ಬೆಳಿಗ್ಗೆ 11ರಿಂದ ನಿರ್ಮಲಾಸೀತಾರಾಮನ್ ಮಂಡನೆ
ದೇಶದ ಎಲ್ಲಾ ವರ್ಗದ ಜನರಲ್ಲಿ ಭಾರೀ ನಿರೀಕ್ಷೆ
ನವದೆಹಲಿ,ಜ.31- ದೇಶದ ಆರ್ಥಿ ಕತೆಯ ದೃಷ್ಟಿಯಿಂದ ಭಾರೀ ಮಹತ್ವ ಗಳಿಸಿರುವ 2020-21ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಮಂಡಿಸಲಿದ್ದಾರೆ. ಇದು ನಿರ್ಮಲಾ ಅವರ ಎರಡನೇ ಆಯವ್ಯಯ. ಸಂಸತ್ತಿ ನಲ್ಲಿ ಶನಿವಾರ ಬೆಳಿಗ್ಗೆ 11ಕ್ಕೆ ಬಜೆಟ್ ಮಂಡನೆಯಾಗಲಿದೆ. ಕಳೆದ ಒಂದೂ ವರೆ ವರ್ಷಗಳಿಂದ ಸತತವಾಗಿ ಜಿಡಿಪಿ ಇಳಿಮುಖವಾಗಿರುವುದರಿಂದ ಆರ್ಥಿ ಕತೆಯ ಚೇತರಿಕೆ ದೃಷ್ಟಿಯಿಂದ ಈ ಬಾರಿಯ ಬಜೆಟ್ ನಿರ್ಣಾಯಕವೆನಿಸಿದೆ. ಹಣದ ಚಲಾವಣೆ ಹೆಚ್ಚಿಸಿ, ಬೇಡಿಕೆಗೆ ಉತ್ತೇಜನ ನೀಡಲು ತೆರಿಗೆ ಭಾರ ಇಳಿಕೆ, ರೈತರ ಆದಾಯ ವೃದ್ಧಿಗೆ ಕೃಷಿಗೆ ಸಂಬಂಧಿಸಿದ ಮಹತ್ವದ ಘೋಷಣೆಗಳು, ಉದ್ಯೋಗ ಸೃಷ್ಟಿಗೆ ಒತ್ತು ಸೇರಿದಂತೆ ಹಲವು ನಿರೀಕ್ಷೆಗಳು ವಿವಿಧ ವಲಯಗಳಿಂದ ಕೇಳಿಬಂದಿವೆ. ಆದರೆ, ಮತ್ತೊಂದು ಕಡೆ ತೆರಿಗೆ ಸಂಗ್ರಹದಲ್ಲಿ ಇಳಿಕೆಯಾಗಿರುವುದರಿಂದ ಸಂಪನ್ಮೂಲ ಕ್ರೋಢೀಕರಣ ಮತ್ತು ಹಂಚಿಕೆ ಸರಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದರ ನಡುವೆ ಸಚಿವರು ಹೇಗೆ ಸಮತೋಲನ ಕಾಯ್ದುಕೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಕಾಪೆರ್Çರೇಟ್ ವಲಯವು ಉದ್ಯೋಗ ಮತ್ತು ಉದ್ಯೋಗ ನೀತಿಗೆ ಸಂಬಂಧಿಸಿದ ಘೋಷಣೆಗಳ ನಿರೀಕ್ಷೆಯಲ್ಲಿದೆ. ಕಂಪನಿಗಳು ಡಿವಿಡೆಂಡ್ ಡಿಸ್ಟ್ರಿಬ್ಯೂಷನ್ ತೆರಿಗೆಯನ್ನು ರದ್ದುಪಡಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಹೂಡಿಕೆದಾರರು ಸ್ಥಿರ ನೀತಿಗಳ ನಿರೀಕ್ಷೆಯಲ್ಲಿದ್ದಾರೆ. ಹಣಕಾಸು ತಜ್ಞರು ವಿತ್ತೀಯ ಕೊರತೆ ನಿಯಂತ್ರಣಕ್ಕೆ ಕ್ರಮಗಳನ್ನು ಬಯಸುತ್ತಿದ್ದಾರೆ. ರಿಯಾಲ್ಟಿ, ಆಟೊಮೊಬೈಲ್ ವಲಯ ಕೂಡ ನೆರವಿನ ನಿರೀಕ್ಷೆಯಲ್ಲಿವೆ.
ಆದಾಯ ತೆರಿಗೆ: ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 2.5 ಲಕ್ಷ ರೂ.ಗಳಿಂದ ವಿಸ್ತರಿಸಬೇಕು, ತೆರಿಗೆ ದರ ಇಳಿಸಬೇಕು ಎಂಬ ನಿರೀಕ್ಷೆ ಮಧ್ಯಮ ವರ್ಗದ್ದು. ವಾರ್ಷಿಕ 2.5 ಲಕ್ಷ ರೂ.ಗಳಿಂದ 7 ಲಕ್ಷ ರೂ. ತನಕ ಆದಾಯಕ್ಕೆ ತೆರಿಗೆಯನ್ನು ಶೇ.5ಕ್ಕೆ ಹಾಗೂ 7ರಿಂದ 10 ಲಕ್ಷ ರೂ. ಆದಾಯಕ್ಕೆ ತೆರಿಗೆಯನ್ನು ಶೇ.10ಕ್ಕೆ ಇಳಿಸುವ ನಿರೀಕ್ಷೆಯೂ ಇದೆ. 10-20 ಲಕ್ಷ ರೂ. ಆದಾಯಕ್ಕೆ ಶೇ.20ರಷ್ಟು ತೆರಿಗೆ ನಿಗದಿಯಾಗಬಹುದು ಎಂದು ಅಂದಾಜು ಮಾಡಲಾಗಿದೆ.
ಉದ್ಯೋಗ ಸೃಷ್ಟಿ: ಭಾರತ ಕೂಡ ಚೀನಾ ಮಾದರಿಯ ಉತ್ಪಾದನೆ ಮತ್ತು ಬಿಸಿನೆಸ್ ಮಾದರಿ ಅನುಸರಿಸಿದರೆ 2025ರ ವೇಳೆಗೆ 4 ಕೋಟಿಗೂ ಹೆಚ್ಚು ಉದ್ಯೋಗ ಕಲ್ಪಿಸ ಬಹುದು ಎಂದು 2020ರ ಆರ್ಥಿಕ ಸಮೀಕ್ಷೆ ತಿಳಿಸಿದೆ. 2030ರ ವೇಳೆಗೆ 8 ಕೋಟಿ ಉದ್ಯೋಗ ಕಲ್ಪಿಸಬಹುದು ಎಂದೂ ವಿವರಿಸಿದೆ. ಹೀಗಾಗಿ ಬಜೆಟ್‍ನಲ್ಲಿ ರಫ್ತು ಆಧಾರಿತ ಉತ್ಪಾದನೆ ಹೆಚ್ಚಿಸಲು ಹೊಸ ನೀತಿ ಘೋಷಣೆಯಾಗುವ ನಿರೀಕ್ಷೆ ಇದೆ.
ಸಬ್ಸಿಡಿ ಕಡಿತ: ಜಿಡಿಪಿ ಪ್ರಮಾಣ ಕಳೆದ ಕಳೆದ 11 ವರ್ಷಗಳಲ್ಲಿಯೇ ಕನಿಷ್ಠ ಮಟ್ಟದಲ್ಲಿ ಇರುವುದರಿಂದ ವಿತ್ತೀಯ ಕೊರತೆ ನಿಯಂತ್ರಿಸಲು ಸಬ್ಸಿಡಿ ಕಡಿತಕ್ಕೆ ಆರ್ಥಿಕ ಸಮೀಕ್ಷೆ ಸಲಹೆ ನೀಡಿದೆ. ಹೀಗಾಗಿ ಆಹಾರ ಸಬ್ಸಿಡಿ ಕಡಿಮೆ ಮಾಡುವ ಸಂಭವವೂ ಇದೆ.
ಕೃಷಿಗೆ ಒತ್ತು: ಹೆಚ್ಚು ನೀರನ್ನು ಆಶ್ರಯಿಸುವ ಬೆಳೆಗಳ ಬದಲಿಗೆ ವೈವಿಧ್ಯಮಯ ಆಹಾರ ಧಾನ್ಯಗಳ ಉತ್ಪಾದನೆಗೆ ಉತ್ತೇಜನ ನೀಡಲು ಮತ್ತು ರೈತ ಉತ್ಪಾದಕ ಸಂಘಟನೆಗಳಿಗೆ (ಎಫ್‍ಪಿಒ) ಹಣಕಾಸು ನೆರವು ಒದಗಿಸಲು ಮೆಗಾ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ. ಗ್ರಾಮೀಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂಬ ಒತ್ತಾಯವೂ ಇದೆ. ಗ್ರಾಮಾಂತರದಲ್ಲಿ ಬೇಡಿಕೆ, ಖರೀದಿ ಸಾಮಥ್ರ್ಯ ಹೆಚ್ಚಿಸಲು ಪಿಎಂ ಕಿಸಾನ್ ಮತ್ತು ನರೇಗಾಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂಬ ಬೇಡಿಕೆ ಇದೆ.
ಚಕಮಕಿ ನಿರೀಕ್ಷೆ: ಆಯವ್ಯಯ ಮಂಡನೆ ಬೆನ್ನಲ್ಲೇ, ಈ ಬಾರಿಯ ಬಜೆಟ್ ಅಧಿವೇಶನ ಕೇಂದ್ರ ಸರಕಾರ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಮಾತಿನ ಚಕಮಕಿಗೆ ಸಾಕ್ಷಿಯಾಗುವ ಸಾಧ್ಯತೆಯಿದೆ. ಶುಕ್ರವಾರದಿಂದಲೇ ಆರಂಭವಾಗಿರುವ ಬಜೆಟ್ ಅಧಿವೇಶನ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿಜ.31ರಿಂದ ಫೆ. 11ರ ತನಕ ನಡೆದರೆ, ಎರಡನೇ ಹಂತದ ಬಜೆಟ್ ಅಧಿವೇಶನ ಮಾ. 2ರಿಂದ ಆರಂಭವಾಗಿ ಏಪ್ರಿಲ್ 3ಕ್ಕೆ ಮುಕ್ತಾಯವಾಗಲಿದೆ.