ಮತದಾನ ಮಾರನೇ ದಿನ ಮಂಡ್ಯದಲ್ಲಿ ಅಭಿಷೇಕ್ ಜಾಲಿಯೋ ಜಾಲಿ
ಮಂಡ್ಯ

ಮತದಾನ ಮಾರನೇ ದಿನ ಮಂಡ್ಯದಲ್ಲಿ ಅಭಿಷೇಕ್ ಜಾಲಿಯೋ ಜಾಲಿ

April 20, 2019

ಮಂಡ್ಯ: ಚುನಾವಣಾ ಅಬ್ಬರ ಮುಗಿದ ಮರುದಿನ ಶುಕ್ರವಾರ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪುತ್ರ ಅಭಿಷೇಕ್ ಅವರು ಬರ್ಮುಡಾ ನಿಕ್ಕರ್, ಬಿಳಿ ಟಿ-ಶರ್ಟ್ ಮತ್ತು ಬಿಳಿ ಕ್ಯಾಪ್ ಧರಿಸಿ ಮಂಡ್ಯ ಜಿಲ್ಲೆಯ ವಿವಿಧೆಡೆ ಜಾಲಿ ರೈಡ್ ಮೂಲಕ ಸ್ನೇಹಿತರು ಮತ್ತು ಅಭಿಮಾನಿಗಳೊಂದಿಗೆ ಕಾಲ ಕಳೆದರು.

ಇಂದು ಬೆಳಿಗ್ಗೆ ಬೆಂಗಳೂರಿನಿಂದ ಕಾರಿ ನಲ್ಲಿ ಹೊರಟ ಅವರು, ಮದ್ದೂರಿನಲ್ಲಿ ಕೆಲ ಸ್ನೇಹಿತರು ಮತ್ತು ಅಭಿಮಾನಿಗಳನ್ನು ಪ್ರೀತಿಯಿಂದ ಮಾತನಾಡಿಸಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಂಡ್ಯ ನಗರಕ್ಕೆ ಆಗ ಮಿಸಿದರು. ಇಂಡುವಾಳು ಸಚ್ಚಿದಾನಂದ ಮತ್ತಿತರರೊಂದಿಗೆ ಮಹಾವೀರ ವೃತ್ತದಲ್ಲಿ ರುವ ಚಂದ್ರು ಎಂಬುವರ ನಂದಿನಿ ಮಿಲ್ಕ್ ಪಾರ್ಲರ್‍ಗೆ ಬಂದ ಅವರು, ಪಾರ್ಲರ್ ಮುಂದಿದ್ದ ಬೆಂಚ್ ಮೇಲೆ ಕುಳಿತು ಸ್ನೇಹಿತರೊಂದಿಗೆ ಅಂಬರೀಶ್ ಶೈಲಿಯಲ್ಲಿ ಹರಟತೊಡಗಿದರು.

ಮಿಲ್ಕ್ ಪಾರ್ಲರ್‍ನಲ್ಲಿ ಟೀ ಕುಡಿದ ಅವರು, ಲೋಕಾಭಿರಾಮವಾಗಿ ಅಲ್ಲಿದ್ದವ ರೊಂದಿಗೆ ಸಂಭಾಷಿಸಿದರು. ಅಲ್ಲಿಗೆ ಬಂದ ಅಭಿಮಾನಿಗಳನ್ನುದ್ದೇಶಿಸಿ, `ಈ ಡ್ರೈವರ್ನ ಸಿಂಗಪೂರ್‍ಗೆ ಹೊಡಿ ಅಂದ್ರೆ ಇಲ್ಲಿಗೆ ಕರ್ಕೊಂಡ್‍ಬಂದ್ಬಿಟ್ಟ ನೋಡಿ, ನಾನ್ ಇಲ್ಲೇ ಇದ್ದೀನಿ. ಸಿಂಗಪೂರ್‍ನಲ್ಲಿಲ್ಲ’ ಎಂದು ಚಟಾಕಿ ಹಾರಿಸಿದರು. ಈ ವೇಳೆ ಅಲ್ಲಿಗೆ ಬಂದ ಅಭಿಮಾನಿಯೊಬ್ಬರು `ಹ್ಯಾಗಿದ್ದೀರಿ ಅಣ್ಣಾ’ ಎಂದಾಗ `ಆರಾಮಾಗಿದ್ದೀನಿ, ಮೈಕಿಲ್ಲ, ಪಟಾಕಿ ಸೌಂಡ್ ಇಲ್ಲ’ ಎಂದು ನಗುತ್ತಾ ಹೇಳಿ ದರು. ಒಂದು ಡೈಲಾಗ್ ಹೊಡೀರಿ ಎಂದು ಒಬ್ಬರು ಕೇಳಿದಾಗ ಅಂಬರೀಶ್ ಶೈಲಿಯಲ್ಲೇ `ಅವನ್ ಡೈಲಾಗ್ ಹೊಡಿ, ಡ್ಯಾನ್ಸ್ ಮಾಡು ಅಂತ ಕೇಳ್ಬಿಟ್ರೆ ನಾವ್ ಹಂಗೇ ಮಾಡ್ಬಿ ಡ್ತೀವಾ’ ಎಂದು ಪ್ರಶ್ನಿಸಿ ರಂಜಿಸಿದರು.

ಇಂದು ಇಂಡುವಾಳು ಸಚ್ಚಿದಾನಂದ ಅವರ ಹುಟ್ಟುಹಬ್ಬದ ಅಂಗವಾಗಿ ಸ್ನೇಹಿತ ರೊಬ್ಬರು ಮಿಲ್ಕ್ ಪಾರ್ಲರ್‍ಗೆ ಕೇಕ್ ತಂದು ಇಟ್ಟರು. ಸಚ್ಚಿದಾನಂದ ಜೊತೆಯಲ್ಲೇ ಕೇಕ್ ಕತ್ತರಿಸಿ ಶುಭಾಶಯ ಕೋರಿದ ಅಭಿಷೇಕ್, ಸಚ್ಚಿದಾನಂದಗೆ ಕೇಕ್ ತಿನ್ನಿಸಿದ್ದಲ್ಲದೇ, ಕ್ರೀಮ್ ತೆಗೆದು ಅವರ ಮೂಗಿಗೆ ಹಚ್ಚಿ ಖುಷಿಪಟ್ಟರು.

ಈ ವೇಳೆ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜೊತೆ ಮಾತನಾಡಿದ ಅವರು, `ಎಲೆಕ್ಷನ್ ಮುಗಿದ ಮರು ದಿನಾನೇ ಅಂದ್ರೆ ಇವತ್ತೇ ನಾನು ಸಿಂಗಪೂರ್‍ಗೆ ಹೋಗಿ ಬಿಡ್ತೇನೆ ಎಂದು ಏರ್ ಟಿಕೆಟ್ ಸಮೇತ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದ ಕಾರಣಕ್ಕಾಗಿ ನಾನು ಇಲ್ಲಿಗೆ ಬಂದಿಲ್ಲ. ಈ ಹೋಟೆಲ್‍ನಲ್ಲಿ ಬೆಲ್ಲದ ಟೀ ಚೆನ್ನಾಗಿ ಮಾಡುತ್ತಾರೆ ಎಂದು ಕೆಲ ದಿನಗಳ ಹಿಂದೆ ಸಚ್ಚಿ (ಸಚ್ಚಿದಾನಂದ) ಇಲ್ಲಿಗೆ ಕರೆದುಕೊಂಡು ಬಂದಿದ್ದರು. ಆವತ್ತು ಈ ಅಂಗ್ಡಿಯವನು ನನಗೆ ಮೋಸ ಮಾಡ್ಬಿಟ್ಟ. ಬೆಲ್ಲದ ಟೀ ಬದಲಾಗಿ ಸಕ್ಕರೆ ಟೀ ಕೊಟ್ಬಿಟ್ಟ’ ಎಂದು ನಗುತ್ತಾ ಹೇಳಿದರು. ನಾನು ಇಲ್ಲಿಗೆ ಆಗಾಗ ಬರ್ತೇನೆ. ರಿಯಲಿ ಟೀ ಚೆನ್ನಾಗಿದೆ ಎಂದು ಹೇಳಿದರಲ್ಲದೇ, ನಾನು ಸಿಂಗಪೂರ್‍ಗೆ ಹೋಗುವುದಾಗಿ ವೈರಲ್ ಆಗಿರುವ ಬಗ್ಗೆ ನೀವು (ಮಾಧ್ಯಮ ದವರು) ಕೇಳಿದ್ದಕ್ಕೆ ಮಹಾವೀರ್ ಸರ್ಕಲ್‍ನಲ್ಲೇ ಟೀ ಕುಡೀತಾ ಇರ್ತೀನಿ ಬಂದ್ ನೋಡಿ ಎಂದು ಹೇಳಿದ್ದೆ ಅಷ್ಟೇ ಹೊರತು, ವೈರಲ್ ಕಾರಣದಿಂದ ಬಂದಿ ದ್ದಲ್ಲ ಎಂದು ಸ್ಪಷ್ಟಪಡಿಸಿದರು.

ಚುನಾವಣೆ ಶಾಂತಿಯುತವಾಗಿ ನಡೆದಿದೆ. ಜನರು ನಮ್ಮನ್ನ ಕೈ ಹಿಡೀತಾರೆ ಎಂದು ನಂಬಿದ್ದೇನೆ. ಬೆಟ್ಟಿಂಗ್ ನಡೀತಾ ಇದೆ ಎಂದು ಮಾಧ್ಯಮಗಳ ಮೂಲಕ ಕೇಳಿದ್ದೇನೆ. ಆದರೆ ನಮ್ಮ ಪರವಾಗಿ ಆಗಲೀ, ಅವರ (ಜೆಡಿಎಸ್) ಪರವಾಗಿ ಆಗಲೀ, ಯಾರೂ ಬೆಟ್ಟಿಂಗ್ ಕಟ್ಟೋದು ಬೇಡ. ಅದೂ ಒಂದು ರೀತಿ ಜೂಜಾಟ. ಅದು ಒಳ್ಳೆಯದಲ್ಲ. ಕಷ್ಟಪಟ್ಟು ದುಡಿದ ಹಣವನ್ನ ಬೆಟ್ಟಿಂಗ್ ಕಟ್ಟಿ ಯಾರೂ ಕಳೆದುಕೊಳ್ಳುವುದು ಬೇಡ ಎಂದು ಮನವಿ ಮಾಡಿದರು.

ನಂತರ ಚಾಮುಂಡೇಶ್ವರಿ ನಗರದಲ್ಲಿ ರುವ ಅವರ ಬಾಡಿಗೆ ಮನೆಗೆ ತೆರಳಿ ಸ್ನೇಹಿತ ರೊಂದಿಗೆ ಊಟ ಮಾಡಿ, ಸ್ವಲ್ಪ ಕಾಲ ವಿಶ್ರಾಂತಿ ಪಡೆದು ಮಧ್ಯಾಹ್ನ 3.30ರ ಸುಮಾರಿಗೆ ನಾಗಮಂಗಲ ಮೂಲಕ ಬೆಂಗಳೂರಿಗೆ ವಾಪ ಸ್ಸಾದರು. ಈ ಮಾರ್ಗದಲ್ಲಿ ಕೂಡ ತಮ್ಮ ಅಭಿಮಾನಿಗಳನ್ನು ಅವರು ಭೇಟಿ ಮಾಡಿ ಸಮಾಯೋಚಿಸಿದರು ಎಂದು ಹೇಳಲಾಗಿದೆ.

Translate »