ಪರಮಾತ್ಮನ ಅನುಗ್ರಹಕ್ಕೆ ಸೇವೆ ಸಾಧನ
ಮೈಸೂರು

ಪರಮಾತ್ಮನ ಅನುಗ್ರಹಕ್ಕೆ ಸೇವೆ ಸಾಧನ

August 2, 2019

ಮೈಸೂರು, ಆ.1(ಎಂಕೆ)- ಪ್ರತಿಯೊಬ್ಬರೂ ಪರಮಾತ್ಮ ನಲ್ಲಿ ನಂಬಿಕೆಯಿಟ್ಟು ತಮ್ಮ ತಮ್ಮ ಕರ್ತವ್ಯ ಮಾಡಬೇಕು. ಪೂಜೆ, ಧ್ಯಾನ, ಸೇವೆ ಭಗವಂತನನ್ನು ಕಾಣುವ ಮಾರ್ಗಗಳು ಎಂದು ಉಡುಪಿಯ ಪೇಜಾವರ ಮಠದ ಶ್ರೀಗಳಾದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದರು.

ಮೈಸೂರಿನ ಸರಸ್ವತಿಪುರಂನಲ್ಲಿರುವ ಕೃಷ್ಣಧಾಮದಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯ ವ್ರತ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಅವರು, ದೇವರಲ್ಲಿ ಭಕ್ತಿ ಮತ್ತು ಮಾಡುವ ಕಾಯಕದಲ್ಲಿ ನಿಷ್ಠೆ ಅತೀ ಮುಖ್ಯವಾದುದು. ಇವತ್ತು ಜಪ-ತಪ ಮಾಡದೇ ಊಟಮಾಡಿ, ಹರಟೆ ಹೊಡೆಯುವವರೇ ಹೆಚ್ಚು ಎಂದು ಹೇಳಿದರು.

ಪರಮಾತ್ಮನಲ್ಲಿ ಅನುಗ್ರಹವನ್ನು ಪಡೆಯಬೇಕಾದರೆ ಮುಖ್ಯವಾಗಿ ಸೇವೆ ಮಾಡಬೇಕು. ಎಲ್ಲರೂ ಒಂದೇ ಎಂದು ತಿಳಿದು ಸಕಲ ಪ್ರಾಣಿಗಳನ್ನು ಪ್ರೀತಿಸುವುದರ ಜತೆಗೆ ರಕ್ಷಣೆ ಯನ್ನು ಮಾಡಬೇಕು. ಗೋವು ಎಂತಹ ಶ್ರೇಷ್ಠ ಪ್ರಾಣಿ. ಅದನ್ನು ಕೊಲ್ಲುವುದು ಸಂಪೂರ್ಣವಾಗಿ ನಿಲ್ಲಬೇಕು ಎಂದರು.

ದೇವರಲ್ಲಿ ಆಸ್ತಿ, ಅಂತಸ್ತು ಬೇಕೆಂದು ಕೇಳಿಕೊಳ್ಳುತ್ತವೆ. ಯಾರಾದರೂ ಮತ್ತೊಬ್ಬರ ಕಷ್ಟಗಳನ್ನು ನನಗೆ ಕೊಡು ಎಂದು ಕೇಳಿಕೊಳ್ಳುತ್ತಾರೆಯೇ. ಪ್ರಾಣಿಗಳನ್ನಾದರೂ ಸಾಕಿ-ಸಲುಹಿ  ಭಗವಂತನನ್ನು ಕಾಣಬೇಕು. ವೃತ್ತಿಯೂ ದೇವರ ಪೂಜೆಯಂತೆ. ಮಾಡುವ ಕೆಲಸ ನಿಷ್ಠೆಯಿಂದ ಪರೋಪಕಾರವಾಗಿರಬೇಕು ಎಂದು ಸಲಹೆ ನೀಡಿದರು.

ಚಾತುರ್ಮಾಸ್ಯ ವ್ರತ ಸಮಾರಂಭದಲ್ಲಿ ಭಕ್ತರು ನೀಡುತ್ತಿ ರುವ ಕಾಣಿಕೆಯನ್ನು ಉಡುಪಿಯ ಮಧ್ವಾಚಾರ್ಯರ ಜನ್ಮಸ್ಥಳ ಪಾಜಕದಲ್ಲಿರುವ ಆನಂದತೀರ್ಥ ವಿದ್ಯಾಲಯ ಹಾಗೂ ಗುರುಕುಲ ಆಶ್ರಮಕ್ಕೆ ಬಳಸಿಕೊಳ್ಳಲಾಗುತ್ತದೆ. ಗುರುಕುಲ ಆಶ್ರಮದಲ್ಲಿ ಎಲ್ಲಾ ಧರ್ಮಿಯರಿಗೂ ಆದ್ಯತೆ ಯನ್ನು ನೀಡಲಾಗಿದೆ. ಧಾರ್ಮಿಕ ಶಿಕ್ಷಣ, ಸಂಸ್ಕøತಿ ಮತ್ತು ಸಂಸ್ಕಾರವನ್ನು ಕಲಿಸಲಾಗುತ್ತದೆ. ಅಲ್ಲದೆ ನೀಲಾವರ ಗೋ ಶಾಲೆಯಲ್ಲಿ ರಕ್ಷಣೆ ಮಾಡಿರುವ 1800 ಗೋವುಗಳ ಪಾಲನೆಯನ್ನು ಮಾಡಲಾಗುತ್ತದೆ. ಇಂದಿಗೂ ಕಸಾಯಿ ಖಾನೆಗೆ ಕೊಂಡೊಯ್ಯುವ ಗೋವುಗಳನ್ನು ರಕ್ಷಿಸಿ ಸಾಕ ಲಾಗುತ್ತಿದೆ. ಇವುಗಳಲ್ಲಿ 300 ಹಸುಗಳು ಮಾತ್ರ ಹಾಲನ್ನು ನೀಡುತ್ತವೆ  ಎಂದು ಹೇಳಿದರು.

ಗೋಪಾಲದಾಸರ ಕುರಿತು ವಿಶ್ಲೇಷಣೆ ನೀಡಿದ ವಿದ್ವಾಂಸ ಕಿರಣಾಚಾರ್ಯ ಮಾತನಾಡಿ, ಭಗವಂತ ಸಜ್ಜನರ ಹಿತ ವನ್ನು ಕಾಯುತ್ತಾನೆ. ಕಲ್ಪವೃಕ್ಷಕ್ಕಿಂತಲೂ ಶ್ರೇಷ್ಠನಾಗಿದ್ದು, ಬೇಡಿದ ವರವನ್ನು ಕರುಣಿಸುವ ಮುನ್ನಾ ಮನುಷ್ಯನಿಗೆ ಅದು ಎಷ್ಟು ಒಳಿತಾಗುವುದು ಎಂಬುದರ ಅರಿವು ನೀಡುತ್ತಾನೆ ಎಂದರು.

ಆತನನ್ನು ನಂಬಿದವರನ್ನು ಎಂದೂ ಕೈ ಬಿಡುವುದಿಲ್ಲ. ಸೂಕ್ತ ಸಮಯಕ್ಕೆ ವರವನ್ನು ನೀಡುವ ಮೂಲಕ ರಕ್ಷಿಸು ತ್ತಾನೆ. ದೇಹ ಚನ್ನಾಗಿದ್ದರೆ ಮಾತ್ರ ಧ್ಯಾನದ ಮೂಲಕ ದೇವರನ್ನು ಒಲಿಸಿಕೊಳ್ಳಲು ಸಾಧ್ಯ. ಹಾಗಾಗಿ, ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಬೇಕು ಎಂದು ಹೇಳಿದರು.

ನದಿ ಹರಿಯುತ್ತಲೇ ಇರುತ್ತದೆ. ನಾವು ಅದರಲ್ಲಿ ಮುಳುಗಿ ನಮ್ಮ ಪಾಪವನ್ನು ತೊಳೆದುಕೊಳ್ಳಬೇಕು. ಹಾಗೇ, ಭಗ ವಂತನೊಳಗೆ ಲೀನರಾಗದಿದ್ದರೆ ನಮ್ಮ ಪಾಪ ಪರಿಹಾರ ವಾಗುವುದಿಲ್ಲ. ಭಗವಂತನನ್ನು ಭಕ್ತಿಯಿಂದ ಒಲಿಸಿಕೊಳ್ಳ ಬೇಕು, ಆತನ ಸೇವೆ ಮಾಡಬೇಕು ಎಂದು ತಿಳಿಸಿದರು.

ಇದೇ ವೇಳೆ ನಡೆದ ‘ದಾಸ ವೈಭವ’ ಗಾನಸಿರಿ ಕಾರ್ಯ ಕ್ರಮದಲ್ಲಿ ಗಾಯಕರಾದ ರಾಜೇಶ್ ಪಡಿಯಾರ್, ವೈಷ್ಣವಿ ದತ್ತ ಅವರು, ಗೋಪಾಲದಾಸರು ರಚಿತ ‘ಆವ ರೋಗವು ಎನಗೆ ದೇವಾ ಧನ್ವಂತರಿ’, ‘ಏನ ಬೇಡಲಿ ನಾನು ನಿನ್ನ ಬಳಿಗೆ ಬಂದು’, ‘ಪಾರ್ವತಿ ಪಾಲಿಸೆನ್ನ’, ‘ಗಜವದನ ಪಾವನ’, ‘ರಥವನೇರಿದ ರಾಘವೇಂದ್ರ’, ‘ಏಕೆ ಮಲಗಿಹೆ ಹರಿಯೆ’ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿ ಎಲ್ಲರ ತಲೆತೂಗುವಂತೆ ಮಾಡಿದರು. ಕಿರಿಯ ಶ್ರೀಗಳಾದ ಶ್ರೀ ವಿಶ್ವಪ್ರಸನ್ನ ಶ್ರೀಪಾದ ಸ್ವಾಮೀಜಿ ಉಪಸ್ಥಿತರಿದ್ದರು.

 

 

 

 

Translate »