ಮೈಸೂರಲ್ಲಿ ಶಾಂತಿ-ಸೌಹಾರ್ದತೆಗಾಗಿ ಸಂವಿಧಾನ ರಕ್ಷಣಾ ಸಮಿತಿಯಿಂದ ಮೌನ ಮೆರವಣಿಗೆ
ಮೈಸೂರು

ಮೈಸೂರಲ್ಲಿ ಶಾಂತಿ-ಸೌಹಾರ್ದತೆಗಾಗಿ ಸಂವಿಧಾನ ರಕ್ಷಣಾ ಸಮಿತಿಯಿಂದ ಮೌನ ಮೆರವಣಿಗೆ

March 3, 2020

ಮೈಸೂರು, ಮಾ.2(ಎಸ್‍ಬಿಡಿ)- ದೆಹಲಿಯಲ್ಲಿ ನಡೆದ ಹಿಂಸಾಚಾರ ಹಾಗೂ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ಬಗ್ಗೆ ಟೀಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸಂವಿಧಾನ ರಕ್ಷಣಾ ಸಮಿತಿ ವತಿಯಿಂದ ಮೈಸೂರಿನಲ್ಲಿ ಸೋಮವಾರ ಶಾಂತಿ- ಸೌಹಾರ್ದತೆಗಾಗಿ ಮೌನ ಮೆರವಣಿಗೆ ನಡೆಸಲಾಯಿತು.

ಸುಬ್ಬರಾಯನಕೆರೆ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದ ಬಳಿಯಿಂದ ಆರಂಭಗೊಂಡ ಮೆರವಣಿಗೆ ಚಾಮರಾಜ ಜೋಡಿ ರಸ್ತೆ, ಬಸವೇಶ್ವರ ವೃತ್ತ, ಸಯ್ಯಾಜಿರಾವ್ ರಸ್ತೆ, ಸಂತೆಪೇಟೆ ರಸ್ತೆ, ಚಿಕ್ಕ ಗಡಿಯಾರ, ಸಯ್ಯಾಜಿರಾವ್ ರಸ್ತೆ, ಆಯುರ್ವೇದ ಆಸ್ಪತ್ರೆ ವೃತ್ತ, ಇರ್ವಿನ್ ರಸ್ತೆ, ಅಶೋಕ ರಸ್ತೆ ಮೂಲಕ ಸಾಗಿ ಮಹಾತ್ಮ ಗಾಂಧಿ ವೃತ್ತದಲ್ಲಿ ಮುಕ್ತಾಯವಾಯಿತು.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಹಿಂಸಾಚಾರ ಕೋಮು ಸೌಹಾರ್ದತೆ ಪರಂಪರೆಗೆ ಧಕ್ಕೆ ತರುವಂತದ್ದು. ಗಲಭೆಯಲ್ಲಿ 40ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ಪರಿಸ್ಥಿತಿ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಪ್ರಚೋ ದನಾಕಾರಿ ಹೇಳಿಕೆ ನೀಡಿದ ಬಿಜೆಪಿ ನಾಯಕರ ವಿರುದ್ಧ ದೆಹಲಿ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಗಲಭೆ ನಡುವೆಯೂ ಹಿಂದೂ, ಸಿಖ್, ಮುಸ್ಲಿಮರು ಪರಸ್ಪರ ಆಶ್ರಯ, ರಕ್ಷಣೆ ನೀಡಿ ಸೌಹಾರ್ದತೆ ಮೆರೆದಿದ್ದಾರೆ. ಸಿಎಎ, ಎನ್‍ಆರ್‍ಸಿ, ಎನ್‍ಪಿಆರ್ ವಿರೋ ಧಿಸಿ ಶಾಂತಿಯುತವಾಗಿ ನಿರಂತರ ನಡೆದಿರುವ ಹೋರಾಟಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ. ಬದಲಾಗಿ ಗಲಭೆ ಸೃಷ್ಟಿಸುವ ತಂತ್ರಗಾರಿಕೆ ಮುಂದುವರೆಸಿದೆ. ಹೋರಾಟಗಾರರನ್ನು ದೇಶದ್ರೋಹಿಗಳೆಂದು ಟೀಕಿಸಲಾಗುತ್ತಿದೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್.ಎಸ್.ದೊರೆಸ್ವಾಮಿ ಅವರನ್ನು ನಕಲಿ ಹೋರಾಟಗಾರ, ಪಾಕಿಸ್ತಾನಿ ಏಜೆಂಟ್ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವಮಾನಿಸಿದ್ದಾರೆ. ಈ ಹೇಳಿಕೆ ಯನ್ನು ಬಿಜೆಪಿಯ ಕೆಲ ಸಚಿವರು, ಶಾಸಕರು ಸಮರ್ಥಿಸಿಕೊಂಡಿರುವುದು ವಿಷಾ ದನೀಯ. ಯತ್ನಾಳ್ ಕ್ಷಮೆಯಾಚಿಸಬೇಕು. ಈ ರೀತಿಯ ಹೇಳಿಕೆಯಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ತಂತ್ರಗಾರಿಕೆಯನ್ನು ನಿಲ್ಲಿಸಬೇಕೆಂಬ ಆಗ್ರಹವುಳ್ಳ ಕರಪತ್ರವನ್ನು ಮೆರವಣಿಗೆಯುದ್ದಕ್ಕೂ ಸಾರ್ವಜನಿಕರಿಗೆ ಹಂಚಲಾಯಿತು.

ಪ.ಮಲ್ಲೇಶ್, ಮೇಜರ್ ಒಂಬತ್ಕೆರೆ, ಉಗ್ರ ನರಸಿಂಹೇಗೌಡ, ಶಬೀರ್ ಮುಸ್ತಫಾ, ಹೆಚ್.ಎ.ನಂಜುಂಡಸ್ವಾಮಿ, ಲ.ಜಗನ್ನಾಥ್, ಪ್ರೊ.ಪಿ.ವಿ.ನಂಜರಾಜೇ ಅರಸ್, ಡಾ.ಕೆ. ಕಾಳಚನ್ನೇಗೌಡ, ಜಗನ್ನಾಥ್, ಸುಕನ್ಯಾ ಕನಾರಳಿ, ಚಂದ್ರಶೇಖರ ಮೇಟಿ, ಅಭಿರುಚಿ ಗಣೇಶ್, ರವಿ. ಹರೀಶ್, ಅಪ್ಜರ್, ಆರ್.ಎಸ್.ದೊಡ್ಡಣ್ಣ, ಮರಂಕಯ್ಯ, ಶಂಭುಲಿಂಗ ಸ್ವಾಮಿ ಸೇರಿದಂತೆ ಸಮಿತಿಯ ಹಲವು ಸದಸ್ಯರು ಮೆರವಣಿಗೆಯಲ್ಲಿ ಘೋಷಣಾ ಫಲಕ ಹಿಡಿದು ಸಾಗಿದರು. ಹೆಚ್.ಜನಾರ್ಧನ್(ಜನ್ನಿ) ಹಾಡಿದ `ಯಾರಿಗೆ ಬಂತು ಎಲ್ಲಿಗೆ ಬಂದು ನಲವತ್ತೇಳರ ಸ್ವಾತಂತ್ರ್ಯ…’ ಗೀತೆ ಮೂಲಕ ಮುಕ್ತಾಯವಾಯಿತು.

Translate »