ಪ್ರವೀಣ್ ಸೂದ್ ನೂತನ ಪೊಲೀಸ್ ಮಹಾ ನಿರ್ದೇಶಕ
ಮೈಸೂರು

ಪ್ರವೀಣ್ ಸೂದ್ ನೂತನ ಪೊಲೀಸ್ ಮಹಾ ನಿರ್ದೇಶಕ

February 1, 2020

ಬೆಂಗಳೂರು,ಜ.31- ಹಿರಿಯ ಐಪಿಎಸ್ ಅಧಿಕಾರಿ, ಸಿಐಡಿಯ ಡಿಜಿಪಿ ಪ್ರವೀಣ್ ಸೂದ್ ಅವರನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.

ನೇಮಕ ಹೊರಬೀಳುತ್ತಿದ್ದಂತೆ ಪ್ರವೀಣ್ ಸೂದ್ ಅವರು ಡಿಜಿ-ಐಜಿ ಆಗಿ ಅಧಿಕಾರ ಸ್ವೀಕರಿಸಿದರು. ನಿರ್ಗ ಮಿತ ಡಿಜಿ-ಐಜಿ ನೀಲಮಣಿ ಎನ್ ರಾಜು ಅವರು ಅಧಿಕಾರ ಹಸ್ತಾಂತರಿಸಿದರು. ಇಂದು ನೀಲಮಣಿ ಎನ್ ರಾಜು ನಿವೃತ್ತಿಯಾಗಿದ್ದು, ಬೆಳಿಗ್ಗೆ ಅವರಿಗೆ ಬೀಳ್ಕೊಡುಗೆ ನೀಡಲಾಗಿತ್ತು. ಡಿಜಿ ಸ್ಥಾನಕ್ಕೆ ಎ.ಎಂ. ಪ್ರಸಾದ್ ಹಾಗೂ ಪ್ರವೀಣ್ ಸೂದ್ ನಡುವೆ ಭಾರೀ ಪೈಪೋಟಿ ನಡೆದಿತ್ತು. ಹಿರಿತನದ ಆಧಾರದಲ್ಲಿ ಎ.ಎಂ. ಪ್ರಸಾದ್ ಅವರೇ ಡಿಜಿ ಹುದ್ದೆಗೆ ಆಯ್ಕೆಯಾಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.

ಆದರೆ ಅಂತಿಮವಾಗಿ ರಾಜ್ಯ ಸರ್ಕಾರ ಪ್ರವೀಣ್ ಸೂದ್ ಅವರಿಗೆ ಮಣೆ ಹಾಕಿದೆ. 1986ನೇ ಬ್ಯಾಚ್‍ನ ಅಧಿಕಾರಿಯಾಗಿರುವ ಪ್ರವೀಣ್ ಸೂದ್ ಅವರಿಗೆ 4 ವರ್ಷಗಳ ಸೇವಾ ಅವಧಿ ಇದೆ. ಹಿಮಾಚಲ ಪ್ರದೇಶ ಮೂಲದವರಾದ ಸೂದ್ ಅವರು, ಬಿ.ಟೆಕ್ ಹಾಗೂ ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 1989 ಮೈಸೂರು ಎಎಸ್‍ಪಿಯಾಗಿ ವೃತ್ತಿ ಆರಂಭಿಸಿದ್ದ ಅವರು, ಬಳ್ಳಾರಿ, ರಾಯಚೂರಿನಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಅದೇ ರೀತಿ 1999ನಲ್ಲಿ ಮಾರಿಷಸ್ ದೇಶದ ಪೊಲೀಸ್ ಸಲಹೆಗಾರರಾಗಿ 3 ವರ್ಷ ಸೇವೆ ಸಲ್ಲಿಸಿದ್ದಾರೆ. 2004-07 ರಲ್ಲಿ ಮೈಸೂರು ಆಯುಕ್ತರಾಗಿ, 2008ರಲ್ಲಿ ಬೆಂಗಳೂರು ನಗರ ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ. 1996ರಲ್ಲಿ ಮುಖ್ಯಮಂತ್ರಿಗಳ ಪದಕ, 2002ರಲ್ಲಿ ಪೊಲೀಸ್ ಪದಕ, 2011ರಲ್ಲಿ ರಾಷ್ಟ್ರಪತಿ ಪದಕ ಪಡೆದಿದ್ದಾರೆ. 2013-14 ಕರ್ನಾಟಕ ಪೊಲೀಸ್ ಹೌಸಿಂಗ್ ಕಾಪೆರ್Çರೇಷನ್ ವ್ಯವಸ್ಥಾಪಕ ನಿರ್ದೇಶಕರಾಗಿ, 2017ರಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇದೇ ಸಂದರ್ಭದಲ್ಲಿ ಮೂವರು ಐಪಿಎಸ್ ಅಧಿಕಾರಿಗಳನ್ನು ಕೂಡ ಸರ್ಕಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ರೈಲ್ವೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರಿಗೆ ಬಡ್ತಿ ನೀಡಿ, ಬಂಧೀಖಾನೆ ವಿಭಾಗದ ಪೊಲೀಸ್ ಮಹಾನಿರ್ದೇಶಕರಾಗಿ ವರ್ಗಾವಣೆ ಮಾಡಿದೆ. ಬಂಧೀಖಾನೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ ಎನ್.ಎಸ್.ಮೇಘರಿಕ್ ಅವರಿಗೆ ಬಡ್ತಿ ನೀಡಿ ಸಿಐಡಿಯ ಡಿಜಿಪಿಯಾಗಿ ನೇಮಕ ಮಾಡಿದೆ. ಸಂಹವನ ಮತ್ತು ಲಾಜಿಸ್ಟಿಕ್, ಆಧುನೀಕರಣ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಡಾ.ಆರ್.ಪಿ.ಶರ್ಮಾ ಅವರಿಗೆ ಬಡ್ತಿ ನೀಡಿ ರಾಜ್ಯ ಪೊಲೀಸ್ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮತ್ತು ಅಧ್ಯಕ್ಷರಾಗಿ ನೇಮಿಸಲಾಗಿದೆ.

ಡಾ.ಚಂದ್ರಗುಪ್ತ ಮೈಸೂರು ನೂತನ ಪೊಲೀಸ್ ಆಯುಕ್ತ: ಹಾಸನಕ್ಕೆ ನೂತನ ಎಸ್ಪಿ ಶ್ರೀನಿವಾಸಗೌಡ

ಬೆಂಗಳೂರು, ಜ.31-ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಸೇರಿದಂತೆ 23 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. ಕೆ.ಟಿ.ಬಾಲಕೃಷ್ಣ ಅವರನ್ನು ನೇಮಕಾತಿ ವಿಭಾಗದ ಡಿಐಜಿ ಆಗಿ ಬೆಂಗಳೂರಿಗೆ ವರ್ಗಾಯಿಸಲಾಗಿದೆ. ಅವರ ಸ್ಥಳಕ್ಕೆ ಕಾರಾಗೃಹ ವಿಭಾಗದ ಡಿಐಜಿ ಡಾ.ಚಂದ್ರಗುಪ್ತ ಅವರನ್ನು ವರ್ಗಾವಣೆ ಮಾಡಲಾಗಿದೆ. ಕೆ.ಟಿ.ಬಾಲಕೃಷ್ಣ 2019ರ ಜನವರಿ 25ರಂದು ಮೈಸೂರು ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದರು. ಹಾಸನ ಜಿಲ್ಲಾ ಎಸ್ಪಿ ಡಾ.ರಾಂನಿವಾಸ್ ಸೆಪಟ್ ಅವರನ್ನು ಬೆಂಗಳೂರಿನ ಎಸಿಬಿ ಎಸ್ಪಿಯಾಗಿ ವರ್ಗಾಯಿಸಲಾಗಿದ್ದು, ಆಂತರಿಕ ಭದ್ರತಾ ವಿಭಾಗದ ಎಸ್ಪಿ ಆರ್.ಶ್ರೀನಿವಾಸಗೌಡ ಹಾಸನ ಜಿಲ್ಲಾ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳಾದ ಎಡಿಜಿಪಿಗಳಾದ ಡಾ.ಆರ್.ಕೆ.ಶರ್ಮಾ, ಎ.ಜೆ.ಚಕ್ರವರ್ತಿ, ಉಮೇಶ್ ಕುಮಾರ್ ಅವರಿಗೆ ಬಡ್ತಿ ನೀಡಲಾಗಿದೆ.

Translate »