ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ  ಅಧ್ಯಕ್ಷರಾಗಿ ಅಬ್ದುಲ್ಲಾ ಅಧಿಕಾರ ಸ್ವೀಕಾರ
ಮೈಸೂರು

ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾಗಿ ಅಬ್ದುಲ್ಲಾ ಅಧಿಕಾರ ಸ್ವೀಕಾರ

March 9, 2019

ಮೈಸೂರು: ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾಗಿ ಜೆಡಿಎಸ್ ಮುಖಂಡ ಅಬ್ದುಲ್ಲಾ ಅವರು ಇಂದು ಮಧ್ಯಾಹ್ನ ಅಧಿಕಾರ ವಹಿಸಿಕೊಂಡರು.

ನಿನ್ನೆಯಷ್ಟೇ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕವಾಗಿರುವ ಅಬ್ದುಲ್ಲಾ ಅವರು ಇಂದು ಮಧ್ಯಾಹ್ನ ದಸರಾ ವಸ್ತುಪ್ರದರ್ಶನ ಮೈದಾನದಲ್ಲಿರುವ ಕಚೇರಿಯಲ್ಲಿ ವ್ಯವಸ್ಥಾಪಕ ರೆಡ್ಡಪ್ಪರಿಂದ ಅಧಿಕಾರ ವಹಿಸಿಕೊಂಡರು.

ನಂತರ ಮಾತನಾಡಿದ ಅಬ್ದುಲ್ಲಾ ಅವರು, ವಸ್ತುಪ್ರದರ್ಶನ ಪ್ರಾಧಿಕಾರದಲ್ಲಿ ಮಾಡಬೇಕಾದ ಅಭಿವೃದ್ಧಿ ಕೆಲಸಗಳು, ಬಾಕಿ ಉಳಿದಿರುವ ಯೋಜನೆಗಳು ಹಾಗೂ ಪ್ರಗತಿ ಕುರಿತಂತೆ ಸದ್ಯದಲ್ಲೇ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದರು.

ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಪ್ರಸ್ತಾವನೆಗಳಿಗೆ ಅನುಮೋದನೆ ಪಡೆದು ನಂತರ ಹಂತ-ಹಂತವಾಗಿ ಯೋಜನೆ ಅನುಷ್ಠಾನಗೊಳಿಸಿ ವಸ್ತುಪ್ರದರ್ಶನಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಅವರು ನುಡಿದರು. ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್.ರಂಗಪ್ಪ, ಉಪ ಮೇಯರ್ ಶಫಿ ಅಹಮದ್, ಕೆ.ವಿ.ಮಲ್ಲೇಶ, ಎಸ್‍ಬಿಎಂ ಮಂಜು ಸೇರಿದಂತೆ ಎಲ್ಲಾ ಜೆಡಿಎಸ್ ಕಾರ್ಪೊರೇಟರ್‍ಗಳು ಹಾಗೂ ಬೆಂಬಲಿಗರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Translate »