ಇಬ್ಬರು ಮಕ್ಕಳೊಂದಿಗೆ ರೈತ ದಂಪತಿ ಆತ್ಮಹತ್ಯೆ
ಮೈಸೂರು

ಇಬ್ಬರು ಮಕ್ಕಳೊಂದಿಗೆ ರೈತ ದಂಪತಿ ಆತ್ಮಹತ್ಯೆ

September 23, 2018

ಪಾಂಡವಪುರ:  ಸಾಲ ಬಾಧೆ ತಾಳಲಾರದೇ ಒಂದೇ ಕುಟುಂಬದ ನಾಲ್ವರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಶನಿವಾರ ತಾಲೂಕಿನ ಸುಂಕಾತೊಣ್ಣೂರು ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆಗೂ ಮುನ್ನ ಪತ್ರ ಬರೆದಿಡಲಾಗಿದೆ. ಗ್ರಾಮದ ಕೆಂಪೇಗೌಡರ ಪುತ್ರ ನಂದೀಶ್(40), ಪತ್ನಿ ಕೋಮಲ (32), ಪುತ್ರಿ ಚಂದನ(13) ಪುತ್ರ ಮನೋಜ್(11) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದವರು.

ಘಟನೆ ವಿವರ: ರೈತ ನಂದೀಶ್, ಗ್ರಾಮದ ಹೊರವಲಯದಲ್ಲಿರುವ ತಮ್ಮ 3 ಎಕರೆ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡು ಪತ್ನಿ ಹಾಗೂ ಮಕ್ಕಳೊಂದಿಗೆ ವಾಸವಾಗಿದ್ದರು. ತಮ್ಮ ಜಮೀನಿನಲ್ಲಿ ವ್ಯವಸಾಯ ಮಾಡಲು ಸುಂಕಾತೊಣ್ಣೂರು ಕಾವೇರಿ ಗ್ರಾಮೀಣ ಬ್ಯಾಂಕ್‍ನಲ್ಲಿ 4.50 ಲಕ್ಷ, ಚಿಕ್ಕಾಡೆ ವಿಜಯಾ ಬ್ಯಾಂಕ್‍ನಲ್ಲಿ ಚಿನ್ನಾಭರಣ ಅಡಮಾನ ಸಾಲ ಹಾಗೂ ಸ್ವಸಹಾಯ ಸಂಘ, ಖಾಸಗಿ ಯವರಿಂದ ಒಟ್ಟು 16 ಲಕ್ಷ ಸೇರಿದಂತೆ 20ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದರು ಎನ್ನಲಾಗಿದೆ. ಅಲ್ಲದೇ ನಂದೀಶ್ ತಮ್ಮ ಜಮೀನಿನಲ್ಲಿ ಕೊರೆಸಿದ್ದ 6 ಬೋರ್‍ವೆಲ್ ಗಳ ಪೈಕಿ 4 ಬೋರ್‍ವೆಲ್‍ಗಳಲ್ಲಿ ನೀರು ಬಂದಿರಲಿಲ್ಲ. ಅಲ್ಲದೇ ಹೈನುಗಾರಿಕೆ ಮಾಡುತ್ತಿದ್ದ ನಂದೀಶ್ ಅವರ ಐದು ಹಸುಗಳು ಸಹ ಮೃತಪಟ್ಟು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಮಾಡಿದ ಸಾಲ ತೀರಿಸಲಾಗದೇ ಮನನೊಂದಿದ್ದ ನಂದೀಶ್ ಇತ್ತೀಚೆಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಜನತಾ ದರ್ಶನದಲ್ಲಿ 2 ಬಾರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ತನ್ನ ಕಷ್ಟಕ್ಕೆ ನೆರವಾಗುವಂತೆ ಮನವಿ ಸಲ್ಲಿಸಿದ್ದರು. ಈ ಸಂಬಂಧ ಕ್ರಮ ವಹಿಸುವಂತೆ ಸಿಎಂ ಡಿಸಿ, ಅವರಿಗೆ ಪತ್ರ ಬರೆದಿದ್ದರು. ನಂತರ ಡಿಸಿ, ತಹಶೀಲ್ದಾರ್ ಅವರಿಗೆ ಸೂಕ್ತ ಗಮನ ಹರಿಸುವಂತೆ ನಿರ್ದೇಶನ ನೀಡಿದ್ದರು. ಯಾರಿಂದಲೂ ಫಲಸಿಗದ ಹಿನ್ನೆಲೆಯಲ್ಲಿ ಸಾಲಗಾರರ ಕಾಟ ತಾಳಲಾರದೇ ತಮ್ಮ 1 ಎಕರೆ ಜಮೀನನ್ನು 12ಲಕ್ಷಕ್ಕೆ ಮಾರಾಟ ಒಪ್ಪಂದ ಮಾಡಿ, ಸ್ವಲ್ಪ ಪ್ರಮಾಣದಲ್ಲಿ ಸಾಲ ತೀರಿಸಿದ್ದರು ಎನ್ನಲಾಗಿದೆ.

ಇಷ್ಟಾದರೂ ಸರ್ಕಾರದಿಂದ ಪರಿಹಾರ ಸಿಗದ ಕಾರಣ ಹಾಗೂ ಸಾಲಗಾರರ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ನಂದೀಶ್ ದಂಪತಿ ಆತ್ಮಹತ್ಯೆಗೆ ನಿರ್ಧರಿಸಿದ್ದರು. ಅಂತೆಯೇ ಶುಕ್ರವಾರ ರಾತ್ರಿ ಆಹಾರದೊಂದಿಗೆ ಕ್ರಿಮಿನಾಶಕ ಬೆರೆಸಿ ಮೊದಲು ಮಕ್ಕಳಿಗೆ ಚಿಕನ್ ಕಬಾಬ್ ಜೊತೆ ಊಟ ಮಾಡಿಸಿದ್ದಾರೆ. ಬಳಿಕ ದಂಪತಿ ಸಹ ವಿಷಮಿಶ್ರಿತ ಊಟ ಸೇವಿಸಿದ್ದಾರೆ. ಕೆಲ ಹೊತ್ತಿನಲ್ಲಿಯೇ ಎಲ್ಲರೂ ಹೊಟ್ಟೆ ಉರಿ, ನೋವಿನಿಂದ ಒದ್ದಾಡಿ, ಎಲ್ಲರೂ ಮನೆಯೊಳಗಿನಿಂದ ಹೊರಬಂದು ಪ್ರಾಣ ಬಿಟ್ಟಿದ್ದಾರೆ. ನಂದೀಶ್ ವಾಸವಿದ್ದ ತೋಟದ ಮನೆ, ಊರಿನಿಂದ  ಸುಮಾರು 1 ಕಿಲೋಮೀಟರ್ ದೂರವಿದ್ದುದರಿಂದ, ಜೊತೆಗೆ ರಾತ್ರಿಯಾಗಿದ್ದರಿಂದ ಯಾರಿಗೂ ನಂದೀಶ್ ಕುಟುಂಬದ ನೋವಿನ ಆಕ್ರಂದನ ಕೇಳಿಸಿಲ್ಲ, ಕಾಣಿಸಿಲ್ಲ.

ಶನಿವಾರ ಬೆಳಿಗ್ಗೆ ಅಕ್ಕಪಕ್ಕದ ರೈತರು ಜಮೀನಿನ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದ್ದು, ತಕ್ಷಣ ಮೇಲುಕೋಟೆ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್, ಪಾಂಡವಪುರ ತಹಶೀಲ್ದಾರ್ ಹನುಮಂತರಾಯಪ್ಪ, ಡಿವೈಎಸ್‍ಪಿ ವಿಶ್ವನಾಥ್, ಸಿಪಿಐ ದೀಪಕ್ ಮತ್ತು ಮೇಲುಕೋಟೆ ಎಸ್.ಐ ಮೋಹನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಪಾಂಡವಪುರ ಸಾರ್ವಜನಿಕ ಆಸ್ಪತ್ರೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು. ಬಳಿಕ ಸುಂಕಾತೊಣ್ಣೂರು ಗ್ರಾಮದಲ್ಲಿ ಪೊಲೀಸ್ ಬಿಗಿಬಂದೋಬಸ್ತ್ ನಡುವೆ ನಾಲ್ವರ ಅಂತ್ಯಕ್ರಿಯೆಯನ್ನು ಒಂದೇ ಚಿತೆಯಲ್ಲಿ ಶನಿವಾರ ಸಂಜೆ ನೆರವೇರಿಸಲಾಯಿತು. ಘಟನೆ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರಿಹಾರಕ್ಕಾಗಿ ಸಂಬಂಧಿಗಳ ಪಟ್ಟು: ಮೃತರ ಕುಟುಂಬಕ್ಕೆ ಜಿಲ್ಲಾಡಳಿತ ಸೂಕ್ತ ಪರಿಹಾರ ಘೋಷಣೆ ಮಾಡಿ, ಪರಿಹಾರದ ಚೆಕ್‍ನ್ನು ಸ್ಥಳದಲ್ಲೇ ವಿತರಿಸಬೇಕು ಎಂದು ಒತ್ತಾಯಿಸಿ ಮೃತರ ಸಂಬಂಧಿಕರು ಪಟ್ಟಣದ ಡಾ.ರಾಜ್‍ಕುಮಾರ್ ವೃತ್ತದಲ್ಲಿ ಶ್ರೀರಂಗಪಟ್ಟಣ-ಜೇವರ್ಗಿ ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ತಹಶೀಲ್ದಾರ್ ಡಿ.ಹನುಮಂತರಾಯಪ್ಪ ಆಗಮಿಸಿ ನಾನು ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಪ್ರಕರಣ ಸಂಬಂಧ ಚರ್ಚಿಸಿದ್ದೇನೆ. ಪೊಲೀಸರ ವರದಿ ಹಾಗೂ ಶವ ಪರೀಕ್ಷೆಯ ವರದಿ ಬಂದ ಬಳಿಕ ಕೃಷಿ ಇಲಾಖೆಗೆ ಕಳುಹಿಸಿ ತ್ವರಿತವಾಗಿ ಪರಿಹಾರ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆಯಲಾಯಿತು.

ಸಚಿವ ಸಿ.ಎಸ್.ಪುಟ್ಟರಾಜು ಭರವಸೆ: ಪಾಂಡವಪುರ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ಭೇಟಿ ಕೊಟ್ಟ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು, ನಂದೀಶ್ ಕುಟುಂಬಕ್ಕೆ ಸಾಂತ್ವನ ಹೇಳಿದರು.

Translate »