ಮಾಧ್ಯಮಗಳ ಆರೋಗ್ಯ ಬಹುಬೇಗ ಸುಧಾರಿಸಲಿ, ಇಲ್ಲವೇ ಪರ್ಯಾಯ ಪತ್ರಿಕೋದ್ಯಮವೇ ಉದಯಿಸಲಿ
ಮೈಸೂರು

ಮಾಧ್ಯಮಗಳ ಆರೋಗ್ಯ ಬಹುಬೇಗ ಸುಧಾರಿಸಲಿ, ಇಲ್ಲವೇ ಪರ್ಯಾಯ ಪತ್ರಿಕೋದ್ಯಮವೇ ಉದಯಿಸಲಿ

February 1, 2020

ಮೈಸೂರು, ಜ.31(ಪಿಎಂ)- ಡಾ.ಅಂಬೇ ಡ್ಕರ್ ಅಂದು ಪತ್ರಿಕಾರಂಗ ಯಾವುದನ್ನು ಮಾಡಬಾರದು ಎಂದು ಹೇಳಿದ್ದರೋ ಪ್ರಸ್ತುತ ಅದನ್ನೇ ಬಹುಪಾಲು ಮಾಧ್ಯಮ ಗಳು ಮಾಡುತ್ತಿವೆ. ಮಾಧ್ಯಮಗಳ ಆರೋಗ್ಯ ಬಹುಬೇಗ ಸುಧಾರಿಸಲಿ ಇಲ್ಲವೇ ಇದಕ್ಕೆ ಪರ್ಯಾಯ ಪತ್ರಿಕೋದ್ಯಮವೇ ಉದಯಿ ಸಲಿ ಎಂದು ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟರು.

ಮೈಸೂರು ವಿವಿ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತ ರಣಾ ಕೇಂದ್ರದ ವತಿಯಿಂದ `ಮೂಕ್ ನಾಯಕ್ ಪತ್ರಿಕೆ: 100 ವರ್ಷ’ ಕುರಿತಂತೆ ಕೇಂದ್ರದ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿ ಕೊಂಡಿದ್ದ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಅಂಬೇಡ್ಕರ್ ಅಂದು ಪತ್ರಿಕೋದ್ಯಮದ ಧ್ಯೇಯನಿಷ್ಠೆಗಳ ಬಗ್ಗೆ ಹೇಳಿದ್ದರು. ಅವರು ಮಾಧ್ಯಮ ಏನು ಮಾಡಬಾರದೆಂದು ಸೂಚ್ಯ ವಾಗಿ ಹೇಳಿದ್ದರೋ ಇಂದು ಅದನ್ನೇ ಮಾಧ್ಯಮಗಳು ಮಾಡುತ್ತಿವೆ. ಪೂರ್ವಾ ಗ್ರಹಪೀಡಿತ ಅಭಿಪ್ರಾಯ ಹರಡುವುದನ್ನು ಹಲವು ಮಾಧ್ಯಮಗಳು ಮಾಡುತ್ತಿವೆ. ವ್ಯಕ್ತಿ ಪೂಜೆಗೆ ಮಾಧ್ಯಮ ಬಲಿಯಾಗಬಾರದು ಎಂದಿದ್ದರು ಅಂಬೇಡ್ಕರ್. ಆದರೆ ಇಂದು ಅದನ್ನೇ ಮಾಡಲಾಗುತ್ತಿದೆ. ಮುದ್ರಣ ಮಾಧ್ಯಮವಿರಲೀ ಅಥವಾ ಅದು ದೃಶ್ಯ ಮಾಧ್ಯಮವಿರಲೀ ಇಂದು ಬಲವುಳ್ಳವರ ಪರವಾಗಿ ಬಹುತೇಕ ಮಾಧ್ಯಮಗಳು ವಾಲುತ್ತಿವೆ ಎಂದು ವಿಷಾದಿಸಿದರು.

ದನಿ ಇಲ್ಲದವರ ದನಿಯಾಗಬೇಕಿದ್ದ ಹಾಗೂ ನಿಜವಾದ ವಿರೋಧ ಪಕ್ಷದಂತೆ ಕಾರ್ಯ ನಿರ್ವಹಿಸಬೇಕಿದ್ದ ಮಾಧ್ಯಮ ಇಂದು ಓಲೈಕೆಗೆ ಜೋತು ಬಿದ್ದಿದೆ. ಮಾಧ್ಯಮ ಕ್ಷೇತ್ರ ಇಂದು ಮಹಾನ್ ಉದ್ಯಮವಾಗಿದೆ. ಪತ್ರಕರ್ತರು ಮಾಲೀಕತ್ವ ಮಂಡಳಿ ಹೇಳಿ ದ್ದನ್ನು ಬರೆಯುವಂತಿದ್ದರೆ ಮಾತ್ರ ಉದ್ಯೋಗ ಎನ್ನುವಂತಹ ಅಸಹನೀಯ ವಾತಾ ವರಣ ನಿರ್ಮಾಣವಾಗಿದೆ ಎಂದರು.

ಲಾಭವೇ ಗುರಿ ಎನ್ನುವ ಮಾಧ್ಯಮಗಳು ಒಂದು ಕಡೆಯಾದರೆ, ಮೌಲ್ಯಗಳಿದ್ದರೂ ಲಾಭದ ಪ್ರಶ್ನೆ ಬಂದಾಗ ಮೌಲ್ಯವನ್ನು ಪಕ್ಕಕ್ಕೆ ಸರಿಸುವ ಮಾಧ್ಯಮಗಳು ಮತ್ತೊಂದು ಕಡೆ ಯಾಗಿವೆ. ಮನಃಸಾಕ್ಷಿಯುಳ್ಳ ಪತ್ರಕರ್ತರು ಪತ್ರಿಕೋದ್ಯಮ ಬಿಡಬೇಕು ಇಲ್ಲ ತಾವೇ ಬದ ಲಾಗಬೇಕು ಎನ್ನುವ ಪರಿಸ್ಥಿತಿ ಇದ್ದು, ಮಾಲೀ ಕರ ತಾಳಕ್ಕೆ ಕುಣಿದು ತಮ್ಮ ವ್ಯಕ್ತಿತ್ವವನ್ನೇ ಮರೆಯುವ ಪತ್ರಕರ್ತರು ಆಮಿಷಕ್ಕೆ ಒಳಗಾ ಗುತ್ತಾರೆ. ಇನ್ನು ಮನಃಸಾಕ್ಷಿಯನ್ನು ಮರೆತು ಹೊಟ್ಟೆಪಾಡಿಗಾಗಿ ಇರುವವರು ಇದ್ದಾರೆ. ಇಂದು ಕೇಸು ದಾಖಲಾಗುತ್ತದೆ ಎಂದು ಪತ್ರಕರ್ತರು ಬರೆಯುತ್ತಿಲ್ಲ ಎಂದಲ್ಲ. ಬದಲಿಗೆ ಉದ್ಯಮ ನೀತಿ ಇಂದು ಬರೆಯುವ ಕೈಗಳನ್ನು ಕಟ್ಟಿ ಹಾಕಿವೆ ಎಂದು ವಿಶ್ಲೇಷಿಸಿದರು.

ನ್ಯಾಯಯುತ ಹಾಗೂ ಸ್ವಯಂಪ್ರೇರಿತ ಹೋರಾಟಗಳನ್ನು ಹತ್ತಿಕ್ಕುವ ಷಡ್ಯಂತರಕ್ಕೂ ಮಾಧ್ಯಮ ಬಳಸಿಕೊಳ್ಳಲಾಗುತ್ತಿದೆ. ಕಾರ್ಪೊ ರೇಟ್ ಹೌಸ್‍ಗಳ ಕೈಗಳಲ್ಲಿ ಹಲವು ದೃಶ್ಯ ಮಾಧ್ಯಮಗಳ ಹಿಡಿತವಿದ್ದು, ಮುದ್ರಣ ಮಾಧ್ಯಮಗಳು ಇವುಗಳ ಹಿಡಿತಕ್ಕೆ ಸಿಲುಕುವ ಕಾಲ ಬಹಳ ದೂರವಿಲ್ಲ. ಆ ನಂತರ ಪತ್ರ ಕರ್ತರು `ಸ್ಟೆನೋಗ್ರಾಫರ್’ (ಶೀಘ್ರಲಿಪಿಗಾರ) ಕೆಲಸ ಮಾಡಬೇಕಾಗುತ್ತದೆ. ಆಗ ಪತ್ರಕರ್ತರು ವಾಸ್ತವವಾಗಿ ಮೂಕರಾಗಬೇಕಾಗುತ್ತದೆ. ಅಂತಹ ಸ್ಥಿತಿ ಹೇರಲು ಒಂದು ರಾಜ ಕೀಯ ಹಾಗೂ ಸಾಂಸ್ಕøತಿಕ ವ್ಯವಸ್ಥೆ ಪ್ರಯ ತ್ನಿಸುತ್ತಿದೆ ಎಂದು ಕಿಡಿಕಾರಿದರು.

ಭಾರತೀಯ ಸಂವಿಧಾನ ನಮ್ಮ ಎಲ್ಲಾ ಕಾನೂನುಗಳ ತಾಯಿ. ಕಳೆದ 70 ವರ್ಷ ಗಳಿಂದ ಭಾರತೀಯರನ್ನು ಜೋಡಿಸಿರು ವುದು ನಮ್ಮ ಸಂವಿಧಾನ. ಆದರೆ ಇಂದು ಸಂವಿ ಧಾನದ ಪರವಾಗಿ ಮಾತನಾಡುವುದನ್ನೇ ಅಪರಾಧ ಎಂದು ಬಿಂಬಿಸಲಾಗುತ್ತಿದೆ. ಕೇವಲ ಕವಿತೆ ಬರೆದರೆ ಎಫ್‍ಐಆರ್ ದಾಖ ಲಿಸುತ್ತಾರೆ ಎಂದು ಅಚ್ಚರಿ ವ್ಯಕ್ತಪಡಿಸಿದರು.

ಡಾ.ಅಂಬೇಡ್ಕರ್ ಅವರು `ಮೂಕ್ ನಾಯಕ್’ ಪತ್ರಿಕೆ ಆರಂಭಿಸಿದಾಗ ಇದ್ದ ಪರಿಸ್ಥಿತಿ ಇಂದಿಗೂ ಇದೆ. ದಲಿತ ನಾಯ ಕತ್ವ-ಮಾಲೀಕತ್ವದ ಪತ್ರಿಕೋದ್ಯಮ ಈ ಶತಮಾನದಲ್ಲಿಯಾದರೂ ಎಷ್ಟು ಬೆಳೆದಿದೆ ಎಂದು ನೋಡಿದರೆ ಅದು ನಿರಾಶಾದಾಯಕ. ಮೂಕ್ ನಾಯಕ್ ಪತ್ರಿಕೆಯ ಪ್ರಾರಂಭದ ದಿನಗಳನ್ನು ದಲಿತ ಪತ್ರಿಕೋದ್ಯಮದ ಆರಂಭ ಎಂದು ಸಂದರ್ಭ ಸೂಚಕವಾಗಿ ಹೇಳ ಬಹುದೇ ಹೊರತು, ವಾಸ್ತವವಾಗಿ ಅದು ಪರ್ಯಾಯ ಪತ್ರಿಕೋದ್ಯಮವಲ್ಲ ಎಂದರು.

`ಮೂಕ್ ನಾಯಕ್’ ಎಂಬುದು ಅರ್ಥ ಪೂರ್ಣ ಶೀರ್ಷಿಕೆಯಾಗಿದ್ದು, ಇದು ಸಾವಿ ರಾರು ವರ್ಷಗಳ ಸಾಮಾಜಿಕ ಮೂಕ ತನದ ಸೂಚಕ. ಈ ಪತ್ರಿಕೆ ಆರಂಭಿಸುವ ಮೂಲಕ ಅಂಬೇಡ್ಕರ್ ಸಾಮಾಜಿಕ ಮೌಲ್ಯ ಗಳ ಪ್ರತಿಪಾದನೆಗೆ ಚಾಲನೆ ನೀಡಿದರು. ಅಂದು ಬ್ರಾಹ್ಮಣ್ಯವಾದಿ ಸಾಹಿತ್ಯ ಪ್ರಚಾರ ಮಾಡಲು `ಬಾಂಬೆ ಕ್ರಾನಿಕಲ್’ ಹಾಗೂ `ಕೇಸರಿ’ಯಂತಹ ದೊಡ್ಡ ಪತ್ರಿಕೆಗಳು ಇದ್ದವು. ಇವುಗಳ ನಡುವೆ ಅತ್ಯಂತ ಧ್ಯೇಯನಿಷ್ಠೆ ಯಿಂದ ಅಂಬೇಡ್ಕರ್ ತಮ್ಮ ಪತ್ರಿಕೆಗಳನ್ನು ನಡೆಸಿದರು. ಅಂಬೇಡ್ಕರ್ ಅವರು ನಡೆಸಿದ ಪತ್ರಿಕೆಗಳು ಅಲ್ಪ ಕಾಲ ಹಾಗೂ ಅಲ್ಪ ಪ್ರಸಾ ರದ ಮಿತಿ ಹೊಂದಿದ್ದರೂ ಭಾರತೀಯ ಪತ್ರಿಕೋದ್ಯಮಕ್ಕೆ ಒಂದು ಮಾದರಿ ಆಗಿವೆ ಎಂದು ಪ್ರತಿಪಾದಿಸಿದರು. ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರ್ ಉದ್ಘಾಟಿಸಿದರು. ವಿವಿ ಕುಲಸಚಿವ ಪ್ರೊ. ಆರ್.ಶಿವಪ್ಪ, ಡಾ.ಅಂಬೇಡ್ಕರ್ ಕೇಂದ್ರದ ನಿರ್ದೇಶಕ ಪ್ರೊ.ಜೆ.ಸೋಮಶೇಖರ್, ಡಾ. ಅಂಬೇಡ್ಕರ್ ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಬಸವರಾಜ ದೇವನೂರ ಇದ್ದರು.

Translate »