ಸತತ ಏರಿಕೆ ದಾಖಲಿಸಿದ ಚಿನ್ನದ ದರ
ಮೈಸೂರು

ಸತತ ಏರಿಕೆ ದಾಖಲಿಸಿದ ಚಿನ್ನದ ದರ

January 13, 2020

ಮೈಸೂರು, ಜ.12(ಆರ್‍ಕೆಬಿ)- ಮೈಸೂರಿನಲ್ಲಿ ಕಳೆದ 2019ರ ಡಿಸೆಂಬರ್‍ನಿಂದ ಇಲ್ಲಿಯವರೆಗೆ ಚಿನ್ನದ ದರ ಸತತವಾಗಿ ಏರಿಕೆಯಾಗುತ್ತಲೇ ಬಂದಿದೆ. ಅಲ್ಲೊಮ್ಮೆ ಇಲ್ಲೊಮ್ಮೆ ಕೆಲವೇ ರೂಪಾಯಿ ಇಳಿಕೆ ಕಂಡಿದ್ದು ಬಿಟ್ಟರೆ ದಿನೇ ದಿನೆ ಚಿನ್ನದ ದರ ಏರಿಕೆಯನ್ನು ದಾಖಲಿಸಿದೆ.

ಡಿ.1, 2019ರಂದು 10 ಗ್ರಾಂ 22 ಕ್ಯಾರೆಟ್ ಚಿನ್ನದ ದರ ರೂ.35,490 ಇತ್ತು. ಆದರೆ 2020ರ ಜ.9 ರಂದು 37,470ಕ್ಕೇರಿತ್ತು. ಜ.8ರಂದು 22 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 38,600 ರೂಗಳಿಗೆ ಗರಿಷ್ಟ ಮಾರಾಟ ದರ ದಾಖಲಿಸಿದೆ.

2019ರ ಡಿ.1ರಿಂದ 2020ರ ಜ.9ರವರೆಗೆ ಪ್ರತಿ 10 ಗ್ರಾಂಗೆ ಚಿನ್ನದ ಬೆಲೆ ರೂ.10ರಿಂದ 50, ರೂ. 300, ರೂ.700, ರೂ.900 ಮತ್ತು ರೂ.1,130ವರೆಗೆ ಹೀಗೆ ಏರುಮುಖವಾಗಿಯೇ ಚಲಿಸಿದೆ.

ಚಿನ್ನದ ದರ ಏರಿಕೆ ಜೊತೆಗೆ ಚಿನ್ನಾಭರಣ ಖರೀದಿ ಸುವ ಗ್ರಾಹಕರು ಜಿಎಸ್‍ಟಿ ರೂಪದಲ್ಲಿ ಹೆಚ್ಚುವರಿ ಹಣ ತೆರಬೇಕಾಗುತ್ತದೆ. ಶುಲ್ಕದ ಜೊತೆಗೆ ಆಭರಣದ ವಿನ್ಯಾಸ ಶುಲ್ಕ ಮತ್ತು ವ್ಯರ್ಥ (ವೇಸ್ಟೇಜ್) ಶುಲ್ಕವೂ ಗ್ರಾಹಕರೇ ಪಾವತಿಸಬೇಕಾಗುತ್ತದೆ. ಈ ತಯಾರಿಕೆ ಶುಲ್ಕ, ವ್ಯರ್ಥ ಮತ್ತು ವಿನ್ಯಾಸ ಶುಲ್ಕಗಳು ಪ್ರತಿಷ್ಠಿತ ಆಭರಣ ಮಳಿಗೆಗಳಲ್ಲಿ ಕೊಳ್ಳುವ ನಾನಾ ಆಭರಣ ಪದಾರ್ಥವನ್ನು ಅವಲಂಬಿಸಿರುತ್ತದೆ. ಈ ಹೆಚ್ಚುವರಿ ಶುಲ್ಕ ಶೇ. 3ರಿಂದ 32ರವರೆಗೂ ಇರುತ್ತದೆ.

ಮೈಸೂರಿನ ಪ್ರತಿಷ್ಠಿತ ಚಿನ್ನಾಭರಣಗಳ ಶೋ ರೂಂ ಆಗಿರುವ ತೊಳಸಿ ಜ್ಯುವೆಲ್ಲರ್ಸ್‍ನ ಮಾಲೀಕ ಮನೋಹರಬಾಬು ಅವರ ಪ್ರಕಾರ, ಚಿನ್ನದ ದರ ಏರಿಕೆಗೆ ರಾಜಕೀಯ ಅಸಮತೋಲನ, ಜಾಗತಿಕ ಅನಿಶ್ಚಿತತೆ ಹಾಗೂ ಇರಾನ್ ಮತ್ತು ಅಮೆರಿಕಾ ನಡುವಿನ ಉದ್ವಿಗ್ನತೆಯೂ ಕಾರಣವಾಗಿದೆ.

ಭೂಮಿ, ಬ್ಯಾಂಕ್ ಠೇವಣಿ, ಷೇರುಗಳು ಮತ್ತು ಮ್ಯೂಚುಯಲ್ ಫಂಡ್‍ಗಳಿಗೆ ಹೋಲಿಸಿದರೆ ಚಿನ್ನವು ಉತ್ತಮ ಲಾಭ ಕೊಡುತ್ತದೆ. ಏಕೆಂದರೆ ಚಿನ್ನದ ಮೌಲ್ಯ ಎಂದಿಗೂ ಕುಸಿಯುವುದಿಲ್ಲ. ಹಾಗಾಗಿ ಹೆಚ್ಚಿನ ಜನರು ಹಣವನ್ನು ಭೂಮಿ, ಷೇರುಗಳಿಗೆ ಬದಲಾಗಿ ಚಿನ್ನದ ಮೇಲೆ ಹೂಡುವ ಆಯ್ಕೆ ಮಾಡಿಕೊಳ್ಳುತ್ತಾರೆ. ಪ್ರತಿಯೊಬ್ಬರೂ ಚಿನ್ನ ಖರೀದಿಸಲು ಬಯಸುತ್ತಾರೆ ಎಂದು `ಮೈಸೂರು ಮಿತ್ರ’ನಿಗೆ ತಿಳಿಸಿದರು.

ಇರಾನ್ ಮತ್ತು ಅಮೆರಿಕಾ ನಡುವಿನ ಯುದ್ಧದ ಕಾರ್ಮೋಡಗಳಿರುವ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಯಲ್ಲಿ ಏರಿಕೆ ಕಂಡು ಬಂದಿದೆ ಎಂದು ಸರಾಪು ವರ್ತಕರ ಸಂಘದ ಅಧ್ಯಕ್ಷರೂ ಆದ ಲಲಿತಾ ಜ್ಯುವೆಲ್ಲರಿ ಮಾರ್ಟ್‍ನ ಸಿ.ಎಸ್.ಅಮರನಾಥ್ ಹೇಳುತ್ತಾರೆ. ಎರಡೂ ದೇಶ ಗಳ ನಡುವಿನ ಸೇಡು, ಪ್ರತೀಕಾರದ ಕಾರಣಗಳಿಂ ದಾಗಿ ಜಾಗತಿಕ ತೈಲ ಬೆಲೆಗಳ ಏರಿಕೆಯ ಮಧ್ಯೆ ಅಮೆರಿಕಾದ ಡಾಲರ್‍ಗೆ ಹೋಲಿಸಿದರೆ ಭಾರತೀಯ ರೂಪಾಯಿ ಮೌಲ್ಯ ಕುಸಿದಿರುವುದು ಕೂಡ ಚಿನ್ನದ ಬೆಲೆಯನ್ನು ಮತ್ತಷ್ಟು ಹೆಚ್ಚಿಸಿದೆ. ಯುದ್ಧ ಕಾರ್ಮೋಡ ಗಳು ಸರಿದರೆ ಮಾತ್ರ ಚಿನ್ನದ ದರದಲ್ಲಿ ಸ್ವಲ್ಪ ಇಳಿಕೆ ಕಾಣಬಹುದಾಗಿದೆ ಎಂಬುದು ಅವರ ಅಭಿಪ್ರಾಯ.

ಭಾರತದಲ್ಲಿ ಚಿನ್ನದ ಆಮದು ಒಂದು ವರ್ಷದ ಹಿಂದಿನ ಪ್ರಮಾಣಕ್ಕಿಂತ ಶೇ.12ರಷ್ಟು ಕುಸಿಯಿತು. ಕಳೆದ ವರ್ಷ ದೇಶೀಯ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಶೇ.25ರಷ್ಟು ಏರಿಕೆಯಾಗಿದೆ.

Translate »