ಮೈಸೂರು, ಫೆ.26(ಆರ್‍ಕೆಬಿ)- ಮೈಸೂರು ಜಿಲ್ಲೆಯ ಬಹಳಷ್ಟು ಖಾಸಗಿ ಶಿಕ್ಷಣ ಸಂಸ್ಥೆಗಳು ಕನ್ನಡ ಭಾಷೆಯನ್ನು ಪೂರ್ಣ ನಿರ್ಲಕ್ಷಿಸಿವೆ. ಶಾಲೆಯ ನಾಮಫಲಕ, ವಾಹನ, ರಶೀದಿಗಳೆಲ್ಲ ಆಂಗ್ಲಮಯವಾಗಿವೆ. ಇಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ಸೇನಾ ಪಡೆ ಮೈಸೂರು ಜಿಲ್ಲಾ ಘಟಕ ಬುಧವಾರ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿತು. ಶೇ.60 ಭಾಗ ನಾಮಫಲಕ ಕಡ್ಡಾಯ ವಾಗಿ ಕನ್ನಡದಲ್ಲಿರಬೇಕೆಂಬ ನಿಯಮ ಪಾಲನೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ, ಸಿಬಿಎಸ್‍ಸಿ ಮತ್ತು ಐಸಿಎಸ್‍ಸಿ ಶಾಲೆಗಳ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕು ಎಂದು ಒತ್ತಾಯಿಸಿದರು. ಜೂನ್‍ನಲ್ಲಿ ಶೈಕ್ಷಣಿಕ ವರ್ಷಾರಂಭವಾಗಲಿದೆ. ಅದಕ್ಕೂ ಮುನ್ನವೇ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳು ಶೇ.60 ಭಾಗ ಪ್ರಧಾನವಾಗಿ ಕನ್ನಡ ನಾಮಫಲಕ ಅಳವಡಿಸಬೇಕು. ರಶೀದಿ ಕನ್ನಡದಲ್ಲಿರಬೇಕು. ಜತೆಗೆ ಶುಲ್ಕದ ದರಪಟ್ಟಿ ಕಡ್ಡಾಯವಾಗಿ ಹಾಕಬೇಕೆಂದು ಆದೇಶಿಸುವಂತೆ ಮನವಿ ಮಾಡಿದರು. ಕರ್ನಾಟಕ ಸೇನಾ ಪಡೆ ಮೈಸೂರು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‍ಗೌಡ, ಶಾಂತರಾಜೇ ಅರಸ್, ಶಾಂತಮೂರ್ತಿ, ಆರ್.ವಿಜಯೇಂದ್ರ, ಸಿ.ಕೃಷ್ಣ ಹಾಜರಿದ್ದರು.