ಇಂದು ಅಗ್ರಹಾರಬಾಚಹಳ್ಳಿ ಸಿಡಿ ಹಬ್ಬ
ಮಂಡ್ಯ

ಇಂದು ಅಗ್ರಹಾರಬಾಚಹಳ್ಳಿ ಸಿಡಿ ಹಬ್ಬ

April 20, 2019

ಕೆ.ಆರ್.ಪೇಟೆ: ತಾಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದೇವತೆ ಶ್ರೀ ಲಕ್ಷ್ಮಿದೇವಿ(ಬಾಚಳ್ಳಮ್ಮ) ಅಮ್ಮನವರ ಸಿಡಿ ಹಬ್ಬದ ಅಂಗವಾಗಿ ನಡೆಯುವ ಬ್ರಹ್ಮ ರಥೋತ್ಸವವು ಇದೇ ಏ.20ರಂದು ಮಧ್ಯಾಹ್ನ 3ಗಂಟೆಗೆ ನಡೆಯಲಿದೆ.

ಏ.18ರಂದು ರಂಗಕುಣಿತ, ಏ.19 ರಂದು ಬೆಳಿಗ್ಗೆ ಹೂವಿನ ರಥೋತ್ಸವ, ಸಿಡಿ, ಬಾಯಿಬೀಗ, ಕೊಂಡೋತ್ಸವ, ಮಡೆ ಉತ್ಸವ, ಕನ್ನಂಕಾಡಿ ಉತ್ಸವ ಗಳು, ರಥಕ್ಕೆ ಕಳಸೋತ್ಸವ ಮತ್ತಿತರರ ಧಾರ್ಮಿಕ ಕಾರ್ಯಕ್ರಮಗಳು ಸಡಗರ ಸಂಭ್ರಮದಿಂದ ನಡೆದವು. ಏ.20 ರಂದು ಬೆಳಿಗ್ಗೆ ಪಲ್ಲಕ್ಕಿ ರಥೋತ್ಸವ, ಮಧ್ಯಾಹ್ನ 3 ಗಂಟೆಗೆ ದೇವಿಯ ಮಹಾ ರಥೋತ್ಸವ ನಡೆಯಲಿದೆ. ಏ.21ರಂದು ಜಾತ್ರೆ, ಓಕಳಿಯಾಟ, ಕೋಲಾಟ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಏ.22ರಂದು ಸೋಮನ ಕುಣಿತ, ಮನೆ ಮನೆಯಲ್ಲಿ ಸೋಮ ದೇವರಿಗೆ ವಿಶೇಷ ಪೂಜಾ ಕಾರ್ಯಕ್ರಮ, ಮಜ್ಜಿಗೆ ಪಾನಕ ವಿತರಣೆ ಕಾರ್ಯಕ್ರಮಗಳು ನಡೆಯಲಿವೆ ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿ ದೇವಿಯ ಕೃಫೆಗೆ ಪಾತ್ರರಾಗಬೇಕೆಂದು ಹಬ್ಬ ಆಚರಣಾ ಸಮಿತಿಯು ತಿಳಿಸಿದೆ.

ಸಿಡಿಹಬ್ಬ ವಿಶೇಷ: ಪ್ರತಿ ವರ್ಷವೂ ಯುಗಾದಿಯ ನಂತರ ಶುಕ್ರವಾರ ಬ್ರಾಹ್ಮಣರ ಮನೆಗಳಲ್ಲಿ ಮಳೆಬೀಜ ಸಂಗ್ರಹಿಸುವ ಮೂಲಕ ಅದರ ಮುಂದಿನ ಶುಕ್ರವಾರದಂದು ಹಬ್ಬವನ್ನು ಆಚರಿಸಲು ಖಚಿತ ನಿರ್ಧಾರಕ್ಕೆ ಕೈಗೊಳ್ಳಲಾಗುತ್ತದೆ. ದೇವಿಯ ಮಹಾರಥೋ ತ್ಸವವು ಸುಮಾರು 1ಕಿ.ಮೀ ದೂರದಷ್ಟು ಕಡಿದಾದ ಗದ್ದೆ ಬದುವಿನಂತಿರುವ ಏರಿಳಿತದ ದಾರಿಯಲ್ಲಿ ಯಾವುದೇ ವಿಘ್ನವಿಲ್ಲದಂತೆ ನಡೆಯುವುದು ದೇವಿಯ ಮಹಿಮೆಗೆ ಸಾಕ್ಷಿಯಾಗಿದೆ. ತಾಲೂಕಿನ ಮಡುವಿನಕೋಡಿ, ಹರಿರಾಯನಹಳ್ಳಿ, ಚಿಕ್ಕೋಸಹಳ್ಳಿ, ಕೆ.ಆರ್.ನಗರದ ದೇವಿತಂದ್ರಿ, ಚನ್ನರಾಯಪಟ್ಟಣದ ದಡಿಘಟ್ಟ, ನಾಗರಘಟ್ಟ, ಬೇಲದಕೆರೆ, ದೂರದ ಪಿರಿಯಾಪಟ್ಟಣದಲ್ಲೂ ದೇವಿಯ ಒಕ್ಕಲಿನವರಿದ್ದು ಎಲ್ಲರೂ ಈ ಸಿಡಿಹಬ್ಬಕ್ಕೆ ಬಂದು ಭಾಗವಹಿಸುತ್ತಾರೆ. ನಾಡಿನ ಜಾನಪದ ತಜ್ಞ ಡಾ.ಪಿ.ಕೆ.ರಾಜಶೇಖರ್ ಅವರ ಕುಟುಂಬದವರೂ ಸಹ ದೇವಿಯ ಭಕ್ತರಾಗಿದ್ದಾರೆ ಎನ್ನುವುದು ವಿಶೇಷವಾಗಿದೆ.

Translate »