ಸರ್ಕಾರಿ ಅತಿಥಿ ಗೃಹ ಆವರಣ, ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ ತಕ್ಷಣ ನಂದಿಸಿ, ಅನಾಹುತ ತಪ್ಪಿಸಿದ ಅಗ್ನಿಶಾಮಕ ದಳ
ಮೈಸೂರು

ಸರ್ಕಾರಿ ಅತಿಥಿ ಗೃಹ ಆವರಣ, ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ ತಕ್ಷಣ ನಂದಿಸಿ, ಅನಾಹುತ ತಪ್ಪಿಸಿದ ಅಗ್ನಿಶಾಮಕ ದಳ

February 4, 2020

ಮೈಸೂರು, ಫೆ.3(ಎಸ್‍ಬಿಡಿ)- ಮೈಸೂರಿನ ಸರ್ಕಾರಿ ಅತಿಥಿ ಗೃಹ ಆವರಣ ಹಾಗೂ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಕಂಡುಬಂದ ಆಕಸ್ಮಿಕ ಬೆಂಕಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.

ಕಿಡಿಗೇಡಿಗಳಿಂದಾಗಿ ಸರ್ಕಾರಿ ಅತಿಥಿ ಗೃಹದ ಆವರಣದಲ್ಲಿ ಬೆಂಕಿ ಕಾಣಿಸಿಕೊಂಡು, ಸುಮಾರು ಆರೇಳು ಎಕರೆ ಪ್ರದೇಶಕ್ಕೆ ಆವರಿಸಿತ್ತು. ಹುಲ್ಲು ಒಣಗಿದ್ದರಿಂದ ಬಹುಬೇಗ ಬೆಂಕಿ ವ್ಯಾಪಿಸಿತ್ತು. ವಿಷಯ ತಿಳಿದ ಬನ್ನಿಮಂಟಪ ಹಾಗೂ ಸರಸ್ವತಿಪುರಂ ಅಗ್ನಿಶಾಮಕ ಠಾಣೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಎರಡು ವಾಹನಗಳ ಮೂಲಕ ಬೆಂಕಿಯನ್ನು ನಂದಿಸಿ ದರು. ಹುಲ್ಲು ಹಾಗೂ ಕುರುಚಲು ಗಿಡಗಳು ಸುಟ್ಟು ಹೋಗಿವೆ. ಗಿಡ-ಮರಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದರು.

ಹೆಬ್ಬಾಳು ಕೈಗಾರಿಕಾ ಪ್ರದೇಶ, ಇನ್ಫೋಸಿಸ್ ಸಮೀಪ ಖಾಲಿ ನಿವೇಶನದಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಗಿಡಗಂಟಿಗಳಿಗೆ ಬೆಂಕಿ ತಗುಲಿ, ಸುತ್ತಮುತ್ತ ವ್ಯಾಪಿಸಿತ್ತು. ಕೂಡಲೇ ಹೆಬ್ಬಾಳು ಅಗ್ನಿ ಶಾಮಕ ಠಾಣೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸಿ, ಸಂಭವಿಸ ಬಹುದಾಗಿದ್ದ ಅಪಾಯವನ್ನು ತಡೆದರು.

ಬೇಸಿಗೆಯಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ದೊಡ್ಡ ಅಗ್ನಿ ದುರಂತ ಸಂಭವಿಸುವ ಸಾಧ್ಯತೆ ಇರುತ್ತದೆ. ಬೀಡಿ-ಸಿಗರೇಟು ಸೇದಿ, ಬೆಂಕಿ ನಂದಿಸದೆ ಹಾಗೆಯೇ ಎಲ್ಲೆಂದರಲ್ಲಿ ಬಿಸಾಡಿ ದರೆ ಅದು ದೊಡ್ಡ ಜ್ವಾಲೆಯಾಗಿ ಅನಾಹುತ ಸೃಷ್ಟಿಸಬಹುದು. ಸಿಕ್ಕ ಕಡೆಯೆಲ್ಲಾ ಕಸ ಸುರಿಯುವುದೂ ಬೆಂಕಿ ಅವಘಡಕ್ಕೆ ಕಾರಣವಾಗಬಹುದು. ಒಣ ಕಸಕ್ಕೆ ಸಣ್ಣ ಕಿಡಿ ತಗುಲಿದರೂ ಬೆಂಕಿ ಅವಘಡ ಉಂಟಾಗುತ್ತದೆ. ಸ್ವಚ್ಛತೆ ನೆಪದಲ್ಲಿ ಒಣ ಎಲೆಗಳನ್ನು ಗುಡಿಸಿ, ಗುಡ್ಡೆ ಮಾಡಿ, ಬೆಂಕಿ ಹಚ್ಚುವುದು ಸರಿಯಲ್ಲ. ಜ್ವಾಲೆಯ ಒಂದು ಕಿಡಿ ಗಾಳಿಯಲ್ಲಿ ಮತ್ತೊಂದೆಡೆಗೆ ಹಾರಿ, ಹೊತ್ತಿಕೊಳ್ಳಬಹುದು. ರೈತರು ಹುಲ್ಲಿನ ಬಣವೆಗಳ ಬಗ್ಗೆ ಎಚ್ಚರವಹಿಸಬೇಕು. ಬಣವೆಗಳ ಅಕ್ಕಪಕ್ಕದಲ್ಲಿ ಧೂಮಪಾನ ಮಾಡಬಾರದು, ಕಸಕ್ಕೆ ಬೆಂಕಿ ಹಚ್ಚಬಾರದು. ಸಣ್ಣ ನಿರ್ಲಕ್ಷ್ಯ ದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆ. ಪ್ರತಿಯೊಬ್ಬರೂ ಎಚ್ಚರವಹಿಸಿದರೆ ಬೆಂಕಿ ಅವಘಡಗಳನ್ನು ಆದಷ್ಟು ತಪ್ಪಿಸಬಹುದು ಎಂದು ಅಗ್ನಿಶಾಮಕ ಸಿಬ್ಬಂದಿ, ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Translate »