ಚಿರತೆ, ವಾನರರಿಗೆ ಸಿಂಹಸ್ವಪ್ನವಾಗಿರುವ `ಟೈಗರ್ ಡಾಲ್’ !
ಮೈಸೂರು

ಚಿರತೆ, ವಾನರರಿಗೆ ಸಿಂಹಸ್ವಪ್ನವಾಗಿರುವ `ಟೈಗರ್ ಡಾಲ್’ !

March 9, 2019

ಕಂಗೆಟ್ಟ ರೈತರಿಗೆ ವ್ಯಾಘ್ರನ ಕೃಪಾಕಟಾಕ್ಷ
ಮೈಸೂರು: ಮೈಸೂರಿನ ಮಂಡ ಕಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಿರುವ ಆತಂಕದ ನಡುವೆಯೇ ರೈತರೊಬ್ಬರು ರಕ್ಷಣೆಗೆ ಸರಳ ಹಾಗೂ ಪರಿಣಾಮಕಾರಿ ಉಪಾಯವನ್ನು ಕಂಡು ಕೊಂಡಿದ್ದಾರೆ. ಮೈಸೂರು ತಾಲೂಕಿನ ಕೂಡನಹಳ್ಳಿ ಗ್ರಾಮದ ರೈತ ಬಸವರಾಜು, ಹುಲಿಯ ಬೊಂಬೆಯನ್ನು ಬಳಸಿ, ಚಿರತೆ ಹಾಗೂ ವಾನರಗಳ ಹಾವಳಿಗೆ ಬ್ರೇಕ್ ಹಾಕುವ ಮೂಲಕ ಸುತ್ತಮುತ್ತಲ ಗ್ರಾಮಸ್ಥರ ಹುಬ್ಬೇರುವಂತೆ ಮಾಡಿದ್ದಾರೆ.

ಮಂಡಕಳ್ಳಿ ವಿಮಾನ ನಿಲ್ದಾಣದ ಕಾಂಪೌಂಡ್ ಒಳಾವರಣದಲ್ಲೇ ಚಿರತೆ ಕಾಣಿಸಿ ಕೊಂಡಿತ್ತು. ಸುತ್ತಮುತ್ತಲ ಗ್ರಾಮಗಳಲ್ಲೂ ಚಿರತೆಗಳ ಹಾವಳಿ ಹೆಚ್ಚಾಗಿದೆ. ಜಾನುವಾರು ಗಳ ಮೇಲೆ ದಾಳಿ ನಡೆಸುವ ಚಿರತೆಗಳ ಹೆಜ್ಜೆ ಗುರುತು ಕಂಡ ಜನ, ಜಮೀನಿಗೆ ಹೋಗುವುದಕ್ಕೂ ಭಯಪಡುತ್ತಿದ್ದಾರೆ. ಚಿರತೆ ಸೆರೆಗೆ ಆಗ್ರಹಿಸಿದರೂ ಅರಣ್ಯ ಇಲಾಖೆ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಜನ ಆರೋಪಿಸುತ್ತಿದ್ದಾರೆ. ಹೀಗಿರುವಾಗ ರೈತ ಬಸವರಾಜು, ಥೇಟ್ ಹುಲಿಯಂತೆ ಕಾಣುವ ಬೊಂಬೆಯೊಂದನ್ನು ತಂದು ತಮ್ಮ ಜಮೀನಿನಲ್ಲಿ ಮರವೊಂದಕ್ಕೆ ಕಟ್ಟಿದ್ದಾರೆ. ನಂತರ ಜಮೀನಿನಲ್ಲಿ ಚಿರತೆ ಹೆಜ್ಜೆಗಳೇ ಕಾಣಿಸುತ್ತಿಲ್ಲವಂತೆ. ಅಲ್ಲದೆ ತೆಂಗಿನ ಮರಗಳಿಗೆ ಲಗ್ಗೆ ಇಟ್ಟು, ಎಳೆನೀರನ್ನು ಕಿತ್ತು ಹಾಳು ಮಾಡುತ್ತಿದ್ದ ವಾನರಗಳೂ ಸುಳಿಯುತ್ತಿಲ್ಲವಂತೆ. ಕೃಷಿ ಕಾರ್ಮಿಕರೂ ಯಾವುದೇ ಭಯವಿಲ್ಲದೆ ಕೆಲಸಕ್ಕೆ ಬರುತ್ತಿದ್ದಾರಂತೆ. ಅನೇಕ ರೈತರು ಚಿರತೆ ಹಾವಳಿಯಿಂದ ರಕ್ಷಣೆ ಪಡೆಯಲು ಇದೇ ಮಾಸ್ಟರ್ ಪ್ಲಾನ್ ಅಳವಡಿಸಿಕೊಳ್ಳುತ್ತಿದ್ದಾರೆ.

Translate »