧಿಕಾರಿಗಳಾದ ಗೋವಿಂದಪ್ಪ, ಜಗದೀಶ್, ವಲಯ 7ರ ಅಸಿಸ್ಟೆಂಟ್ ಕಮೀಷ್ನರ್ ಮಹೇಶ ಹಾಗೂ ಪಾಲಿಕೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಚಂದ್ರಶೇಖರಯ್ಯ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Translate »