ಸರ್ಕಾರಿ ಭೂಮಿ ಕಬಳಿಸಲು ಭೂಗಳ್ಳರಿಗೆ ಅಧಿಕಾರಿಗಳ ಸಾಥ್:  ದಸಂಸ ಆರೋಪ
ಮೈಸೂರು

ಸರ್ಕಾರಿ ಭೂಮಿ ಕಬಳಿಸಲು ಭೂಗಳ್ಳರಿಗೆ ಅಧಿಕಾರಿಗಳ ಸಾಥ್: ದಸಂಸ ಆರೋಪ

January 29, 2019

ಮೈಸೂರು: ಮೈಸೂರು ತಾಲೂಕು ಕಸಬಾ ಹೋಬಳಿ ಶ್ಯಾದನ ಹಳ್ಳಿ ಗ್ರಾಮಕ್ಕೆ ಸೇರಿದ ಸರ್ವೆ ನಂ.37ರಲ್ಲಿ 54 ಎಕರೆಗೂ ಹೆಚ್ಚು ಸರ್ಕಾರಿ ಗೋಮಾಳ ವನ್ನು ರೈತರ ಹೆಸರಿನಲ್ಲಿ ಭೂಗಳ್ಳರು ಕಬಳಿಸಲು ಅನುಕೂಲ ಮಾಡಿಕೊಡಲು ಕಂದಾಯ ಅಧಿಕಾರಿಗಳು ಹೊರಟಿದ್ದಾರೆ ಎಂದು ಆರೋಪಿಸಿ ದಸಂಸ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನೇತೃತ್ವವನ್ನು ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ವಹಿಸಿ, ಕಂದಾಯ ಅಧಿಕಾರಿಗಳ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿದರು. ನಂತರ ಮಾಧ್ಯಮ ಗಳೊಂದಿಗೆ ಮಾತನಾಡಿ, ಶ್ಯಾದನಹಳ್ಳಿ ಗ್ರಾಮಕ್ಕೆ ಸೇರಿದ ಸರ್ವೆ ನಂ.37ರಲ್ಲಿ 80 ಎಕರೆಗೂ ಹೆಚ್ಚು ಸರ್ಕಾರಿ ಗೋಮಾಳವಿದೆ. ಈ ಪೈಕಿ ನಾಗನಹಳ್ಳಿ ಗ್ರಾಮದವರ ನಿವೇಶನಕ್ಕಾಗಿ 5 ಎಕರೆ, ಚರ್ಮ ಕೈಗಾರಿಕೆ (ಲಿಡ್ಕರ್) 2 ಎಕರೆ, ನಾಲೆ ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯ ಗಳಿಗೆ ಸುಮಾರು 30 ಎಕರೆ ಭೂಮಿಯನ್ನು ಹಂಚಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಉಳಿದ 54 ಎಕರೆ ಗೋಮಾಳದ ಭೂಮಿಯನ್ನು ಮೈಸೂರು ತಾಲೂಕು ಕಂದಾಯ ಅಧಿಕಾರಿಗಳು ರೈತರ ಹೆಸರಿನಲ್ಲಿ ದಾಖಲೆಗಳನ್ನು ಸೃಷ್ಟಿಸಲು ಯತ್ನಿಸುತ್ತಿದ್ದು, ಹತ್ತಾರು ವರ್ಷಗಳಿಂದ ಸದರಿ ಜಾಗದಲ್ಲಿ (ಏಕಲವ್ಯನಗರ ನಿವಾಸಿಗಳು) ವಾಸವಾಗಿರುವ 480ಕ್ಕೂ ಹೆಚ್ಚು ಹಕ್ಕಿಪಿಕ್ಕಿ, ಚಿನ್ನದಾಸರ್, ಕೊರಮ, ದೊಂಬಿದಾಸ, ಶಿಳ್ಳೆಕ್ಯಾತ ಹಾಗೂ ಇತರೆ ಅಲೆಮಾರಿ ಸಮುದಾಯಗಳು ಜೋಪಡಿಗಳನ್ನು ನಿರ್ಮಿಸಿಕೊಂಡು ವಾಸವಾಗಿದ್ದಾರೆ. ಇವರಿಗೆ ಜೆ-ನರ್ಮ್ ಯೋಜನೆಯಡಿ ಬಹುಮಹಡಿಗಳ ಕಟ್ಟಡ ನಿರ್ಮಿಸಿಕೊಡುವುದಾಗಿ ನಂಬಿಸಿ ಎಲ್ಲಾ ಕುಟುಂಬಗಳನ್ನು ಸ್ಥಳಾಂತರಗೊಳಿಸಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು. ಆದರೆ, ಕಂದಾಯ ಅಧಿಕಾರಿಗಳು ಭೂಗಳ್ಳರೊಂದಿಗೆ ಶಾಮೀಲಾಗಿ, ರೈತರ ಹೆಸರಿನಲ್ಲಿ ಖಾತೆ ಮಾಡಲು ಹೊರಟಿರುವ ಬಗ್ಗೆ ಬಲ್ಲ ಮೂಲಗಳಿಂದ ಮಾಹಿತಿ ಬಂದಿದ್ದು, ಈ ಜಾಗದಲ್ಲಿ ಬಡವರಿಗೆ ಮನೆಗಳನ್ನು ನಿರ್ಮಿಸಿಕೊಡುವ ಬಗ್ಗೆ ಜಿಲ್ಲಾಡಳಿತ ಲಿಖಿತ ಭರವಸೆ ನೀಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಕಲ್ಲಹಳ್ಳಿ ಕುಮಾರ್, ಲಕ್ಷ್ಮಿ, ಶಿವರಾಜು, ಮಾದೇವು, ಕಂದೇಗಾಲ ಶ್ರೀನಿವಾಸ, ಬಂಡಿಪಾಳ್ಯ ವಿಜಿ ಇತರರಿದ್ದರು

Translate »