ಮಕ್ಕಳಗುಡಿ ಬೆಟ್ಟದಲ್ಲಿ ಯುವಕನ ಮೇಲೆ ಹಲ್ಲೆ ಪ್ರಕರಣ
ಕೊಡಗು

ಮಕ್ಕಳಗುಡಿ ಬೆಟ್ಟದಲ್ಲಿ ಯುವಕನ ಮೇಲೆ ಹಲ್ಲೆ ಪ್ರಕರಣ

January 10, 2019

ಬುದ್ಧಿ ಹೇಳಲು ಹೋದವನ ಮೇಲೆ ಕೊಲೆ ಯತ್ನ
ಸೋಮವಾರಪೇಟೆ: ತಾಲೂಕಿನ ಮಕ್ಕಳಗುಡಿ ಬೆಟ್ಟದಲ್ಲಿ ಮಂಗಳವಾರ ಮೈಸೂರಿನ ಯುವಕನ ಮೇಲೆ ನಡೆದ ಕೊಲೆ ಯತ್ನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಅಪ್ರಾಪ್ತ ಹುಡುಗಿಯನ್ನು ಪ್ರೀತಿಸುತ್ತಿದ್ದ ಬಾಲಕನಿಗೆ ಬುದ್ಧಿ ಹೇಳಲು ಹೋದವನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವುದು ತನಿಖೆಯಿಂದ ತಿಳಿದು ಬಂದಿದೆ.
ಮಂಗಳವಾರ ಮಕ್ಕಳಗುಡಿ ಬೆಟ್ಟಕ್ಕೆ ತೆರಳಿದ್ದ ಮೈಸೂರಿನ ರಾಕೇಶ್‍ಗೌಡ ಎಂಬ ಯುವಕನ ಮೇಲೆ ತೀವ್ರವಾಗಿ ಹಲ್ಲೆ ಮಾಡಿ ಕೊಲೆ ಯತ್ನ ನಡೆಸಲಾಗಿತ್ತು. ಈ ಬಗ್ಗೆ ತನಿಖೆ ಶುರು ಮಾಡಿದ ಸೋಮವಾರಪೇಟೆ ಪೊಲೀಸರು, ಮಕ್ಕಳಗುಡಿ ಬೆಟ್ಟಕ್ಕೆ ತೆರಳುವ ಮಾರ್ಗದ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿದರು. ಅಲ್ಲದೇ ಸ್ಥಳೀಯರ ಮಾಹಿತಿ ಮೇರೆಗೆ ಪರಿಶೀಲನೆ ನಡೆಸುತ್ತಿದ್ದ ವೇಳೆ ಜೊತೆಯಲ್ಲೇ ಓಡಾಡುತ್ತಿದ್ದ ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಈ ವೇಳೆ ಬಾಲಕ, ತಾನೇ ಹಲ್ಲೆ ನಡೆಸಿರುವುದಾಗಿ ತಪ್ಪೊಪ್ಪಿಕೊಂಡನೆನ್ನಲಾಗಿದೆ.

ವಿವರ: ಅಪ್ರಾಪ್ತ ಬಾಲಕ ಸಮೀಪದ ಗ್ರಾಮದ ಅಪ್ರಾಪ್ತೆಯೋರ್ವಳನ್ನು ಪ್ರೀತಿ ಸುತ್ತಿದ್ದನೆನ್ನಲಾಗಿದೆ. ಈ ಬಗ್ಗೆ ಬಾಲಕಿಯ ಮೊಬೈಲ್‍ಗೆ ಪ್ರೇಮ ನಿವೇದನೆಯ ಪತ್ರ ಗಳನ್ನು ಕಳುಹಿಸುತ್ತಿದ್ದ. ಇದರಿಂದ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದ ಬಾಲಕಿ, ಪೋಷಕರಿಗೆ ತಿಳಿಸಲು ಭಯಗೊಂಡಿದ್ದಳು. ಈ ಮಧ್ಯೆ ಸಾಮಾಜಿಕ ಜಾಲ ತಾಣ ದಲ್ಲಿ ಪರಿಚಯವಾಗಿದ್ದ ರಾಕೇಶ್‍ಗೌಡನಿಗೆ ಈ ಬಗ್ಗೆ ಮಾಹಿತಿ ನೀಡಿ, ಆ ಬಾಲಕನ ಮೊಬೈಲ್ ನಂಬರ್ ಅನ್ನು ನೀಡಿದ್ದಾಳೆ. ಬಾಲಕನ ಮೊಬೈಲ್‍ಗೆ ಕರೆ ಮಾಡಿದ ರಾಕೇಶ್‍ಗೌಡ, ತಾನು ಆಕೆಯ ಸಹೋದರನೆಂದು ಹೇಳಿ, ತಂಟೆಗೆ ಹೋಗದಂತೆ ಎಚ್ಚರಿಕೆ ನೀಡಿದ್ದ.

ಆದರೆ ಆ ಬಾಲಕ ರಾಕೇಶ್‍ಗೌಡನ ಮಾತಿಗೆ ಸೊಪ್ಪು ಹಾಕದೇ ನಾನು ಊರಲ್ಲೇ ಇರುವೆ. ನೀನು ಬಂದು ಏನು ಮಾಡುವೆ ಮಾಡು ಎಂದು ಸವಾಲು ಹಾಕಿದ ನೆನ್ನಲಾಗಿದೆ. ಇದರಿಂದ ಕೆರಳಿದ ರಾಕೇಶ್‍ಗೌಡ, ಮಂಗಳವಾರ ಬೆಳಿಗ್ಗೆ ತನ್ನ ಬೈಕ್ ನಲ್ಲಿ ಆತನ ಊರಿಗೆ ತೆರಳಿದ. ಗ್ರಾಮದ ಬಳಿಯ ಕುಂಬೂರು ಸರ್ಕಲ್‍ನಲ್ಲೇ ಬಾಲಕ ಎದುರಾಗಿದ್ದರಿಂದ ಆತನನ್ನು ನೋಡಿದ ರಾಕೇಶ್‍ಗೌಡ, ಸೌಜನ್ಯವಾಗೇ ಎಚ್ಚರಿಕೆ ನೀಡಿದ್ದ. ನಂತರ ಪಕ್ಕದಲ್ಲೇ ಇದ್ದ ಮಕ್ಕಳಗುಡಿ ಬೆಟ್ಟಕ್ಕೆ ತೆರಳಿ ಪ್ರಕೃತಿಯ ಸೊಬಗನ್ನು ಆಸ್ವಾದಿಸುತ್ತಿದ್ದ. ಆದರೆ ರಾಕೇಶ್‍ಗೌಡನ ಎಚ್ಚರಿಕೆಯಿಂದ ಆಕ್ರೋಶಗೊಂಡಿದ್ದ ಬಾಲಕ ಕಬ್ಬಿಣದ ರಾಡ್‍ನಿಂದ ರಾಕೇಶ್‍ಗೌಡನ ತಲೆಗೆ ಹಿಂಬದಿಯಿಂದ ಹೊಡೆದ. ಇದರಿಂದ ತಲೆ ತಿರುಗಿ ಕೆಳಕ್ಕೆ ಉರುಳಿದ ರಾಕೇಶ್‍ಗೌಡನ ಮುಖ, ತಲೆಗೆಲ್ಲಾ ತೀವ್ರವಾಗಿ ಹಲ್ಲೆ ನಡೆಸಿದ ಆತ, ಸ್ಥಳದಿಂದ ತೆರಳಿ ಮನೆಗೆ ಹೋಗಿ ತನ್ನ ರಕ್ತಸಿಕ್ತ ಬಟ್ಟೆಯನ್ನು ಬದಲಾಯಿಸಿದ್ದ.

ತೀವ್ರ ಹಲ್ಲೆಗೊಳಗಾಗಿ ಬಿದ್ದಿದ್ದ ರಾಕೇಶ್‍ಗೌಡನನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳ ಪರಿಶೀಲನೆ ವೇಳೆ ಜೊತೆಯಲ್ಲೇ ಇದ್ದ ಬಾಲಕನನ್ನು ಕಂಡ ಆಟೋಚಾಲಕ ಹಾಗೂ ನೀರುಗಂಟಿ ಯೋರ್ವ ಬಾಲಕ ಬಟ್ಟೆ ಬದಲಾಯಿಸಿರುವ ಬಗ್ಗೆ ಅನುಮಾನಗೊಂಡು ಪೊಲೀ ಸರಿಗೆ ಮಾಹಿತಿ ನೀಡಿದ್ದಾರೆ. ಆತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೊಳ ಪಡಿಸಿದಾಗ ಸತ್ಯಾಂಶ ಹೊರ ಬಿದ್ದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಸೋಮವಾರಪೇಟೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Translate »