ಮೈಸೂರು: ಮೈಸೂರಿನ ಉದ್ಯಮಿ ಹಾಗೂ ಹಲವಾರು ಸಾಮಾಜಿಕ ಸಂಘ-ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುವ ಪಿ.ಎಸ್.ಲೋಕೇಶ್ ಮತ್ತು ಶ್ರೀಮತಿ ಆರ್.ಸಹನಾ ಅವರ ಪುತ್ರಿ ಸಿಂಚನಾ ನಾಳೆ (ಶನಿವಾರ) ಸಂಜೆ 5.30ಕ್ಕೆ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ರಂಗ ಪ್ರವೇಶ ಮಾಡುತ್ತಾರೆ. ವಸುಂಧರಾ ಪರ್ಫಾ ಮಿಂಗ್ ಆಟ್ರ್ಸ್‍ನ ವಿದ್ಯಾರ್ಥಿಯಾದ ಸಿಂಚನಾ ಡಾ. ವಸುಂಧರಾ ದೊರೆಸ್ವಾಮಿ ಅವರಿಂದ ನಾಟ್ಯ ಪ್ರಾವೀಣ್ಯತೆ ಪಡೆದಿದ್ದಾರೆ.
ಸುತ್ತೂರು ಶ್ರೀಗಳ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಂಗೀತ ವಿವಿ ವಿಶ್ರಾಂತ ಕುಲಪತಿ ಡಾ. ಸರ್ವಮಂಗಳಾ ಶಂಕರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಪಿಎಸಿ ಅಧ್ಯಕ್ಷ ಕೆ.ವಿ.ಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಹೆಸರಾಂತ ಕವಿ ಕೆ.ಸಿ.ಶಿವಪ್ಪ, ಕೆಪಿಎಸ್‍ಸಿ ಹಂಗಾಮಿ ಅಧ್ಯಕ್ಷ ಎಸ್.ಪಿ.ಷಡಕ್ಷರಸ್ವಾಮಿ, ನಿವೃತ್ತ ಡಿಜಿಪಿ ಎಲ್. ರೇವಣಸಿದ್ದಯ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮೈಸೂರು ಜೆಸಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 3ನೇ ವರ್ಷದ ಜೈವಿಕ ತಂತ್ರಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಸಿಂಚನಾ ಭರತನಾಟ್ಯದ ಕಿರಿಯ, ಹಿರಿಯ ಹಾಗೂ ವಿದ್ವತ್ ದರ್ಜೆಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈಗಾಗಲೇ ಚಿಗುರು ಸಂಜೆ, ಪಲ್ಲವೋತ್ಸವ ಇನ್ನಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರೊಂದಿಗೆ ತಮ್ಮ ಗುರು ಡಾ. ವಸುಂಧರಾ ದೊರೆಸ್ವಾಮಿ ಅವರೊಂದಿಗೆ ಖ್ಯಾತ ರೂಪಕಗಳಾದ ಓಂಕಾರಿಣಿ ವಿದ್ಯುನ್ಮಾದನಿಕ, ಪಂಚಮಹಾಭೂತ, ಸಂಪೂರ್ಣ ರಾಮಾಯಣ, ಹೀಗೆ ನಾನಾ ನೃತ್ಯ ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ. ತಾನು ವ್ಯಾಸಂಗ ಮಾಡುತ್ತಿರುವ ದೇಸೀ ಕಾಲೇಜಿನ ಮೂಲಕ 2018ರಲ್ಲಿ ಐಐಟಿ ಗೌಹಾತಿ, ಬಿಡ್ಸ್ ಪಿಲಾನಿ ಗೋವಾದಲ್ಲಿ ನಡೆದ ವಾರ್ಷಿಕ ಕಲಾ ಮೇಳಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.