ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ: ರಾಜ್ಯದಲ್ಲಿ ರಾಜಕೀಯ ಕೆಸರೆರಚಾಟ
ಮೈಸೂರು

ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ: ರಾಜ್ಯದಲ್ಲಿ ರಾಜಕೀಯ ಕೆಸರೆರಚಾಟ

December 20, 2019

ಬೆಂಗಳೂರು, ಡಿ.19- ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ದೇಶದ ವಿವಿಧೆಡೆ ಹಿಂಸಾತ್ಮಕ ಪ್ರತಿಭಟನೆ ನಡೆದಿರುವ ಮಧ್ಯೆಯೇ ರಾಜಕೀಯ ಮುಖಂಡರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ.

ರಾಜ್ಯದಲ್ಲಿ ಸಿಎಎ ಜಾರಿಗೆ ತಂದರೆ ರಾಜ್ಯ ಹೊತ್ತಿ ಉರಿಯಲಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಯು.ಟಿ.ಖಾದರ್ ಬುಧವಾರ ಮಂಗಳೂರಿನಲ್ಲಿ ಹೇಳಿದ್ದರು. ಅದರ ಬೆನ್ನಲ್ಲೇ ಗುರುವಾರ ಮಂಗಳೂರಿನಲ್ಲಿ ಭಾರೀ ಹಿಂಸಾತ್ಮಕ ಪ್ರತಿಭಟನೆ ನಡೆದಿದೆ. ಪರಿಸ್ಥಿತಿ ಕೈಮೀರಿ ಹೋದಾಗ ಪೊಲೀಸರು ನಡೆಸಿದ ಗೋಲಿಬಾರ್‍ನಲ್ಲಿ ಇಬ್ಬರು ಪ್ರತಿಭಟನಾಕಾರರು ಸಾವಿಗೀಡಾಗಿದ್ದಾರೆ.

ಮಂಗಳೂರಿನ ಗಲಭೆ ಮತ್ತು ಹಿಂಸಾತ್ಮಕ ಪ್ರತಿಭಟನೆ, ಗೋಲಿಬಾರ್‍ಗೆ ಕಾಂಗ್ರೆಸ್ ಮುಖಂಡ ಯು.ಟಿ.ಖಾದರ್ ಅವರೇ ಕಾರಣ. ಅವರ ಪ್ರಚೋದನೆಯಿಂದಲೇ ಹಿಂಸಾತ್ಮಕ ಪ್ರತಿಭಟನೆ ನಡೆದಿದೆ ಎಂದು ಬಿಜೆಪಿ ಮಂಗಳೂರು ಘಟಕ ಪೊಲೀಸರಿಗೆ ದೂರು ನೀಡಿದೆ. ಯು.ಟಿ.ಖಾದರ್ ಅವರೇ ಮಂಗಳೂರು ಗಲಭೆಗೆ ಕಾರಣ ಎಂದು ಕಿಡಿಕಾರಿ ಬಿಜೆಪಿ ನಾಯಕ ಬಿ.ಎಲ್.ಸಂತೋಷ್ ಟ್ವೀಟ್ ಮಾಡಿದ್ದಾರೆ.

ಇನ್ನೊಂದೆಡೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಿಜೆಪಿ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ. ಮಂಗಳೂರಿನ ಗೋಲಿಬಾರ್‍ಗೆ ಬಿಜೆಪಿ ಯುವಜನ ಮತ್ತು ರೈತ ವಿರೋಧಿ ನೀತಿಯೇ ಕಾರಣ. ಬಿ.ಎಸ್. ಯಡಿಯೂರಪ್ಪ ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗಲೂ ಗೋಲಿಬಾರ್ ನಡೆದಿತ್ತು. ಆಗ ಇಬ್ಬರು ರೈತರು ಬಲಿಯಾಗಿದ್ದರು. ಈಗ ಅವರು ಸಿಎಂ ಆಗಿರುವಾಗಲೇ ಎರಡನೇ ಬಾರಿ ಗೋಲಿಬಾರ್ ನಡೆದು ಮಂಗಳೂರಿನಲ್ಲಿ ಇಬ್ಬರು ಯುವಕರು ಸಾವಿಗೀಡಾಗಿದ್ದಾರೆ. ಬಿಜೆಪಿ ಮೂಲತಃ ರೈತ ಮತ್ತು ಯುವಜನ ವಿರೋಧಿ ಎನ್ನುವುದು ಸಾಬೀತಾಗಿದೆ ಎಂದಿದ್ದಾರೆ. ಧಾರ್ಮಿಕ ದ್ವೇಷ ಹುಟ್ಟುಹಾಕುವ ಬಿಜೆಪಿ, ಕರ್ನಾಟಕದಲ್ಲಿ ರಹಸ್ಯ ಕಾರ್ಯಸೂಚಿ ಹೊಂದಿದೆ. ರಾಜ್ಯ ಸರ್ಕಾರದ ಅಸಾಮಥ್ರ್ಯಕ್ಕೆ ಮಂಗಳೂರಿನ ಇಬ್ಬರು ಯುವಕರು ಬಲಿಯಾಗಿದ್ದಾರೆ. ಮೃತ ಯುವಕರ ದುಃಖತಪ್ತ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಟ್ವೀಟ್ ಮಾಡಿದ್ದಾರೆ.

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರೂ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಇಬ್ಬರು `ಅಮಾಯಕರನ್ನು’ ರಾಜ್ಯ ಸರ್ಕಾರ ಗೋಲಿಬಾರ್ ನಡೆಸಿ ಬಲಿ ತೆಗೆದು ಕೊಂಡಿದ್ದು ಯಾವ ಕಾರಣಕ್ಕೆ? ಯಾರನ್ನು ಮೆಚ್ಚಿಸಲು ಇಂಥ ಮತಿಗೇಡಿ ನಿರ್ಧಾರವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ. ಪೊಲೀಸರ ಗುಂಡಿಗೆ ಬಲಿಯಾದ `ಅಮಾಯಕರ’ ಕುಟುಂಬದ ಜವಾಬ್ದಾರಿ ತೆಗೆದುಕೊಳ್ಳುವವರು ಯಾರು? ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಯಾರೂ ಪ್ರತಿಭಟಿಸಲೇಬಾರದೇ? 4 ತಿಂಗಳ ಆಡಳಿತ ಅವಧಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಪವಿತ್ರ ಸರ್ಕಾರ ಮಾಡಲು ಹೊರಟಿರುವುದಾದರೂ ಏನು? ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

Translate »