ನಾನು ಮೂಲತಃ ಮಂಡ್ಯದ ಮಗ, ಮದುವೆಯಾಗಿ ಮಂಡ್ಯದವನಾಗಬೇಕಿಲ್ಲ ಮೈತ್ರಿ ಅಭ್ಯರ್ಥಿ ನಿಖಿಲ್‍ಗೆ ಅಭಿಷೇಕ್ ಅಂಬರೀಷ್ ಟಾಂಗ್
ಮಂಡ್ಯ

ನಾನು ಮೂಲತಃ ಮಂಡ್ಯದ ಮಗ, ಮದುವೆಯಾಗಿ ಮಂಡ್ಯದವನಾಗಬೇಕಿಲ್ಲ ಮೈತ್ರಿ ಅಭ್ಯರ್ಥಿ ನಿಖಿಲ್‍ಗೆ ಅಭಿಷೇಕ್ ಅಂಬರೀಷ್ ಟಾಂಗ್

March 30, 2019

ಮದ್ದೂರು: ನಾನು ಮೂಲತಃ ಮಂಡ್ಯದವನು. ಯಾರನ್ನೋ ಮದುವೆಯಾಗಿ ನಾನು ಮಂಡ್ಯದವನು ಆಗಬೇಕಾದ ಅವ ಶ್ಯಕತೆ ಇಲ್ಲ ಎಂದು ಮೈತ್ರಿ ಅಭ್ಯರ್ಥಿ ನಿಖಿಲ್‍ಗೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪುತ್ರ ಅಭಿಷೇಕ್ ಟಾಂಗ್ ನೀಡಿದರು.
ಮದ್ದೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೋಡ್ ಶೋ ನಡೆಸಿ ತಮ್ಮ ತಾಯಿ ಸುಮಲತಾ ಪರ ಪ್ರಚಾರ ಮಾಡುತ್ತಿದ್ದ ಅವರು, ಅಂಬರೀಷ್ ಶೈಲಿಯಲ್ಲಿ ಜನ ರೊಂದಿಗೆ ಸಂವಾದದ ರೀತಿ ಮಾತನಾಡಿ, ಚಪ್ಪಾಳೆ ಗಿಟ್ಟಿಸಿದರು. ನಮ್ಮ ಸ್ವಾಭಿಮಾನವನ್ನು ಕಾಪಾಡಲು ಯಾರೂ ಬರುವುದಿಲ್ಲ, ನಾವೇ ಕಾಪಾಡಿಕೊಳ್ಳಬೇಕು ಎಂದು ಅವರು ಹೇಳುತ್ತಿದ್ದಾಗ ಜನರ ಗುಂಪಿನಿಂದ `ನಿಖಿಲ್ ಮಂಡ್ಯ ಅಳಿಯ ಆಗ್ತಾರಂತೆ’ ಎಂಬ ಮಾತು ತೂರಿ ಬಂದಾಗ `ನಾನು ಎಲ್ಲಿಂದನೋ ಬಂದಿಲ್ಲಪ್ಪಾ, ನಾನು ಮಂಡ್ಯದವನೇ. ಯಾರನ್ನೋ ಮದುವೆಯಾಗಿ ಮಂಡ್ಯದವನಾಗೋ ಅವಶ್ಯಕತೆ ಇಲ್ಲ. ನಾನು ಮಂಡ್ಯ ಮಗ ಎಂದರು.

ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಅಂಬರೀಷ್ ಅಣ್ಣನ ಆತ್ಮಕ್ಕೆ ಶಾಂತಿ ಸಿಗುತ್ತಂತೆ ಎಂದು ಅಭಿಷೇಕ್ ಹೇಳುತ್ತಿದ್ದಾಗ ಜನರ ಕಡೆಯಿಂದ ಯಾವುದೋ ಒಂದು ಮಾತು ಕೇಳಿ ಬಂದಾಗ `ನಾನು ಅದನ್ನೇ ಯೋಚನೆ ಮಾಡ್ತಾ ಇದ್ದೆ. ಏನಪ್ಪಾ ಹ್ಯೀಗೆ ಹೇಳ್ಬಿಟ್ಟಿದ್ದಾರಲ್ಲಾ’ ಎಂದು ಅಭಿಷೇಕ್ ಹೇಳುತ್ತಿದ್ದಾಗಲೇ ಜನರ ನಡುವಿನಿಂದ ಯಾರೋ ಏನೋ ಮಾತನಾಡಲು ಆರಂಭಿಸಿದಾಗ `ಸುಮ್ನೆ ಇರೋ ಲೋ’ ಎಂದು ಅಂಬರೀಷ್ ಶೈಲಿಯಲ್ಲಿಯೇ ಅಭಿಷೇಕ್ ಗದರಿದಾಗ ಕರಘೋಷ ಮುಗಿಲು ಮುಟ್ಟಿತು. ಅವರ್ ಹೇಳ್ತಾರೆ, ನಮ್ಮ ಮುಖದಲ್ಲಿ ನೋವು ಕಾಣಿಸ್ತಾ ಇಲ್ವಂತೆ. ನಾವೇನು ಮೈಕ್ ಹಿಡ್ಕೊಂಡು, ಟವಲ್ ಹಿಡ್ಕೊಂಡು ಅಳಬೇಕಾ? ಎಂದು ಹೇಳುತ್ತಾ ಸಿಎಂ ಕುಮಾರಸ್ವಾಮಿ ಕೆಂಪು ಟವಲ್‍ನಲ್ಲಿ ಕಣ್ಣೀರು ಒರೆಸಿಕೊಳ್ಳುವಂತೆ ಅಭಿನಯಿಸಿದರು. ಮುಂದುವರೆದು ನಾವು ಅಳಲ್ಲ. ನೀವೆಲ್ಲಾ ಇರೋವಾಗ ನಾವೇಕೆ ಅಳಬೇಕು? ಎಂದು ಪ್ರಶ್ನಿಸಿದರು.

ಸ್ಟ್ರೈಟ್ ಫೈಟ್‍ನಲ್ಲಿ ಗೆಲ್ಲೋಕೆ ಆಗೋಲ್ಲ ಅಂತ ಅವರಿಗೆ ಅರ್ಥವಾಗಿರಬೇಕು. ಅದಕ್ಕೆ ಮೂರು ಜನ ಸುಮಲತಾರನ್ನು ನಿಲ್ಸಿದ್ದಾರೆ. ಏನೇನೋ ಗಿಮಿಕ್ ಮಾಡ್ತಾರೆ ಎಂದು ಅಭಿಷೇಕ್ ಹೇಳುತ್ತಿದ್ದಾಗ ಜನರ ನಡುವೆ `ಅದನ್ನ ನಂಬೋಕೆ ನಾವು ದಡ್ಡರಲ್ಲ’ ಎಂಬ ಕೂಗು ಕೇಳಿಬಂತು. ತಕ್ಷಣವೇ ಪ್ರತಿಕ್ರಿಯಿಸಿದ ಅಭಿಷೇಕ್, ನಾವು ದಡ್ಡರಲ್ಲ ಎಂಬ ಮಾತನ್ನು 18ನೇ ತಾರೀಖು ಮಾಡಿ ತೋರಿಸಿ ಎಂದರು.

ಅವರು ಇಷ್ಟ ಬಂದ ಹಾಗೆ ಹೇಳಲಿ, ನಮ್ಮ ಮೇಲೆ ಏನಾದರೂ ಆರೋಪ ಮಾಡಲಿ, ಅವರ್ಯಾರನ್ನೂ ನಂಬಬೇಡಿ, ನಮ್ಮನ್ನು ನಂಬಿ. ಇಲ್ಲಿ ಇರುವವರು ನಾವು. ನಮ್ಮ ತಾಯಿಗೆ ಆಶೀರ್ವಾದ ಮಾಡಿ. ನಿಮ್ಮ ಸೇವೆ ಮಾಡುವುದಕ್ಕೆ ಒಂದು ಅವಕಾಶ ಕೊಡಿ. ನಾವು ಏನೆಂದು ಅವರಿಗೆ ತೋರಿಸೋಣ ಎಂದರು.

ಅಭಿಷೇಕ್ ಅವರ ಭಾಷಣದುದ್ದಕ್ಕೂ ನೆರೆದಿದ್ದ ಜನರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕೆಲ ಮಾತುಗಳನ್ನು ಮಧ್ಯೆ-ಮಧ್ಯೆ ಅಭಿಷೇಕ್ ಅವರಿಗೆ ಹೇಳುತ್ತಾ, ಅವರು ಅದಕ್ಕೆ ಪ್ರತ್ಯುತ್ತರ ನೀಡುತ್ತಿದ್ದಾಗ ಚಪ್ಪಾಳೆ ತಟ್ಟಿ, ಸಂಭ್ರಮಿಸಿದರು.

Translate »