ನಕಲಿ ವೈದ್ಯರಿಂದ ಕ್ಲಿನಿಕ್‍ಗಳ ನಿರ್ವಹಣೆ: ಕ್ರಮ ಕೈಗೊಳ್ಳದ ಅಧಿಕಾರಿಗಳು
ಮೈಸೂರು

ನಕಲಿ ವೈದ್ಯರಿಂದ ಕ್ಲಿನಿಕ್‍ಗಳ ನಿರ್ವಹಣೆ: ಕ್ರಮ ಕೈಗೊಳ್ಳದ ಅಧಿಕಾರಿಗಳು

February 4, 2020

ಜಿಪಂ ವಿಚಕ್ಷಣ ಮತ್ತು ಮೇಲ್ವಿಚಾರಣಾ ಸಮಿತಿ ಸದಸ್ಯೆ ಹೆಚ್.ಕೆ.ಭಾಗ್ಯ ಗಂಭೀರ ಆರೋಪ
ಮೈಸೂರು, ಫೆ.3(ಪಿಎಂ)- ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಪದವಿ ಪಡೆದ ಮಹಿಳಾ ವೈದ್ಯರೊಬ್ಬರು ಕೆಪಿಎಂಇ ಕಾಯ್ದೆ ಅಡಿ ತಮ್ಮ ಹೆಸರಿನಲ್ಲಿ ಪರವಾನಗಿ ಪಡೆದು ನಕಲಿ ವೈದ್ಯರಿಂದ ಸೇವೆ ಕಲ್ಪಿಸುತ್ತಿದ್ದಾರೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಹಾಗೂ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರೂ ಇನ್ನು ಕ್ರಮ ಕೈಗೊಂಡಿಲ್ಲ ಎಂದು ಜಿಪಂ ವಿಚಕ್ಷಣ ಮತ್ತು ಮೇಲ್ವಿಚಾರಣಾ ಸಮಿತಿ ಸದಸ್ಯೆ ಹೆಚ್.ಕೆ.ಭಾಗ್ಯ ಆರೋಪಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಪದವಿ ಪಡೆದಿರುವ ಡಾ.ಎಂ.ಪದ್ಮಿನಿ ಎಂಬುವರು ಮೈಸೂರಿನ ಇಲವಾಲದಲ್ಲಿ ಚಾಮುಂಡೇಶ್ವರಿ ಕ್ಲಿನಿಕ್, ಹೆಬ್ಬಾಳಿನ ಲೋಕನಾಯಕನಗರದಲ್ಲಿ ಧನ್ವಂತರಿ ಕ್ಲಿನಿಕ್ ಹಾಗೂ ಶಾಂತಿನಗರ ದಲ್ಲಿ ಹೆಚ್.ಕೆ.ಕ್ಲಿನಿಕ್ ಹೆಸರಿನಲ್ಲಿ ವೈದ್ಯಕೀಯ ಸೇವೆ ಕಲ್ಪಿಸು ತ್ತಿದ್ದಾರೆ. ಇವುಗಳಿಗೆ ತಮ್ಮ ಹೆಸರಿನಲ್ಲಿ ಕಾನೂನಿನಂತೆ ಪರವಾನಗಿ ಪಡೆದಿದ್ದಾರೆ. ಆದರೆ ಈ ಕ್ಲಿನಿಕ್‍ಗಳಲ್ಲಿ ನಕಲಿ ವೈದ್ಯರು ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. ಇದಲ್ಲದೆ, ಚಾಂದಿನಿ ಬೇಗಂ ಎಂಬ ನಕಲಿ ವೈದ್ಯೆ ಉಮರ್ ಖಯ್ಯಾಂ ರಸ್ತೆಯಲ್ಲಿ ಪರವಾನಗಿ ಯನ್ನೇ ಪಡೆಯದೇ `ಫಾತಿಮಾ ಕ್ಲಿನಿಕ್’ ನಡೆಸುತ್ತಿದ್ದಾರೆ. ಇದಕ್ಕೂ ಡಾ.ಪದ್ಮಿನಿ ಬೆಂಗಾವಲಾಗಿ ನಿಂತಿದ್ದಾರೆ ಎಂದು ದೂರಿದರು.

ಜ.21ರಂದು ಜಿಲ್ಲಾ ಆಯುಷ್ ಅಧಿಕಾರಿಗೆ ಈ ಸಂಬಂಧ ದೂರು ಸಲ್ಲಿಸಲಾಗಿದೆ. ಆದರೆ ಈ ಬಗ್ಗೆ ಅವರು ನಿರ್ಲಕ್ಷ್ಯ ತಾಳಿರುವುದು ಅವರ ವರ್ತನೆಯಿಂದ ತಿಳಿದು ಬರುತ್ತಿದ್ದು, ಇವರೂ ಅಕ್ರಮದ ಪಾಲುದಾರರು ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ಅಲ್ಲದೆ, ಪ್ರಕರಣ ಸಂಬಂಧ ಜ.22ರಂದು ಜಿಲ್ಲಾ ಆರೋಗ್ಯಾಧಿಕಾರಿಯವ ರಿಗೆ ದೂರು ಸಲ್ಲಿಸಲು ಹೋದರೆ ಅವರು ನೆಪವೊಡ್ಡಿ ನಿರಾಕರಿಸಿದರು. ಬಳಿಕ ಜ.27ರಂದು ಜಿಲ್ಲಾ ಆರೋಗ್ಯಾಧಿಕಾರಿಗಳು ದೂರು ಸ್ವೀಕರಿಸಿ ದರಾದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈ ಹಿನ್ನೆಲೆಯಲ್ಲಿ ಜ.30ರಂದು ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಓ ಅವರಿಗೆ ದೂರು ನೀಡಿದ್ದು, ಕೂಡಲೇ ಎಚ್ಚೆತ್ತುಕೊಂಡಿರುವ ಆರೋಗ್ಯಾಧಿ ಕಾರಿಗಳು, ನಕಲಿ ವೈದ್ಯರನ್ನು ಪಾರು ಮಾಡಲು ಮುಂದಾಗಿ ದ್ದಾರೆ ಎಂದು ಆರೋಪಿಸಿದರು. ಈ ಸಂಬಂಧ ಎನ್‍ಆರ್ ಪೊಲೀಸ್ ಠಾಣೆ ಹಾಗೂ ಇಲವಾಲ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾ ಗಿದೆ. ದೂರು ಸ್ವೀಕರಿಸಿರುವ ಎನ್‍ಆರ್ ಪೊಲೀಸ್ ಠಾಣೆಯಿಂದ `ಸದರಿ ಪ್ರಕರಣ ಕೆಪಿಎಂಇ ಕಾಯ್ದೆ-2007 ಅಡಿಗೆ ಬರುವುದ ರಿಂದ ಕ್ರಮ ಜರುಗಿಸಿ ಮಾಹಿತಿ ನೀಡುವಂತೆ ಕೋರಿ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ವರ್ಗಾಯಿಸಲಾಗಿದೆ’ ಎಂಬ ಹಿಂಬರಹ ನೀಡಲಾಗಿದೆ ಎಂದರು. ಮಾನವ ಹಕ್ಕು ರಕ್ಷಣೆ ಸಂಘಟನೆಯ ಉಪಾಧ್ಯಕ್ಷೆ ಎಂ.ಕೆ.ಸುಧಾಮಣಿ, ಪತ್ರಕರ್ತ ರಿಯಾಜ್ ಗೋಷ್ಠಿಯಲ್ಲಿದ್ದರು.

Translate »