ಚಾಮರಾಜನಗರದಲ್ಲಿ ದರ್ಬಾರ್ ಗಣಪತಿಯ ಆಕರ್ಷಕ ಮೆರವಣಿಗೆ
ಚಾಮರಾಜನಗರ

ಚಾಮರಾಜನಗರದಲ್ಲಿ ದರ್ಬಾರ್ ಗಣಪತಿಯ ಆಕರ್ಷಕ ಮೆರವಣಿಗೆ

September 27, 2018

ಚಾಮರಾಜನಗರ: ನಗರದ ರಥದ ಬೀದಿಯಲ್ಲಿ ಶ್ರೀ ವಿದ್ಯಾ ಗಣಪತಿ ಮಂಡಳಿ ಪ್ರತಿಷ್ಠಾಪಿಸಿದ್ದ ಶ್ರೀ ವಿದ್ಯಾಗಣಪತಿಯ ವಿಸರ್ಜನಾ ಮೆರವಣಗೆಯು ನಗರದಲ್ಲಿ ಬುಧವಾರ ನಾನಾ ಕಲಾ ತಂಡಗಳ ಆಕರ್ಷಕ ಮೆರವಣಿಗೆಯೊಂದಿಗೆ ಅದ್ಧೂರಿಯಾಗಿ ಜರುಗಿತು.

ನಗರದ ರಥದ ಬೀದಿಯಲ್ಲಿರುವ ಗುರುನಂಜಶೆಟ್ಟರ ವೃತ್ತದ ಮುಂಭಾಗ ಗಣೇಶ ಹಬ್ಬದ ದಿನದಂದು ಸಿಂಹಾಸನದಲ್ಲಿ ವಿರಾಜಮಾನವಾಗಿ ಕುಳಿತಿದ್ದ ದರ್ಬಾರ್ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಅಂದಿನಿಂದ ಪೂಜಾ ಕಾರ್ಯಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದ್ದವು.

ಚಾಲನೆ: ನಿಗದಿಯಂತೆ ಇಂದು ಬೆಳಿಗ್ಗೆ 10 ಗಂಟೆ ಸಮಯದಲ್ಲಿ ಮೆರವಣಿಗೆ ಆರಂಭವಾಯಿತು. ಖಡಕ್‍ಪುರ ಮೊಹಲ್ಲಾ, ಅಂಬೇಡ್ಕರ್ ಬೀದಿ, ಡೀವಿಯೇಷನ್ ರಸ್ತೆ, ದೇವಾಂಗ ಬೀದಿ, ದೊಡ್ಡ ಅಂಗಡಿ ಬೀದಿ, ಮೇಗಲನಾಯಕರ ಬೀದಿ, ಭಗೀರಥ, ಉಪ್ಪಾರ ಬಡಾವಣೆ, ಬಣಜಿಗರ ಬೀದಿ, ಭ್ರಮರಾಂಬ ಬಡಾವಣೆ, ಕುರುಬರ ಬೀದಿ, ಹಳ್ಳದ ಬೀದಿ ಸೇರಿದಂತೆ ನಾನಾ ಬೀದಿಗಳಲ್ಲಿ ಮೆರವಣಿಗೆ ಸಾಗಿತು.

ಕಲಾ ತಂಡಗಳು ಸೊಬಗು: ಮೆರವಣಿಗೆಯಲ್ಲಿ ನಾನಾ ಕಲಾ ತಂಡಗಳು ಪಾಲ್ಗೊಳ್ಳುವ ಮೂಲಕ ಮೆರವಣಿಗೆಗೆ ಶೋಭೆ ತಂದವು.

ನಂದಿ ಕಂಬ, ಗೊರವರ ಕುಣಿತ, ಕಂಸಾಳೆ, ಡೊಳ್ಳು ಕುಣಿತ, ಮಹಿಳಾ ವೀರಗಾಸೆ, ಪೂಜಾ ಕುಣಿತ, ಸೋಮನ ಕುಣಿತ, ಗಾಡಿಗೊಂಬೆ, ಹುಲಿ ವೇಷಧಾರಿಗಳು, ಚೆಂಡೆ, ವೀರಗಾಸೆ, ಚಿಂಗಾರಿ ಮೇಳ, ವಿವಿಧ ವೇಷಧಾರಿಗಳು, ಮಂಗಳವಾದ್ಯ, ಬ್ಯಾಂಡ್‍ಸೆಟ್ ಸೇರಿದಂತೆ ನಾನಾ ಕಲಾ ತಂಡಗಳು ಪಾಲ್ಗೊಂಡಿದ್ದವು. ತಮ್ಮದೇ ಆದ ಶೈಲಿಯಲ್ಲಿ ಕುಣಿಯುತ್ತಾ ಸಾಗಿದ ಕಲಾ ತಂಡಗಳು ಸಾರ್ವಜನಿಕರನ್ನು ಆಕರ್ಷಿಸಿದ್ದವು.

ತಳಿರು ತೋರಣಗಳಿಂದ ಶೃಂಗಾರ: ಗಣಪತಿ ಮೆರವಣಿಗೆ ಆಗಮನದ ಹಿನ್ನೆಲೆಯಲ್ಲಿ ಎಲ್ಲಾ ಬೀದಿಗಳಲ್ಲಿ ತಳಿರು ತೋರಣಗಳನ್ನು ಕಟ್ಟಲಾಗಿತ್ತು. ಬಣ್ಣ ಬಣ್ಣದ ರಂಗೋಲಿ ಬಿಡಲಾಗಿತ್ತು. ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಗಣಪತಿ ಮೂರ್ತಿಗೆ ಪೂಜೆ ನೀಡಿ ನಮಸ್ಕರಿಸುತ್ತಿದ್ದದ್ದು ಸರ್ವೇ ಸಾಮಾನ್ಯವಾಗಿತ್ತು.

ಬಿಗಿ ಭದ್ರತೆ: ಗಣಪತಿ ಮೆರವಣಿಗೆಯಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ನಗರದ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು. ಎತ್ತರದ ಕಟ್ಟಡದ ಮೇಲೆ ರೈಫಲ್ ದಾರಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಸೂಕ್ಷ್ಮ ಪ್ರದೇಶಗಳು ಎಂದು ಗುರುತಿಸಿದ್ದ ಹಲವು ಕಡೆ ಹೆಚ್ಚಿನ ಪೊಲೀಸರನ್ನು ನೇಮಿಸಲಾಗಿತ್ತು. ಮೆರವಣಿಗೆ ಉದ್ದಕ್ಕೂ ಪೊಲೀಸರು, ಪೊಲೀಸರ ಜೀಪು ಸಾಗಿ ಬಂತು.

ನಾಗರಿಕರು ಪಾಲ್ಗೊಳ್ಳುವಿಕೆ: ಮಾಜಿ ಶಾಸಕ ಸಿ.ಗುರುಸ್ವಾಮಿ, ಜಿಪಂ ಮಾಜಿ ಅಧ್ಯಕ್ಷರಾದ ಎಂ.ರಾಮಚಂದ್ರ, ಜಿ.ನಾಗಶ್ರೀ ಪ್ರತಾಪ್, ಸದಸ್ಯರಾದ ಸಿ.ಎಂ.ಮಂಜುನಾಥ್, ಮಮತಾ, ಗಾಯಿತ್ರಿ, ಆಶಾ, ಸುದರ್ಶನಗೌಡ, ಮಾಜಿ ಅಧ್ಯಕ್ಷರಾದ ಬಾಲಸುಬ್ರಹ್ಮಣ್ಯಂ, ಆರ್.ಸುಂದರ್, ಮುಖಂಡರಾದ ಗಣೇಶ್ ದೀಕ್ಷಿತ್, ಮಂಜುನಾಥ ಗೌಡ, ಸುರೇಶ್‍ನಾಯ್ಕ, ಮಹದೇವಪ್ರಸಾದ್, ಬಂಗಾರಸ್ವಾಮಿ, ಶಿವಣ್ಣ, ಮೂಡ್ಲುಪುರ ನಂದೀಶ್, ಕೃಷ್ಣಪ್ಪ, ಶ್ರವೇಶ್, ಹೇಮಂತ್, ನವೀನ್ ಸೇರಿದಂತೆ ನೂರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಖುದ್ದು ಹಾಜರು: ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ, ಉಪವಿಭಾಗಾಧಿಕಾರಿ ಫೌಜಿಯಾ ತರನ್ನುಮ್, ಆಗಾಗ್ಗೆ ಮೆರವಣಿಗೆ ಸ್ಥಳಕ್ಕೆ ಕಾನೂನು ಸುವ್ಯವಸ್ಥೆಯ ಎಚ್ಚರಿಕೆ ವಹಸಿದ್ದರು.

Translate »