ಖಿನ್ನತೆಗೊಳಗಾದ ವಿದ್ಯಾರ್ಥಿನಿ ವೀಡಿಯೋವನ್ನು ಫೇಸ್‍ಬುಕ್‍ಗೆ ಅಪ್‍ಲೋಡ್ ಮಾಡಿ ಆತ್ಮಹತ್ಯೆ
ಮೈಸೂರು

ಖಿನ್ನತೆಗೊಳಗಾದ ವಿದ್ಯಾರ್ಥಿನಿ ವೀಡಿಯೋವನ್ನು ಫೇಸ್‍ಬುಕ್‍ಗೆ ಅಪ್‍ಲೋಡ್ ಮಾಡಿ ಆತ್ಮಹತ್ಯೆ

January 14, 2019

ಮೈಸೂರು: ಹಾಜ ರಾತಿ ಇಲ್ಲದ ಕಾರಣ ಪರೀಕ್ಷೆ ಹಾಲ್ ಟಿಕೆಟ್ ದೊರೆಯದಿದ್ದರಿಂದ ಖಿನ್ನತೆ ಗೊಳಗಾದ ಕಾಲೇಜು ವಿದ್ಯಾ ರ್ಥಿನಿಯೊಬ್ಬಳು ತಾನು ಮಾತ್ರೆ ಸೇವಿಸುತ್ತಿರುವ ವೀಡಿಯೋ ಫೇಸ್‍ಬುಕ್‍ಗೆ ಅಪ್‍ಲೋಡ್ ಮಾಡಿ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ಬನ್ನಿಮಂಟಪ ಸಮೀಪದ ಕಾವೇರಿ ನಗರದಲ್ಲಿ ನಡೆದಿದೆ.

ಅಲ್ಲಿನ ನಿವಾಸಿ ಅಬ್ದುಲ್ ರಫೀಕ್ ಎಂಬುವರ ಪುತ್ರಿ, ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಯಾಸ್ಮಿನ್ ತಾಜ್(18) ಆತ್ಮಹತ್ಯೆಗೆ ಶರಣಾ ದವಳಾಗಿದ್ದು, ಈಕೆ ಅತಿಯಾದ ಮಾತ್ರೆ ಸೇವಿಸುವುದನ್ನು ವೀಡಿಯೋ ರೆಕಾರ್ಡ್ ಮಾಡಿ, ತಾನು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನೆಂಬುದನ್ನು ತಿಳಿಸಿ, ಫೇಸ್‍ಬುಕ್‍ಗೆ ಅಪ್‍ಲೋಡ್ ಮಾಡಿದ್ದಾಳೆ. ಈಕೆ ಅನಾರೋಗ್ಯಕ್ಕೆ ತುತ್ತಾಗಿದ್ದು, ಪೋಷಕರು ಚಿಕಿತ್ಸೆ ಕೊಡಿಸುತ್ತಿದ್ದರು. ಆರೋಗ್ಯ ಸಮಸ್ಯೆಯಿಂದಾಗಿ ಕಾಲೇಜಿಗೆ ಸರಿಯಾಗಿ ಹೋಗದ ಕಾರಣ ಹಾಜರಾತಿ ಕೊರತೆ ಉಂಟಾಗಿದೆ. ಪರೀಕ್ಷೆ ಬರೆಯಲು ಹಾಜರಾತಿ ಕೊರತೆ ಕಾರಣದಿಂದ ಹಾಲ್ ಟಿಕೆಟ್ ನೀಡಲು ಕಾಲೇಜಿನ ಆಡಳಿತ ಮಂಡಳಿ ನಿರಾಕರಿಸಿ, ಆಕೆಯನ್ನು ಸಪ್ಲಿಮೆಂಟರಿ ಪರೀಕ್ಷೆ ಬರೆಯುವಂತೆ ಸೂಚಿಸಿದೆ ಎಂದು ಹೇಳಲಾಗಿದೆ. ಇದರಿಂದ ಖಿನ್ನತೆಗೊಳಗಾಗಿದ್ದ ಆಕೆ, ಅತಿಯಾದ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ವೀಡಿಯೋದಲ್ಲಿ ಏನಿದೆ?: ಆತ್ಮಹತ್ಯೆಗೂ ಮುನ್ನ ಈಕೆ 12 ನಿಮಿಷಗಳ ವೀಡಿಯೋ ರೆಕಾರ್ಡ್ ಮಾಡಿದ್ದಾಳೆ. ಬಿಕ್ಕಳಿಸಿ ಅಳುತ್ತಲೇ ತನ್ನ ಯಾತನೆಯನ್ನು ತಿಳಿಸಿದ್ದಾಳೆ. ತಮಿಳು ಮತ್ತು ಕನ್ನಡದಲ್ಲಿ ಮಾತನಾಡಿರುವ ಆಕೆ, ನನಗೆ ಆರೋಗ್ಯ ಸಮಸ್ಯೆ ಇದೆ. ಏನು ಸಮಸ್ಯೆ ಎಂದು ಗೊತ್ತಾಗುತ್ತಿಲ್ಲ.

ನಾನು ಮೂರು ದಿನ ಕಾಲೇಜಿಗೆ ಹೋಗುತ್ತೇನೆ. ಆಮೇಲೆ ಆರೋಗ್ಯ ಸಮಸ್ಯೆಯಿಂದ ಮನೆಯಲ್ಲೇ ಮಲಗಿರುತ್ತೇನೆ. ಕಾಲೇಜಿನವರು ಇದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ನಾನು ಲಾಯರ್ ಆಗಬೇಕು, ಇಲ್ಲವೇ ದೊಡ್ಡ ನಟಿಯಾಗ ಬೇಕು ಎಂದು ಆಸೆ ಇಟ್ಟುಕೊಂಡಿದ್ದೆ. ಅದೇನೂ ಈಡೇರುತ್ತಿಲ್ಲ. ನನಗೆ ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ಕೊಡುತ್ತಿಲ್ಲ. ಕೇಳಿದರೆ ಇನ್ನೂ ಒಂದೂವರೆ ತಿಂಗಳಿಗೆ ನೀನು ತಪ್ಪಿಸಿಕೊಳ್ಳದೇ ತರಗತಿಗೆ ಹಾಜರಾಗು. ಆಗಲೂ ಹಾಲ್ ಟಿಕೆಟ್ ಸಿಗುವುದಿಲ್ಲ. ಆದರೆ ಸಪ್ಲಿಮೆಂಟರಿ ಪರೀಕ್ಷೆ ಬರೆಯಬಹುದು ಎಂದು ಹೇಳುತ್ತಿದ್ದಾರೆ.

ನಾನು ಸಪ್ಲಿಮೆಂಟರಿ ಪರೀಕ್ಷೆ ಬರೆದು ಏನು ಪ್ರಯೋಜನ? ಅದಕ್ಕೆ ಈ ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ಸಾವಿಗೆ ಯಾರೂ ಕಾರಣರಲ್ಲ. ಇದು ನಾನೇ ತೆಗೆದುಕೊಂಡಿರುವ ನಿರ್ಧಾರ. ನನ್ನ ಸ್ನೇಹಿತೆಯರು ನನ್ನ ಜೊತೆ ಒಂದು ವಾರ ಮಾತನಾಡುತ್ತಾರೆ. ಆಮೇಲೆ ಮಾತನಾಡುವುದಿಲ್ಲ. ನಾನೇನು ತಪ್ಪು ಮಾಡಿದೆ ಗೊತ್ತಾಗುತ್ತಿಲ್ಲ. ಜೀವನದಲ್ಲಿ ನಾನಂದುಕೊಂಡದ್ದು ಯಾವುದೂ ಸಿಗುತ್ತಿಲ್ಲ ಎಂದು ಹೇಳಿರುವ ಆಕೆ, ಕೆಲವು ಹೆಸರುಗಳನ್ನು ಹೇಳಿ ಐ ಮಿಸ್ ಯು ಎಂದು ಹೇಳಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಕ್ಷಮೆ ಕೋರಿದ್ದಾಳೆ. ಈ ಸಂಬಂಧ ಮೇಟಗಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Translate »