ಆಧಾರ್ ಭಾರೀ ಡಿಮ್ಯಾಂಡ್: ದಿನೇ ದಿನೆ ಹೆಚ್ಚುತ್ತಿದೆ ಜನದಟ್ಟಣೆ
ಮೈಸೂರು

ಆಧಾರ್ ಭಾರೀ ಡಿಮ್ಯಾಂಡ್: ದಿನೇ ದಿನೆ ಹೆಚ್ಚುತ್ತಿದೆ ಜನದಟ್ಟಣೆ

June 16, 2019

ಮೈಸೂರು: ಸರ್ಕಾರದ ಪ್ರತಿಯೊಂದು ಸೌಲಭ್ಯಕ್ಕೂ ಆಧಾರ್ ನೋಂದಣಿ ಮುಖ್ಯವಾಗಿದ್ದು, ಅದರಲ್ಲೂ ಪಡಿತರ ಚೀಟಿಗೆ ಆಧಾರ್ ಕಾರ್ಡ್ ಸಂಖ್ಯೆ ಲಿಂಕ್ ಮಾಡಿಸುವು ದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಈ ಹಿನ್ನೆಲೆಯಲ್ಲಿ ದಿನದಿಂದ ದಿನಕ್ಕೆ ಆಧಾರ್ ಕೇಂದ್ರಗಳ ಬಳಿ ಜನದಟ್ಟಣೆ ಹೆಚ್ಚಾಗುತ್ತಿದೆ.

ಜು.31ರೊಳಗೆ ಪಡಿತರ ಚೀಟಿಗೆ ಆಧಾರ್‍ಕಾರ್ಡ್ ಲಿಂಕ್ ಮಾಡಿಸ ಬೇಕೆಂದು ಸರ್ಕಾರ ಕಡ್ಡಾಯಗೊಳಿ ಸಿದೆ. ಜತೆಗೆ ಇತರೆ ಎಲ್ಲಾ ಸರ್ಕಾರಿ ಸೌಲಭ್ಯಗಳಿಗೂ ಆಧಾರ್ ನೋಂದಣಿ ಅವಶ್ಯವಾಗಿದೆ. ಹಾಗಾಗಿ ಸಾರ್ವಜನಿ ಕರು ಹೆಸರು ತಿದ್ದುಪಡಿ, ವಿಳಾಸ ಬದ ಲಾವಣೆ, ಜನ್ಮದಿನಾಂಕ ಬದಲಾವಣೆಗೆ ಗ್ರಾಮೀಣ ಮತ್ತು ನಗರ ಪ್ರದೇಶದ ಜನ ಜಿಲ್ಲಾಧಿಕಾರಿ ಕಚೇರಿ ಮತ್ತು ಕರ್ನಾ ಟಕ ಒನ್ ಕೇಂದ್ರಗಳತ್ತ ಹೆಚ್ಚಿನ ಸಂಖ್ಯೆ ಯಲ್ಲಿ ಆಗಮಿಸುತ್ತಿದ್ದಾರೆ. ಆದರೆ, ದಿನ ದಲ್ಲಿ 60-70 ಮಂದಿಯಷ್ಟೇ ಆಧಾರ್ ನೋಂದಣಿ ಮಾಡಿಸುತ್ತಿರುವುದರಿಂದ ಈ ಸಮಸ್ಯೆ ಎದುರಾಗಿದೆ.

ನಿನ್ನೆ ತಾನೆ ಸಾರ್ವಜನಿಕರು ಆಧಾರ್ ಕಾರ್ಡ್ ಮಾಡಿಸಲು ಗಂಟೆಗಟ್ಟಲೆ ಕಾದರೂ ಟೋಕನ್ ಸಿಗುತ್ತಿಲ್ಲ. ಪ್ರತಿ ದಿನ ಕೆಲಸ ಬಿಟ್ಟು ಇದಕ್ಕಾಗಿಯೇ ಬಂದರೆ ಜೀವನ ನಡೆಸುವುದಾದರೂ ಹೇಗೆ ಎಂದು ಮೈಸೂರಿನ ಶೇಷಾದ್ರಿ ಐಯ್ಯರ್ ರಸ್ತೆಯಲ್ಲಿರುವ ಕರ್ನಾಟಕ ಓನ್ ಕೇಂದ್ರದ ಬಳಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.

ಇಂದು(ಜೂ.14) ಜಿಲ್ಲಾಧಿಕಾರಿ ಕಚೇರಿಯ ಆಧಾರ್ ಕೇಂದ್ರದ ಬಳಿ ಸಾರ್ವಜನಿಕರೊಬ್ಬರು, ಪಡಿತರ ಚೀಟಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸಲು 3 ದಿನಗಳಿಂದ ತಿರುಗುತ್ತಿದ್ದೇನೆ. ಆದರೂ ಆಗಿಲ್ಲ. ಸಿಬ್ಬಂದಿ ಹೆಸರನ್ನು ಸರಿಪಡಿಸುವ ವೇಳೆ ವಿಳಾಸವನ್ನು ತಪ್ಪು ಮಾಡಿದ್ದಾರೆ. ಇವರು ಮಾಡಿದ ತಪ್ಪಿಗೆ ನಾವು ಅಲೆ ಯುವಂತಾಗಿದೆ. ಜನ್ಮದಿನಾಂಕ, ಮೊಬೈಲ್ ಸಂಖ್ಯೆ, ವಿಳಾಸ ತಪ್ಪಾದರೆ ಸರಿಪಡಿಸಲು 3-4 ದಿನ ಅಲೆಯಬೇ ಕಾದ ಪರಿಸ್ಥಿತಿ ಇದೆ ಎಂದು ಅಳಲು ತೋಡಿಕೊಂಡರು.

ಈ ಕುರಿತು ಜಿಲ್ಲಾ ಸಂಯೋಜಕಿ ಲಕ್ಷ್ಮಿ ಅವರನ್ನು `ಮೈಸೂರು ಮಿತ್ರ’ ಮಾತ ನಾಡಿಸಿದಾಗ, ಆಧಾರ್ ನೋಂದಣಿ ಕಾರ್ಯವು ಬ್ಯಾಂಕ್ ಮತ್ತು ಅಂಚೆ ಕಚೇರಿ ನೌಕರರಿಗೆ ಹೆಚ್ಚುವರಿ ಕೆಲಸ ವಾಗಿದ್ದು, ದಿನದಲ್ಲಿ 10-12 ಮಂದಿಯ ಅರ್ಜಿಯನ್ನಷ್ಟೇ ಪರಿಶೀಲಿಸುತ್ತಿದ್ದಾರೆ. ಹಾಗಾಗಿ ಕರ್ನಾಟಕ ಓನ್ ಕೇಂದ್ರ ಮತ್ತು ಜಿಲ್ಲಾಧಿಕಾರಿ ಕಚೇರಿ ಕೇಂದ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿ ಸುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿಯವರಿಗೆ ತಿಳಿಸಿ, ಕೂಡಲೇ ಸಭೆ ನಡೆಸಿ ಚರ್ಚಿಸ ಲಾಗುವುದು ಎಂದರು.

ಹೋಬಳಿಗಳಲ್ಲೂ ಆರಂಭಿಸಬೇಕು: ಜಿಲ್ಲೆಯ 33 ಹೋಬಳಿಗಳ ನಾಡ ಕಚೇರಿಗಳಲ್ಲೂ ಆಧಾರ್ ಕಿಟ್ ಇದ್ದು, ಅಲ್ಲಿಯೂ ಆರಂಭಿಸಿದರೆ ಗ್ರಾಮೀಣ ಪ್ರದೇಶದ ಜನರಿಗೆ ತುಂಬಾ ಅನುಕೂಲವಾಗಲಿದ್ದು, ಸಮಸ್ಯೆಗೆ ಪರಿಹಾರವೂ ಸಿಗಲಿದೆ. ಈ ಕುರಿತು ಈ ಹಿಂದೆ ಅಪರ ಜಿಲ್ಲಾಧಿಕಾರಿಗಳ(ಎಡಿಸಿ) ಗಮನಕ್ಕೂ ತಂದಿದ್ದೆ. ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಪರಿಹರಿ ಸಲಾಗುವುದು ಎಂದು ಹೇಳಿದರು.

ಹೆಸರು, ವಿಳಾಸ, ಜನ್ಮ ದಿನಾಂಕ ಬದಲಾವಣೆಗೆ ಬೇಕಾದ ದಾಖಲೆಗಳು
ಹೆಸರು ಬದಲಾವಣೆ: ಆಧಾರ್‍ಕಾರ್ಡ್ ಜೊತೆಗೆ ಪಾಸ್ ಪೋರ್ಟ್, ಪ್ಯಾನ್ ಕಾರ್ಡ್, ಭಾವಚಿತ್ರದೊಂದಿಗೆ ಪಡಿತರ/ಪಿಡಿಎಸ್ ಕಾರ್ಡ್, ಮತದಾರರ ಗುರುತಿನ ಚೀಟಿ, ಚಾಲನೆ ಪರವಾನಗಿ ಪತ್ರ, ಭಾವಚಿತ್ರ ದೊಂದಿಗೆ ಸರ್ಕಾರಿ ಗುರುತಿನ ಚೀಟಿ ಅಥವಾ ಪಿಎಸ್‍ಯು ನೀಡಿರುವ ಭಾವಚಿತ್ರ ದೊಂದಿಗೆ ಸೇವಾ ಗುರುತಿನ ಚೀಟಿ, ನರೇಗಾ ಉದ್ಯೋಗ ಚೀಟಿ, ಭಾವಚಿತ್ರದೊಂದಿಗೆ ಅಂಗೀಕೃತ ಶೈಕ್ಷಣಿಕ ಸಂಸ್ಥೆಗಳ ಗುರುತಿನ ಚೀಟಿ, ಬಂದೂಕು ಪರವಾನಗಿ ಪತ್ರ, ಭಾವ ಚಿತ್ರದೊಂದಿಗೆ ಎಟಿಎಂ ಬ್ಯಾಂಕ್ ಕಾರ್ಡ್, ಭಾವಚಿತ್ರ ದೊಂದಿಗೆ ಕ್ರೆಡಿಟ್ ಕಾರ್ಡ್, ಭಾವಚಿತ್ರದೊಂದಿಗೆ ಪಿಂಚಣಿ ದಾರರ ಸರ್ಕಾರಿ ಗುರುತಿನ ಚೀಟಿ, ಭಾವಚಿತ್ರದೊಂದಿಗೆ ಸ್ವಾತಂತ್ರ್ಯ ಹೋರಾಟಗಾರರ ಸರ್ಕಾರಿ ಗುರುತಿನ ಚೀಟಿ, ಭಾವಚಿತ್ರದೊಂದಿಗೆ ಕಿಸಾನ್ ಪಾಸ್‍ಬುಕ್, ಭಾವಚಿತ್ರ ದೊಂದಿಗೆ ಅಂಚೆ ಇಲಾಖೆಯಿಂದ ನೀಡಲ್ಪಟ್ಟ ಹೆಸರು ಮತ್ತು ವಿಳಾಸ ಪತ್ರ, ಭಾವಚಿತ್ರದೊಂದಿಗೆ ಯಾವುದೇ ಪತ್ರಾಂಕಿತ ಅಧಿಕಾರಿಗಳು ಅಥವಾ ತಹಸೀಲ್ದಾರ್ ಪತ್ರ ಶೀರ್ಷಿಕೆಯಲ್ಲಿ ನೀಡಲ್ಪಟ್ಟ ಗುರುತಿನ ಚೀಟಿ, ಸಂಬಂಧಿತ ರಾಜ್ಯ/ಯುಟಿ ಸರ್ಕಾರಗಳು/ ಆಡಳಿತ ಸಂಸ್ಥೆಗಳಿಂದ ನೀಡಲ್ಪಟ್ಟ ನ್ಯೂನತೆ ಗುರುತು ಚೀಟಿ, ವಿಕಲಾಂಗ ವೈದ್ಯಕೀಯ ಪ್ರಮಾಣ ಪತ್ರ ಇವುಗಳಲ್ಲಿ ಯಾವುದಾದರೊಂದು ದಾಖಲೆ ಸಲ್ಲಿಸಬೇಕು.

ವಿಳಾಸ ಬದಲಾವಣೆ: ಆಧಾರ್‍ಕಾರ್ಡ್ ಜೊತೆಗೆ ಪಾಸ್ ಪೋರ್ಟ್, ಬ್ಯಾಂಕ್ ಸ್ಟೇಟ್‍ಮೆಂಟ್/ಪಾಸ್‍ಬುಕ್, ಅಂಚೆ ಕಚೇರಿ ಸ್ಟೇಟ್‍ಮೆಂಟ್/ಪಾಸ್‍ಬುಕ್, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ ಪತ್ರ, ಭಾವಚಿತ್ರದೊಂದಿಗೆ ಸರ್ಕಾರಿ ಗುರುತಿನ ಚೀಟಿ, ವಿದ್ಯುತ್ ಬಿಲ್, ನೀರಿನ ಬಿಲ್, ಸ್ಥಿರ ದೂರವಾಣಿ ಬಿಲ್, ಆಸ್ತಿ ತೆರಿಗೆ ರಸೀದಿ, ಕ್ರೆಡಿಟ್ ಕಾರ್ಡ್ ಪಟ್ಟಿ(3 ತಿಂಗಳಿಗಿಂತ ನಿಕಟಪೂರ್ವ), ಜೀವ ವಿಮಾ ಪಾಲಿಸಿ, ಬ್ಯಾಂಕ್ ಪತ್ರ ಶೀರ್ಷಿಕೆಯಲ್ಲಿ ಭಾವಚಿತ್ರದೊಂದಿಗೆ ಸಹಿಯಾದ ಪತ್ರ, ಅಂಗೀಕೃತ ಶೈಕ್ಷಣಿಕ ಸಂಸ್ಥೆಗಳ ಪತ್ರ ಶೀರ್ಷಿಕೆಯಲ್ಲಿ ಭಾವಚಿತ್ರ ದೊಂದಿಗೆ ಸಹಿಯಾದ ಪತ್ರ, ನರೇಗಾ ಉದ್ಯೋಗ ಚೀಟಿ, ಬಂದೂಕು ಪರವಾನಗಿ ಪತ್ರ, ಪಿಂಚಣಿದಾರರ ಸರ್ಕಾರಿ ಗುರುತಿನ ಚೀಟಿ, ಸ್ವಾತಂತ್ರ್ಯ ಹೋರಾಟಗಾರರ ಸರ್ಕಾರಿ ಗುರುತಿನ ಚೀಟಿ.

ರೈತ(ಕಿಸಾನ್) ಪಾಸ್ ಬುಕ್, ಸಿಜಿಹೆಚ್‍ಎಸ್/ಇಸಿಹೆಚ್‍ಎಸ್ ಗುರುತಿನ ಚೀಟಿ, ಲೋಕಸಭಾ ಸದಸ್ಯರು/ಶಾಸಕರು/ಯಾವುದೇ ಪತ್ರಾಂಕಿತ ಅಧಿಕಾರಿಗಳು ಅಥವಾ ತಹಸೀಲ್ದಾರ್ ಪತ್ರ ಶೀರ್ಷಿಕೆಯಲ್ಲಿ ಭಾವಚಿತ್ರದೊಂದಿಗೆ ನೀಡಲ್ಪಟ್ಟ ವಿಳಾಸದ ದೃಢೀಕರಣ ಪತ್ರ, ಗ್ರಾಪಂ ಮುಖ್ಯಸ್ಥರು/ತತ್ಸಮಾನರಿಂದ(ಗ್ರಾಮೀಣ ಪ್ರದೇಶ) ನೀಡಲ್ಪಟ್ಟ ವಿಳಾಸ ಪ್ರಮಾಣ ಪತ್ರ, ಆದಾಯ ತೆರಿಗೆ ನಿರ್ಧಾರಣಾ ಆದೇಶ, ವಾಹನ ನೋಂದಣಿ ಪ್ರಮಾಣ ಪತ್ರ, ನೋಂದಾಯಿತ ಮಾರಾಟ/ಗುತ್ತಿಗೆ/ಬಾಡಿಗೆ ಕರಾರು ಪತ್ರ, ಅಂಚೆ ಇಲಾಖೆಯಿಂದ ವಿಳಾಸ ಪತ್ರ, ರಾಜ್ಯ ಸರ್ಕಾರದಿಂದ ನೀಡಲ್ಪಟ್ಟ ಭಾವಚಿತ್ರದೊಂದಿಗಿನ ಜಾತಿ ಮತ್ತು ನಿವಾಸಿ ಪ್ರಮಾಣ ಪತ್ರ, ಸಂಬಂಧಿತ ರಾಜ್ಯ/ಯುಟಿ ಸರ್ಕಾರಗಳು/ ಆಡಳಿತ ಸಂಸ್ಥೆಗಳಿಂದ ನೀಡಲ್ಪಟ್ಟ ನ್ಯೂನತೆ ಗುರುತು ಚೀಟಿ/ ವಿಕಲಾಂಗ ವೈದ್ಯಕೀಯ ಪ್ರಮಾಣ ಪತ್ರ, ಗ್ಯಾಸ್ ಕನೆಕ್ಷನ್ ಬಿಲ್(3 ತಿಂಗಳ ನಿಕಟಪೂರ್ವ), ಮಕ್ಕಳ ಪಾಸ್‍ಪೋರ್ಟ್, ಪೋಷಕರ ಪಾಸ್‍ಪೋರ್ಟ್(ಮೈನರ್ ಆಗಿದ್ದಲ್ಲಿ) ಹೀಗೆ ಯಾವುದಾದರೊಂದು ದಾಖಲೆ ಸಲ್ಲಿಸುವುದು.

ಹೆಸರು, ಜನ್ಮದಿನಾಂಕ ಬದಲಾವಣೆ: 1ರಿಂದ 5ವರ್ಷ ದೊಳಗಿನ ಮಕ್ಕಳಿಗೆ ಪೋಷಕರ ಆಧಾರ್‍ಕಾರ್ಡ್ ಮತ್ತು ಮಕ್ಕಳ ಜನನ ಪ್ರಮಾಣಪತ್ರ, 5ರಿಂದ ಮೇಲ್ಪಟ್ಟು 18 ವರ್ಷ ದೊಳಗಿನ ಮಕ್ಕಳಿಗೆ ಶಾಲಾ ದಾಖಲಾತಿಯನ್ನು ತರಬೇಕು.

Translate »