ದೇವರಾಜ ಮಾರುಕಟ್ಟೆ ಕಟ್ಟಡ ನೆಲಸಮಕ್ಕೆ ಹೈಕೋರ್ಟ್ ಹೇಳಿಲ್ಲ
ಮೈಸೂರು

ದೇವರಾಜ ಮಾರುಕಟ್ಟೆ ಕಟ್ಟಡ ನೆಲಸಮಕ್ಕೆ ಹೈಕೋರ್ಟ್ ಹೇಳಿಲ್ಲ

June 16, 2019

ಮೈಸೂರು: ಮೈಸೂರಿನ ದೇವರಾಜ ಮಾರುಕಟ್ಟೆ ಪಾರಂಪರಿಕ ಕಟ್ಟಡವನ್ನು ನೆಲಸಮಗೊಳಿಸಬೇಕೆಂದು ಹೈಕೋರ್ಟ್ ತೀರ್ಪಿನಲ್ಲಿ ಹೇಳಿಲ್ಲ ಎಂದು ದೇವರಾಜ ಮಾರುಕಟ್ಟೆ ಬಾಡಿಗೆ ದಾರರ ಸಂಘದ ಅಧ್ಯಕ್ಷ ಪೈಲ್ವಾನ್ ಎಸ್. ಮಹದೇವು ತಿಳಿಸಿದ್ದಾರೆ.

ಈ ಕುರಿತು ಸ್ಪಷ್ಟನೆ ನೀಡಿರುವ ಅವರು, ತಾವು ಹೈಕೋರ್ಟ್‍ನಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿ ಸಂಬಂಧ ಏಪ್ರಿಲ್ 5 ರಂದು ನೀಡಿರುವ ತೀರ್ಪನ್ನು ತಪ್ಪಾಗಿ ಅರ್ಥೈಸಿ ಕೊಂಡಿರುವ ಮೈಸೂರು ಮಹಾನಗರ ಪಾಲಿಕೆಯು ಸಾರ್ವಜನಿಕರನ್ನು ತಪ್ಪು ದಾರಿಗೆಳೆಯುತ್ತಿದೆ ಎಂದಿದ್ದಾರೆ.

ಆದೇಶವನ್ನು ಸರಿಯಾಗಿ ಅರ್ಥೈಸಿ ಕೊಳ್ಳದೇ ಮನಸ್ಸೋ ಇಚ್ಛೆ ಪತ್ರಿಕಾ ಹೇಳಿಕೆ ನೀಡುತ್ತಿರುವುದನ್ನು ದೇವರಾಜ ಮಾರುಕಟ್ಟೆ ಕಟ್ಟಡ ಬಾಡಿಗೆದಾರರ ಸಂಘವು ತೀವ್ರವಾಗಿ ಖಂಡಿಸುತ್ತದೆ. ಪಾರಂಪರಿಕ ಕಟ್ಟಡವೆಂಬುದರ ಬಗ್ಗೆ ವರದಿ ಸಲ್ಲಿಸಲು ತಜ್ಞರನ್ನೊಳಗೊಂಡ ಜಿಲ್ಲಾಧಿಕಾರಿ ನೇತೃತ್ವದ ಪಾರಂಪರಿಕ ವಿಶೇಷ ಸಮಿತಿ ರಚಿಸಬೇಕೆಂಬ ಹೈಕೋರ್ಟ್ ತೀರ್ಪನ್ನು ಗಮನಿಸದೇ ಏಕಾಏಕಿ ದೇವರಾಜ ಮಾರುಕಟ್ಟೆ ಕಟ್ಟಡವನ್ನೇ ನೆಲ ಸಮಗೊಳಿಸಿ ಹೊಸದಾಗಿ ನಿರ್ಮಿಸ ಬೇಕೆಂಬ ಬಗ್ಗೆ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಮಹದೇವು ತಿಳಿಸಿದರು.

ರಾಜ್ಯ ಹೈಕೋರ್ಟ್ ತೀರ್ಪನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ತಪ್ಪು ಮಾಹಿತಿ ನೀಡಿರುವ ಮೈಸೂರು ಮಹಾನಗರ ಪಾಲಿಕೆಯು ನ್ಯಾಯಾಂಗ ನಿಂದನೆ ಮಾಡಿದೆ ಎಂದು ಆರೋಪಿಸಿದರು.

Translate »