ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮದ್ದೂರಲ್ಲಿ ಸರಣಿ ಪ್ರತಿಭಟನೆ
ಮಂಡ್ಯ

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮದ್ದೂರಲ್ಲಿ ಸರಣಿ ಪ್ರತಿಭಟನೆ

December 17, 2019

* 4ನೇ ಶನಿವಾರ ರಜೆ ರದ್ದು: ವಕೀಲರಿಂದ ಕಲಾಪ ಬಹಿಷ್ಕಾರ

* ಭತ್ತ ಖರೀದಿ ಕೇಂದ್ರ ತೆರೆಯಲು ರೈತ ಸಂಘ ಒತ್ತಾಯ

ಮದ್ದೂರು, ಡಿ.16- ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮದ್ದೂರಿನ ವಿವಿಧೆಡೆ ವಕೀಲರು, ಕಬ್ಬು ಬೆಳೆಗಾರರು ಹಾಗೂ ರೈತ ಸಂಘದ ಕಾರ್ಯಕರ್ತರು ಸೋಮವಾರ ಸರಣಿ ಪ್ರತಿ ಭಟನೆ ನಡೆಸಿದ ಬಗ್ಗೆ ವರದಿಯಾಗಿದೆ.

ವಕೀಲರು: ನಾಲ್ಕನೇ ಶನಿವಾರ ರಜೆ ರದ್ದು ಮಾಡಿರುವ ರಾಜ್ಯ ಸರ್ಕಾರ ಕ್ರಮ ಖಂಡಿಸಿ ವಕೀಲರು ಸೋಮವಾರ ನ್ಯಾಯಾ ಲಯದ ಕಾರ್ಯ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ಮಾಡಿದರು.

ಸರ್ಕಾರ ಎಂದಿನಂತೆ ನಾಲ್ಕನೇ ಶನಿ ವಾರ ರಜೆ ಇರುವಂತೆ ಆದೇಶ ಮಾಡ ಬೇಕು. ಉಚ್ಚ ನ್ಯಾಯಾಲಯದಲ್ಲಿ ತಿಂಗಳ ಎಲ್ಲಾ ಶನಿವಾರ ರಜೆಯಿದೆ. ಈ ಹಿನ್ನೆಲೆ ಯಲ್ಲಿ ಕೆಳ ನ್ಯಾಯಾಲಗಳಿಗೂ ನಾಲ್ಕನೇ ಶನಿವಾರ ರಜೆ ಘೋಷಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ವಕೀಲರ ಸಂಘದ ಅಧ್ಯಕ್ಷ ಜಿ.ಎನ್.ಸತ್ಯ, ವಕೀಲರಾದ ರಾಮಕೃಷ್ಣೇಗೌಡ, ಪ್ರಶಾಂತ, ರಮೇಶ್, ಮಹೇಶ್, ಗೋಪಿ, ಯೋಗಾ ನಂದ ಇತರರು ಇದ್ದರು.

ರೈತ ಸಂಘ: ಭತ್ತ ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ತಾಲೂಕಿನ ಕೊಪ್ಪದಲ್ಲಿ ಮದ್ದೂರು-ನಾಗಮಂಗಲ ಹೆದ್ದಾರಿ ಸಂಚಾರ ತಡೆದು ಸೋಮವಾರ ಪ್ರತಿಭಟನೆ ನಡೆಸಿದರು.

ಕೂಡಲೇ ತಾಲೂಕು ಆಡಳಿತ ಭತ್ತ ಖರೀದಿ ಕೇಂದ್ರ ತೆರೆದು ರೈತರ ಹಿತ ಕಾಯ ಬೇಕು ಎಂದು ಒತ್ತಾಯಿಸಿ ತಾಲೂಕು ಮತ್ತು ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ  ಮುಖಂಡ ಕೀಳಘಟ್ಟ ನಂಜುಂಡಯ್ಯ ಮಾತನಾಡಿ, ತಾಲೂಕಿನಾ ದ್ಯಂತ ಭತ್ತ ಹಾಗೂ ರಾಗಿ ಕಟಾವು ಕಾರ್ಯ ಪ್ರಗತಿಯಲ್ಲಿದ್ದು, ತಾಲೂಕು ಆಡಳಿತ ದಿಂದ ಖರೀದಿ ಕೇಂದ್ರ ತೆರೆಯದ ಕಾರಣ, ಮಧ್ಯವರ್ತಿಗಳ ಹಾವಳಿ ಮಿತಿಮೀರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಮಧ್ಯವರ್ತಿಗಳು ಕಡಿಮೆ ಬೆಲೆಗೆ ಭತ್ತ ಹಾಗೂ ರಾಗಿ ಖರೀದಿಸು ತ್ತಿದ್ದು, ಇದರಿಂದಾಗಿ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಈಗಾಗಲೇ ಸರ್ಕಾರ ಕಿಂಟಾಲ್ ಭತ್ತಕ್ಕೆ 1800, ರಾಗಿಗೆ 2800 ಬೆಂಬಲ ಬೆಲೆ ಘೋಷಿಸಿದ್ದರೂ, ಮಧ್ಯವರ್ತಿಗಳು ಕಡಿಮೆ ಬೆಲೆಗೆ ರೈತ ರಿಂದ ಖರೀದಿ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕೂಡಲೇ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಪ್ರತಿ ಗ್ರಾಪಂ ವ್ಯಾಪ್ತಿ ಗಳಲ್ಲಿ ಭತ್ತ ಖರೀದಿ ಕೇಂದ್ರ ತೆರೆಯುವ ಮೂಲಕ ರೈತರ ಹಿತ ಕಾಯಬೇಕು, ತಪ್ಪಿದ್ದಲ್ಲಿ ಜಾನುವಾರುಗಳ ಸಮೇತ ಮದ್ದೂರಿನಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗು ವುದು ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ರೈತ ಮಖಂಡರಾದ ರಾಮಣ್ಣ, ರಾಮಕೃಷ್ಣಯ್ಯ ಶಿವರಾಮು, ತಮ್ಮಯ್ಯ, ಉಮೇಶ್, ಅನಿಲ್, ಕುಶಾಲ್ ಭಾಗವಹಿಸಿದ್ದರು.

ಕಬ್ಬು ಕಟಾವು, ಸಾಗಾಣಿಕೆ ವೆಚ್ಚ ಹೆಚ್ಚಳ: ರೈತರಿಂದ ಕಾರ್ಖಾನೆಗೆ ಮುತ್ತಿಗೆ

ಮದ್ದೂರು, ಡಿ.16- ಕಬ್ಬು ಕಟಾವು ಹಾಗೂ ಸಾಗಾಣಿಕೆ ವೆಚ್ಚವನ್ನು ಏಕಾಏಕಿ ಹೆಚ್ಚಳ ಮಾಡಿರುವ ತಾಲೂಕಿನ ಕೊಪ್ಪದ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಕಬ್ಬು ಬೆಳೆಗಾರರು ಹಾಗೂ ರೈತ ಸಂಘದ ಕಾರ್ಯ ಕರ್ತರು ಕಾರ್ಖಾನೆಗೆ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟನೆ ನಡೆಸಿದರು.

ಕಾರ್ಖಾನೆಯ ಬಳಿ ಜಮಾಯಿಸಿದ ಕಬ್ಬು ಬೆಳೆಗಾರರು ಹಾಗೂ ರೈತ ಸಂಘದ ಕಾರ್ಯಕರ್ತರು ಜಿಲ್ಲಾಡಳಿತ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಜಿಲ್ಲೆಯ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇದೀಗ ಕಬ್ಬು ಕಟಾವು ಹಾಗೂ ಸಾಗಾಣಿಕಾ ವೆಚ್ಚ ಹೆಚ್ಚಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೂಡಲೇ ಹೆಚ್ಚಳವಾಗಿರುವ ದರ ಕಡಿಮೆ ಮಾಡಬೇಕೆಂದು ಒತ್ತಾಯಿಸಿದ ಪ್ರತಿಭಟನಾಕಾರರು, ದರ ಕಡಿಮೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಕಾರ್ಖಾನೆ ಆವರಣದಲ್ಲಿ ಉಗ್ರ ಪ್ರತಿಭಟನೆಗೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕಾರ್ಖಾನೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಧೀಂದ್ರ ಹಾಗೂ ಕಬ್ಬು ವಿಭಾಗದ ಉಪ ವ್ಯವಸ್ಥಾಪಕ ಚಂದ್ರೇಗೌಡ ಮಾತನಾಡಿ, ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ರೈತ ಮುಖಂಡ ನಂಜುಂಡಯ್ಯ, ಉಮೇಶ್, ರಾಮಕೃಷ್ಣಯ್ಯ, ಪುಟ್ಟಸ್ವಾಮಿ, ಶಂಕರ್, ಶಿವರಾಮು, ರಾಮಣ್ಣ, ಅನಿಲ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

 

 

 

Translate »