ವಸಂತಮಹಲ್ ಆವರಣದಲ್ಲಿ ಹೊತ್ತಿ ಉರಿದ ಕಾರು
ಮೈಸೂರು

ವಸಂತಮಹಲ್ ಆವರಣದಲ್ಲಿ ಹೊತ್ತಿ ಉರಿದ ಕಾರು

February 27, 2020

ಮೈಸೂರು, ಫೆ.26(ಆರ್‍ಕೆ)- ಮರದ ಕೆಳಗೆ ನೆರಳಲ್ಲಿ ನಿಂತಿದ್ದ ಮಾರುತಿ ಸ್ವಿಫ್ಟ್ ಕಾರೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ಮೈಸೂರಿನ ನಜರ್ ಬಾದ್‍ನ ವಸಂತಮಹಲ್ ಆವರಣದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದೆ.

ಹಾಸನದ ದೇವೇಗೌಡ ನಗರದ ಸರ್ಕಾರಿ ಪ್ರೌಢಶಾಲಾ ಶಿಕ್ಷಕ ಎ.ಎ.ಶಿವಕುಮಾರ್ ಎಂಬುವರಿಗೆ ಸೇರಿದ ಮಾರುತಿ ಸ್ವಿಫ್ಟ್ ಡಿಸೈರ್ (ಕೆಎ 03-ಎಂವಿ 8366) ಕಾರು ಬೆಂಕಿ ಗಾಹುತಿಯಾಗಿದೆ. ಮೈಸೂರಿನ ನಜರ್‍ಬಾದ್ ನಲ್ಲಿರುವ ವಸಂತಮಹಲ್ ಸಭಾಂಗಣದಲ್ಲಿ ಇಂದು ಏರ್ಪಡಿಸಿದ್ದ ‘ಭಾಷಾ ಕೌಶಲ್ಯ ಅಭಿವೃದ್ಧಿ’ ಕುರಿತಾದ ಒಂದು ದಿನದ ವಿಭಾಗ ಮಟ್ಟದ ಕಾರ್ಯಾಗಾರದಲ್ಲಿ ಪಾಲ್ಗೊಳ್ಳ ಲೆಂದು ಶಿವಕುಮಾರ್ ತಮ್ಮ ನಾಲ್ವರು ಸಹೋದ್ಯೋಗಿ ಶಿಕ್ಷಕರೊಂದಿಗೆ ಬೆಳಿಗ್ಗೆ 7.30 ಗಂಟೆಗೆ ಹಾಸನದಿಂದ ಹೊರಟು, ಬೆಳಿಗ್ಗೆ 10.30 ಗಂಟೆಗೆ ಮೈಸೂರು ತಲುಪಿದರು.

ಕಾರನ್ನು ವಸಂತಮಹಲ್ ಆವರಣದ ಮರವೊಂದರ ಕೆಳಗೆ ನೆರಳಿನಲ್ಲಿ ನಿಲ್ಲಿಸಿ ಕಾರ್ಯಾ ಗಾರದಲ್ಲಿ ಪಾಲ್ಗೊಂಡಿದ್ದ ಶಿವಕುಮಾರ್ ಅವರಿಗೆ ಮಧ್ಯಾಹ್ನ 1 ಗಂಟೆಗೆ ತಮ್ಮ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ತಿಳಿಯಿತು. ತಕ್ಷಣ ಎಲ್ಲರೂ ಓಡಿ ಬಂದು ಬಕೆಟ್‍ಗಳಲ್ಲಿ ನೀರು ಎರಚಿದರೂ ಬೆಂಕಿ ಜ್ವಾಲೆ ಕಡಿಮೆಯಾಗಲಿಲ್ಲ. ಕಾರಿನ ಬಾನೆಟ್ ಭಾಗ ಹೊತ್ತಿ ಉರಿಯುತ್ತಿದ್ದು, ನೋಡನೋಡುತ್ತಿದ್ದಂತೆಯೇ ಬೆಂಕಿ ಇಡೀ ಕಾರನ್ನು ಆವರಿಸಿತು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಠಾಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ನಜರ್‍ಬಾದ್ ಠಾಣೆ ಇನ್ಸ್‍ಪೆಕ್ಟರ್ ಜಿ.ಎನ್.ಶ್ರೀಕಾಂತ್ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಮಹಜರು ನಡೆಸಿದರು.

Translate »