ಹಾಸನ ಜಿಲ್ಲಾದ್ಯಂತ ಭಾರತ್ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ
ಹಾಸನ

ಹಾಸನ ಜಿಲ್ಲಾದ್ಯಂತ ಭಾರತ್ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ

September 11, 2018

ಹಾಸನ: ತೈಲಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್‍ಗೆ ಮಾಜಿ ಪ್ರಧಾನಿಗಳ ತವರು ಜಿಲ್ಲೆಯಲ್ಲಿ ಮಿಶ್ರ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಬಂದ್ ಹಿನ್ನೆಲೆ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರತ್ಯೇಕ ಪ್ರತಿಭಟನೆ ನಡೆಸಿದರೆ, ವಿವಿಧ ಸಂಘಟನೆಗಳು ಬಂದ್‍ಗೆ ಬೆಂಬಲ ಸೂಚಿಸಿ ಕೇಂದ್ರ ಸರ್ಕಾರದ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದವು. ಹಾಸನ ನಗರ, ಆಲೂರು, ಸಕಲೇಶಪುರ, ಬೇಲೂರು ತಾಲೂಕುಗಳಲ್ಲಿ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೆ, ಚನ್ನರಾಯಪಟ್ಟಣದಲ್ಲಿ ನೀರಸ, ಹೊಳೆನರಸೀಪುರದಲ್ಲಿ ಭಾಗಶಃ ಬಂದ್ ಯಶಸ್ವಿಯಾಯಿತು. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಬಂದ್‍ಗೆ ಮಿಶ್ರಪ್ರತಿಕ್ರಿಯೆ ಕಂಡು ಬಂತು.

ಸಾರಿಗೆ ಸ್ತಬ್ಧ: ಬಂದ್‍ಗೆ ಸರ್ಕಾರವೇ ಬೆಂಬಲ ಸೂಚಿಸಿದ್ದರಿಂದ ಜಿಲ್ಲೆಯಾದ್ಯಂತ ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಲಾರಿ ಮಾಲೀಕರು, ಆಟೋ ಚಾಲಕರು ಬೆಂಬಲ ವ್ಯಕ್ತಪಡಿಸಿದ್ದರಿಂದ ವಾಹನ ಸಂಚಾರ ವಿರಳವಾಗಿತ್ತು. ಬಸ್ ನಿಲ್ದಾಣದಲ್ಲಿ ಬಸ್ ಸಂಚಾರವಿಲ್ಲದ ಪರಿಣಾಮ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದ್ದವು.

ಪರದಾಡಿದ ಪ್ರಯಾಣಿಕರು: ವೈಯಕ್ತಿಕ ವಾಹನಗಳನ್ನ ಹೊರತುಪಡಿಸಿದರೆ ಉಳಿದೆಲ್ಲಾ ಸಾರ್ವಜನಿಕ ಸೇವೆ ಒದಗಿಸುವ ಖಾಸಗಿ, ಸರ್ಕಾರಿ ವಾಹನಗಳು ರಸ್ತೆಗಿಳಿಯಲಿಲ್ಲ. ಕೆಲ ಆಟೋಗಳು ಮಾತ್ರ ತುರ್ತು ಪರಿಸ್ಥಿತಿಗೆ ಅನುಗುಣವಾಗಿ ಸಂಚರಿಸಿದವು. ಕೆಲವರಿಗಂತೂ ಇಂದು ಬಂದ್ ವಿಚಾರವೇ ತಿಳಿದಿರಲಿಲ್ಲ. ಹಾಗಾಗಿ ದೂರ ದೂರುಗಳಿಗೆ ತೆರಳಲು ಬಂದ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಕಾದು ಕುಳಿತ್ತಿದ್ದು ಸಾಮಾನ್ಯವಾಗಿತ್ತು.

ಶಾಲಾ-ಕಾಲೇಜುಗಳಿಗೆ ರಜೆ: ಬಂದ್‍ನಿಂದ ವಿದ್ಯಾರ್ಥಿಗಳಿಗೆ ಯಾವುದೇ ತೊಂದೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದರಿಂದ ಶಿಕ್ಷಣ ಸಂಸ್ಥೆಗಳ ಬಾಗಿಲು ಮುಚ್ಚಿದ್ದವು.
ಪ್ರತಿಭಟನೆ, ಪ್ರತಿಕೃತಿ ದಹನ: ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರತ್ಯೇಕ ಪ್ರತಿಭಟನೆ, ಮೆರವಣಿಗೆ ನಡೆಸಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿವಿಧ ಸಂಘಟನೆಗಳು ಬಂದ್‍ಗೆ ಬೆಂಬಲ ಸೂಚಿಸಿ ಪ್ರತಿಭಟಿಸಿದರು. ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿ ಕೇಂದ್ರದ ಪ್ರತಿಕೃತಿ ದಹಿಸಿದರೆ, ವಿವಿಧ ಸಂಘಟನೆಗಳು ಟೈರ್‍ಗೆ ಬೆಂಕಿ ಹಾಕಿದರು.

ವ್ಯಾಪಾರ- ವಹಿವಾಟು: ಜಿಲ್ಲೆಯ ಎಲ್ಲೆಡೆ ಬಂದ್ ಬೆಂಬಲ ಸೂಚಿಸಿ ವರ್ತಕರು, ಬೀದಿಬದಿ ವ್ಯಾಪಾರಿಗಳು ಅಂಗಡಿಮುಂಗಟ್ಟುಗಳನ್ನು ಬಂದ್ ಮಾಡಿದರೆ, ಕೆಲವರು ಗೌರಿ-ಗಣೇಶ ಹಬ್ಬದ ಹಿನ್ನೆಲೆ ಮಳಿಗೆ ತೆರೆದು ವ್ಯಾಪಾರ ನಡೆಸಿದರು. ಕೆಲವರು ಬಂದ್‍ಗೆ ಬೆಂಬಲವಿಲ್ಲ ಎಂಬ ನಾಮಫಲಕ ತೂಗು ಹಾಕಿ ವ್ಯಾಪಾರ ನಡೆಸಿದರು.

ಬಿಗಿ ಬಂದೋಬಸ್ತ್: ಜಿಲ್ಲೆ, ತಾಲೂಕುಗಳ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಬಿಗಿ ಪೆÇಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಇದರಿಂದ ಅಹಿತಕರ ಘಟನೆ ನಡೆದಿಲ್ಲ.

ಮಧ್ಯಾಹ್ನ ನಂತರ ಸಹಜ ಸ್ಥಿತಿ: ಬೆಳಿಗ್ಗೆ ಆರಂಭವಾದ ಬಂದ್ ಮಧ್ಯಾಹ್ನ ವೇಳೆಗೆ ಮುಕ್ತಾಯವಾಗಿ, ಜಿಲ್ಲೆಯ ಜನ-ಜೀವನ, ವ್ಯಾಪಾರ-ವಹಿವಾಟು, ಸಂಚಾರ ಸಹಜ ಸ್ಥಿತಿಗೆ ಮರಳಿತು. ಗೌರಿ-ಗಣೇಶ ಹಬ್ಬದ ಸಮಯವಾದ್ದರಿಂದ ಬಂದ್ ಸಂಪೂರ್ಣ ಯಶಸ್ವಿಯಾಗಲಿಲ್ಲ.

ವಿವಿಧ ಸಂಘಟನೆಗಳ ಬೆಂಬಲ: ಜಿಲ್ಲಾ ಲಾರಿ ಮಾಲೀಕರ ಸಂಘದ ಕಾರ್ಯಕರ್ತರು ಅಧ್ಯಕ್ಷ ಅಣ್ಣಾಜಿ ನೇತೃತ್ವದಲ್ಲಿ ಪ್ರತಿಭಟಿಸಿ ಕೇಂದ್ರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಗರದ ಬಿಎಂ ರಸ್ತೆ, ಎನ್‍ಆರ್ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ತೈಲಬೆಲೆ ಏರಿಕೆ ಖಂಡಿಸಿದರು. ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹೇಮಾವತಿ ಪ್ರತಿಮೆಯಿಂದ ಎನ್‍ಆರ್ ವೃತ್ತಕ್ಕೆ ಮೆರವಣಿಗೆ ತೆರಳಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿ ಕೇಂದ್ರದ ಪ್ರತಿಕೃತಿ ದಹಿಸಿದರು. ಈ ವೇಳೆ ವೇದಿಕೆ ಜಿಲ್ಲಾಧ್ಯಕ್ಷ ಸಿ.ಡಿ.ಮನು ಕುಮಾರ್ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ಸೀತಾರಾಮು, ಹರೀಶ್‍ಗೌಡ, ರಫೀಕ್ ದರ್ಬಾರ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಅಭಿಗೌಡ ಇತರರಿದ್ದರು.

ನವ ಕರ್ನಾಟಕ ಯುವ ಶಕ್ತಿಯಿಂದಲೂ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿ ತೆರಳಿ ಆಕ್ರೋಶ ವ್ಯಕ್ತಪಡಿಸಲಾಯಿತು. ಸಂಘಟನೆ ರಾಜ್ಯ ಕಾರ್ಯದರ್ಶಿ ಡಿ. ಶಂಕರಗೌಡ, ಜಿಲ್ಲಾಧ್ಯಕ್ಷ ಸಂತೋಷ್‍ಗೌಡ, ಪ್ರಧಾನ ಕಾರ್ಯದರ್ಶಿ ಚನ್ನಕೇಶವ ಇತರರು ಭಾಗವಹಿಸಿದ್ದರು. ಸಿಪಿಐ(ಎಂ) ಮತ್ತು ಇತರೆ ಎಡಪಕ್ಷಗಳು ದೇಶವ್ಯಾಪಿ ‘ಅಖಿಲ ಭಾರತ ಹರತಾಳ’ ಶೀರ್ಷಿಕೆಯಡಿ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದವು. ಸಿಪಿಐಎಂ ಕಾರ್ಯಕರ್ತರು, ಬೆಂಬಲಿತರು ಪ್ರತಿಭಟಿಸಿದರು. ನಗರದ ಹೇಮಾವತಿ ಪ್ರತಿಮೆಯಿಂದ ಹೊರಟು ಪ್ರಮುಖ ಸ್ಥಳಗಳಲ್ಲಿ ಮೆರವಣಿಗೆ ಸಾಗಿದರು. ಈ ವೇಳೆ ಮುಖಂಡರಾದ ಧರ್ಮೇಶ್, ಎಂ.ಸಿ.ಡೋಂಗ್ರೆ, ಜಿ.ಓ.ಮಹಾಂತಪ್ಪ, ನವೀನಕುಮಾರ್, ಆಶಾ ಇತರರಿದ್ದರು.

Translate »