ಮಹಿಳೆ ಮೇಲಿನ ದೌರ್ಜನ್ಯ ತಡೆಗೆ ವಿಶೇಷ ಕಾಯ್ದೆ ಅಗತ್ಯ
ಮೈಸೂರು

ಮಹಿಳೆ ಮೇಲಿನ ದೌರ್ಜನ್ಯ ತಡೆಗೆ ವಿಶೇಷ ಕಾಯ್ದೆ ಅಗತ್ಯ

January 23, 2020

ಮೈಸೂರು, ಜ. 22(ಆರ್‍ಕೆ)- ರಾಜ್ಯ ದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ವಿಶೇಷ ಕಾಯ್ದೆ ಜಾರಿಗೊಳಿಸ ಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿಯ ಮಹಿಳಾ ಘಟಕದ ವತಿಯಿಂದ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಏರ್ಪಡಿಸಿದ್ದ ‘ಅಮ್ಮ ನಿನಗೊಂದು ನಮನ’ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವ ರಿಗೆ ನಮನ, ಅಸಂಘಟಿತ ಮಹಿಳಾ ಕಾರ್ಮಿ ಕರ ಜಾಗೃತಿ ಶಿಬಿರ, ಆರೋಗ್ಯ-ಕೌಶಲ ಮತ್ತು ಉಚಿತ ಕಾರ್ಮಿಕ ಕಾರ್ಡ್ ನೋಂದಣಿ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಮಾತನಾಡುತ್ತಿದ್ದರು.

ನಮ್ಮ ಸರ್ಕಾರವಿದ್ದಾಗ ಜಯಮಾಲಾ ಮತ್ತು ವಿ.ಎಸ್.ಉಗ್ರಪ್ಪ ನೇತೃತ್ವದಲ್ಲಿ ಸಮಿತಿ ರಚಿಸಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವ ಬಗ್ಗೆ ಅಧ್ಯಯನ ನಡೆಸಿ ವರದಿ ತಯಾರಿಸುವಂತೆ ಹೇಳಿದ್ದೆವು. ವರದಿ ಜಾರಿ ಗೊಳಿಸುವಷ್ಟರಲ್ಲಿ ನಮ್ಮ ಅಧಿಕಾರ ಅಂತ್ಯ ಗೊಂಡಿತು ಎಂದು ವಿಷಾದಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡು ತ್ತಿರುವ ಯೋಜನೆಗಳ ಬಗ್ಗೆ ಮಹಿಳಾ ಕಾರ್ಮಿ ಕರು ತಿಳಿದುಕೊಳ್ಳಬೇಕು. ನಮ್ಮ ಸರ್ಕಾರವಿ ದ್ದಾಗ ಮಹಿಳೆಯರಿಗಾಗಿ ಹಲವು ಕಾರ್ಯ ಕ್ರಮ ಕೊಟ್ಟಿದ್ದೆವು. ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ ಸೌಲಭ್ಯ ನೀಡಲೆಂದು ಆಸ್ಪತ್ರೆಗಳಲ್ಲಿ ಪ್ರತ್ಯೇಕ ಸೆಲ್ ತೆರೆದಿದ್ದೆವು ಎಂದ ಸಿದ್ದರಾಮಯ್ಯ, ತೃತೀಯ ಲಿಂಗಿಗಳಿಗೆ ಪ್ರಥಮ ಬಾರಿ ಮಾಸಾಶನ ಜಾರಿಗೊಳಿಸಿದ್ದೆವು. ಪೋಷ ಕರು, ಸಮಾಜ ಅವರನ್ನು ತಿರಸ್ಕಾರದಿಂದ ನೋಡು ವುದು ಸರಿಯಲ್ಲ ಎಂದು ನುಡಿದರು.

ಗರ್ಭಿಣಿಯರಿಗಾಗಿ ಮಾತೃಪೂರ್ಣ, ಮಾತೃಶ್ರೀ, ಅಂಗನವಾಡಿ ಮಕ್ಕಳಿಗೆ ಹಾಲು, ಮೊಟ್ಟೆ ಕೊಡುವ ಯೋಜನೆ, ಶಾಲಾ ಮಕ್ಕ ಳಿಗೆ ಬಿಸಿಯೂಟ ಸೇರಿದಂತೆ ಮಹಿಳೆಯರು ಮತ್ತು ಮಕ್ಕಳಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದೆವು. ಎಲ್ಲಾ ಮಕ್ಕಳಿಗೂ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಜಾರಿಗೆ ತಂದಿದ್ದ 1ನೇ ತರಗತಿಯಿಂದ ಪಿ.ಜಿ.ವರೆಗೆ ಉಚಿತ ಶಿಕ್ಷಣ ಯೋಜನೆಯನ್ನು ಕುಮಾರ ಸ್ವಾಮಿ ಅನುಷ್ಠಾನಗೊಳಿಸಲಿಲ್ಲ. ಯಡಿಯೂ ರಪ್ಪ ಅದನ್ನು ಕಸದ ಬುಟ್ಟಿಗೆ ಹಾಕಿದ್ದಾರೆ ಎಂದು ಸಿದ್ದರಾಮಯ್ಯ ಇದೇ ಸಂದರ್ಭ ತಿಳಿಸಿದರು. ಗ್ರಾಮ ಪಂಚಾಯ್ತಿ, ಮುನಿಸಿ ಪಾಲಿಟಿಗಳಲ್ಲಿ ಮಹಿಳೆಯರಿಗೆ ಹೆಚ್ಚುವರಿ ಮೀಸಲಾತಿ ನೀಡಿದ್ದು ಕಾಂಗ್ರೆಸ್ ಪಕ್ಷ. ಎಲ್ಲಾ ಕ್ಷೇತ್ರಗಳಲ್ಲೂ ಮೀಸಲಾತಿ ದೊರೆತಾಗ ಮಾತ್ರ ಶಿಕ್ಷಣ ಮಟ್ಟ ಹೆಚ್ಚಾಗಿ ದೌರ್ಜನ್ಯ ತಡೆಗಟ್ಟಲು ಸಾಧ್ಯವಾಗುತ್ತದೆ. ಆಯು ಷ್ಮಾನ್ ಭಾರತ-ಆರೋಗ್ಯ ಕರ್ನಾಟಕ, ರೈತರ ಬೆಳೆ ವಿಮೆ ನಾವು ತಂದಿದ್ದು ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಫಸಲ್ ಬಿಮಾದಲ್ಲಿ ನಮ್ಮದು ಶೇ.50 ರಷ್ಟು ಪಾಲಿದೆ. ಅದನ್ನೂ ನರೇಂದ್ರ ಮೋದಿ ತಮ್ಮದೆನ್ನುತ್ತಾ ಜನರಲ್ಲಿ ಗೊಂದಲ ಉಂಟು ಮಾಡುತ್ತಿ ದ್ದಾರೆ ಎಂದು ಟೀಕಿಸಿದರು.

ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿ ದ್ದರೆ ಬಡವರ್ಯಾರೂ ಬ್ಯಾಂಕ್ ಮೆಟ್ಟಿಲು ಹತ್ತಲು ಸಾಧ್ಯವಾಗುತ್ತಿರಲಿಲ್ಲ. ಇಂದಿರಾಗಾಂಧಿ ಅವರು ಬ್ಯಾಂಕ್ ತೆರೆಸಿದರೆ, ನರೇಂದ್ರ ಮೋದಿ ಅವರು ಅವೆಲ್ಲವನ್ನೂ ಮುಚ್ಚುವ ಕೆಲಸ ಮಾಡುತ್ತಿದ್ದಾರೆ. ನೆಲ ಕಚ್ಚಿರುವ ಆರ್ಥಿಕ ಸ್ಥಿತಿ ಮುಚ್ಚಿಕೊಳ್ಳಲು ಸಿಎಎಯಂತಹ ಕಾಯ್ದೆ ಗಳನ್ನು ಜಾರಿಗೊಳಿಸಿ ಜನರ ದಾರಿ ತಪ್ಪಿಸು ತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ವಿಫಲ: ಸುಶ್ಮಿತಾದೇವ್
ಮಹಿಳೆಯರು, ಮಕ್ಕಳಿಗೆ ರಕ್ಷಣೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸುಶ್ಮಿತಾ ದೇವ್ ಆರೋಪಿಸಿದ್ದಾರೆ. ಕೆಪಿಸಿಸಿ ಮಹಿಳಾ ಘಟಕದ ವತಿಯಿಂದ ಮೈಸೂ ರಿನ ಜಗನ್ಮೋಹನ ಅರಮನೆಯಲ್ಲಿ ಏರ್ಪಡಿಸಿದ್ದ ‘ಅಮ್ಮನಿಗೊಂದು ನಮನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮಹಿಳೆ ಸಂಬಂಧ ಯಾವುದೇ ಕಾಳಜಿ ವಹಿಸಲಿಲ್ಲ ಎಂದರು. ಮಹಿಳೆಯರಿಗೆ ಗೌರವ ಇಲ್ಲದಂತಾಗಿದೆ. ಅತ್ಯಾ ಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಮಹಿಳೆ ಯರು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿ ದ್ದಾಗ ಸಿದ್ದರಾಮಯ್ಯ ಅವರು ಮಹಿಳೆಯರು ಹಾಗೂ ಮಕ್ಕಳ ರಕ್ಷಣೆಗಾಗಿ ಹಲವು ಕಾರ್ಯಕ್ರಮಗಳನ್ನು ಕೊಟ್ಟಿದ್ದರು ಎಂದರು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಸುವರ್ಣ ಯುಗದ ಮಾದರಿಯಲ್ಲಿ ಆಡಳಿತ ಕೊಟ್ಟ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ಅದಕ್ಕಾಗಿಯೇ ಈ ದಿನದ ಕಾರ್ಯಕ್ರಮವನ್ನು ದೇಶ ಕಂಡ ಅಪ್ರತಿಮ ನಾಯಕಿ ಇಂದಿರಾ ಗಾಂಧಿ ಅವರಿಗೆ ಅರ್ಪಿಸಲಾಗುತ್ತಿದೆ ಎಂದ ಸುಶ್ಮಿತಾ ದೇವ್ ಅವರು, ಶೇ. 65ರಷ್ಟು ಮಹಿಳೆಯರು ಅಸಂಘಟಿತ ವಲಯದಲ್ಲಿ ದುಡಿಯುತ್ತಿದ್ದಾರೆ. ಅವರಿಗೆ ಕಾರ್ಮಿಕ ನೋಂದಣಿ ಮಾಡಿಸುವ ಮೂಲಕ ಬಲಿಷ್ಠರಾಗುವಂತೆ ಮಾಡುವುದು ಅಗತ್ಯ ಎಂದರು.

ಮಾಜಿ ಸಂಸದ ಆರ್.ಧ್ರುವನಾರಾಯಣ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಶಾಸಕಿ ಸೌಮ್ಯಾ ರೆಡ್ಡಿ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಲತಾ ಟಿ.ಬಿ.ಚಿಕ್ಕಣ್ಣ, ಜಿಲ್ಲಾಧ್ಯಕ್ಷೆ ಲತಾ ಸಿದ್ದಶೆಟ್ಟಿ, ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಮಾಜಿ ಶಾಸಕರಾದ ಎಂ.ಕೆ. ಸೋಮಶೇಖರ್, ಕಳಲೆ ಕೇಶವಮೂರ್ತಿ, ಶಾಸಕ ಹೆಚ್.ಪಿ. ಮಂಜು ನಾಥ್, ಕೇರಳಾ ಉಸ್ತುವಾರಿ ಚಮನ್ ಸರ್ಜನಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕಾರ್ಮಿಕ ವಿಭಾಗದ ಅಧ್ಯಕ್ಷ ಪ್ರಕಾಶ್ ಸೇರಿದಂತೆ ಹಲವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.