ಲೋಕಪಾವನಿಯಲ್ಲಿ ಎತ್ತು, ಗಾಡಿ ತೊಳೆಯುವಾಗ ಯುವಕ ನಾಪತ್ತೆ
ಮಂಡ್ಯ

ಲೋಕಪಾವನಿಯಲ್ಲಿ ಎತ್ತು, ಗಾಡಿ ತೊಳೆಯುವಾಗ ಯುವಕ ನಾಪತ್ತೆ

March 3, 2020

ಶ್ರೀರಂಗಪಟ್ಟಣ,ಮಾ.2(ವಿನಯ್‍ಕಾರೇಕುರ,ನಾಗಯ್ಯ)-ಗಾಡಿ ಮತ್ತು ಎತ್ತುಗಳನ್ನು ತೊಳೆಯಲು ಹೋದ ಯುವಕ ನೋರ್ವ ಕೊಚ್ಚಿ ಹೋಗಿ ನಾಪತ್ತೆ ಯಾಗಿರುವ ಘಟನೆ ಶ್ರೀರಂಗ ಪಟ್ಟಣ ತಾಲ್ಲೂಕಿನ ಬಾಬು ರಾಯನಕೊಪ್ಪಲಿನ ಲೋಕ ಪಾವನಿ ನದಿಯಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಮತ್ತೋರ್ವ ಯುವಕ ಈಜಿ ದಡ ಸೇರಿದ್ದಾನೆ. ಬಾಬುರಾಯನ ಕೊಪ್ಪಲು ನಿವಾಸಿ ಲಾಯರ್ ಶೇಷಾದ್ರಿ ಮತ್ತು ಹೇಮಾ ದಂಪತಿ ಪುತ್ರ ಸೋಮೇಶ್ವರ್ (21) ನೀರಿನಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾದವನಾಗಿದ್ದು, ಆತನ ಚಿಕ್ಕಪ್ಪನ ಮಗ ಶಿವು ಈಜಿ ದಡ ಸೇರಿದ್ದಾನೆ.

ವಿವರ: ಬಾಬುರಾಯನಕೊಪ್ಪಲಿನ ಲೋಕಪಾವನಿ ನದಿ ಪಕ್ಕದಲ್ಲಿರುವ ತಮ್ಮ ಇಟ್ಟಿಗೆಗೂಡಿಗೆ ಮಣ್ಣು ಹೊಡೆದಿದ್ದ ಸೋಮೇಶ್ವರ್ ಇಂದು ಮಧ್ಯಾಹ್ನ ತನ್ನ ಚಿಕ್ಕಪ್ಪನ ಮಗ ಶಿವು ಜೊತೆ ಸೇರಿ ಗಾಡಿ ಮತ್ತು ಎತ್ತು ತೊಳೆಯಲು ಲೋಕಪಾವನಿ ಸೇತುವೆ ಸಮೀಪದಲ್ಲಿ ನದಿಗೆ ಗಾಡಿ ಇಳಿಸಿದ್ದಾನೆ. ಭಾನುವಾರ ರಾತ್ರಿಯಿಡಿ ಪಾಂಡವಪುರ ಹಾಗೂ ಶ್ರೀರಂಗಪಟ್ಟಣ ತಾಲ್ಲೂಕು ಸೇರಿದಂತೆ ಸುತ್ತಮುತ್ತ ಭಾರಿ ಮಳೆ ಸುರಿದ ಪರಿಣಾಮ ನದಿಯಲ್ಲಿ ಅಪಾರ ಪ್ರಮಾಣದ ನೀರು ಹರಿದು ಬಂದಿತ್ತು. ಈ ನೀರಿನ ಸೆಳೆತಕ್ಕೆ ಗಾಡಿ ಸಮೇತ ಸೋಮೇಶ್ವರ್ ಮತ್ತು ಶಿವು ಕೊಚ್ಚಿ ಹೋಗಿದ್ದಾರೆ.

ಈ ವೇಳೆ ನದಿಯಿಂದ ಎತ್ತುಗಳು ಗಾಡಿಯಿಂದ ಬಿಡಿಸಿಕೊಂಡು ದಡ ಸೇರಿವೆ. ಶಿವು ಈಜಿ ದಡ ಸೇರಿದ್ದಾನೆ. ಆದರೆ ಸೋಮೇಶ್ವರ್ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿ ಕೆಲ ಅಂತರದ ದೂರದಲ್ಲೇ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದ್ದಾನೆ. ಸುಮಾರು 700 ಮೀಟರ್ ದೂರದಲ್ಲಿ ಗಾಡಿ ಪತ್ತೆಯಾಗಿದೆ. ಬಾಬುರಾಯನ ಕೊಪ್ಪಲು ಗ್ರಾಮಸ್ಥರು ನದಿಯಲ್ಲಿ ಹುಡುಕಾಟ ನಡೆಸಿ ಬಳಿಕ ಅಗ್ನಿಶಾಮಕದಳ ಹಾಗೂ ಶ್ರೀರಂಗಪಟ್ಟಣ ಟೌನ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶ್ರೀರಂಗಪಟ್ಟಣ ಟೌನ್ ಠಾಣೆ ಸಬ್‍ಇನ್ಸ್‍ಪೆಕ್ಟರ್ ಮುದ್ದು ಮಾದಪ್ಪ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರ ಸಹಾಯದಿಂದ ಹುಡುಕಾಟ ನಡೆಸಿದರಾದರೂ, ಸೋಮೇಶ್ವರ್ ಪತ್ತೆಯಾಗಿಲ್ಲ. ಇದೀಗ ನಾಪತ್ತೆಯಾಗಿರುವ ಯುವಕನಿಗಾಗಿ ತೀವ್ರ ಶೋಧನೆ ನಡೆಸಲಾಗಿದೆ. ಶ್ರೀರಂಗಪಟ್ಟಣ ಟೌನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Translate »