ಜಿಲ್ಲೆಯಲ್ಲಿ ಜೆಡಿಎಸ್ ಬಲವರ್ಧನೆಗೆ ಕ್ರಮ ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಅಮಾನತು: ಎಚ್ಚರಿಕೆ
ಕೊಡಗು

ಜಿಲ್ಲೆಯಲ್ಲಿ ಜೆಡಿಎಸ್ ಬಲವರ್ಧನೆಗೆ ಕ್ರಮ ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಅಮಾನತು: ಎಚ್ಚರಿಕೆ

March 16, 2019

ಮಡಿಕೇರಿ: ಕೊಡಗು ಜಿಲ್ಲಾ ಜಾತ್ಯತೀತ ಜನತಾದಳ ಪಕ್ಷವನ್ನು ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಬೂತ್ ಮಟ್ಟದಿಂದ ಸಶಕ್ತವಾಗಿ ಕಟ್ಟಿ, ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಲಾಗುತ್ತದೆ ಎಂದು ತಿಳಿಸಿರುವ ಜೆಡಿಎಸ್ ನೂತನ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್, ಪಕ್ಷ ವಿರೋಧಿ ಚಟುವಟಿಕೆ ನಡೆಸುವವರನ್ನು ಪಕ್ಷದಿಂದಲೇ ಅಮಾನತುಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ, ಕೀಳು ಮಟ್ಟದ ರಾಜಕೀಯ ಮಾಡುವವನು ನಾನಲ್ಲ, ಮೌಲ್ಯ ಯುತವಾದ ರಾಜಕೀಯ ಮಾಡುವ ವ್ಯಕ್ತಿ ತಾನೆಂದು ಟೀಕಾಕಾರರಿಗೆ ಪ್ರತ್ಯುತ್ತರ ನೀಡಿದರು. ತಾನು ಬಿಜೆಪಿಯೊಂದಿಗೆ ಶಾಮೀಲಾಗಿದ್ದೇನೆ, ಹಿಂದಿನ ಚುನಾವಣೆಯಲ್ಲಿ ನನ್ನ ಬೂತ್‍ನಲ್ಲೆ ಜೆಡಿಎಸ್‍ಗೆ ಮತಗಳಿಲ್ಲ ಎನ್ನುವವರಿಗೆ ಬೂತ್ ಬಗ್ಗೆ ಮಾಹಿತಿ ಇಲ್ಲವೆಂದು ಕಿಡಿಕಾರಿದರು.

ಯಾವುದೇ ಪಕ್ಷದಲ್ಲಿ ನೂತನ ಅಧ್ಯಕ್ಷರ ಆಯ್ಕೆಯ ಸಂದರ್ಭ ವಿರೋಧ ಗಳು ಸಾಮಾನ್ಯ. ಇಂದು ತನ್ನನ್ನು ವಿರೋಧಿಸುವವರು ಮುಂದೆ ಪಕ್ಷ ಸಂಘಟ ನೆಯ ಹಂತದಲ್ಲಿ ತನ್ನೊಂದಿಗೆ ಕೈಜೋಡಿಸುವ ವಿಶ್ವಾಸವಿದೆ. ಜಿಲ್ಲೆಯ ಜೆಡಿಎಸ್ ಮುಖ್ಯಸ್ಥ ಬಿ.ಎ.ಜೀವಿಜಯ ಅವರಿಗೆ ಅವರ ಪುತ್ರ ಸಂಜಯ್ ಜೀವಿಜಯ ಜಿಲ್ಲಾಧ್ಯಕ್ಷನಾಗಬೇಕೆನ್ನುವ ಆಕಾಂಕ್ಷೆ ಇದ್ದಿರಬಹುದು. ಆದರೆ, ನಾನು ಕೇಳದಿ ದ್ದರು ಪಕ್ಷದ ವರಿಷ್ಠರು ಜಿಲ್ಲಾಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ನೀಡಿದ್ದಾರೆ. ಇದನ್ನು ಎಲ್ಲರ ಸಹಕಾರದೊಂದಿಗೆ ನಿಭಾಯಿಸುವ ಮೂಲಕ, ಜಿಲ್ಲೆಯಲ್ಲಿ ಪಕ್ಷದ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸುವುದಾಗಿ ಸ್ಪಷ್ಟಪಡಿಸಿದರು.

‘ಮರಳಿ ಗೂಡಿಗೆ’ ಆಂದೋಲನ: ಪ್ರಸ್ತುತ ಜಿಲ್ಲಾ ಜಾತ್ಯತೀತ ಜನತಾ ದಳದಿಂದ ದೂರ ಉಳಿದವರನ್ನು ಮತ್ತೆ ಪಕ್ಷಕ್ಕೆ ಕರೆತರುವ ‘ಮರಳಿ ಗೂಡಿಗೆ’ ಆಂದೋಲನವನ್ನು ನಡೆಸುವ ಮೂಲಕ ಪಕ್ಷದ ಬಲವರ್ಧನೆಗೆ ಮುಂದಾ ಗುವುದಾಗಿ ಕೆ.ಎಂ. ಗಣೇಶ್ ತಿಳಿಸಿದರು. ತನ್ನನ್ನು ಜಿಲ್ಲಾಧ್ಯಕ್ಷನನ್ನಾಗಿ ಪಕ್ಷದ ವರಿಷ್ಠರು ನಿಯುಕ್ತಿಗೊಳಿಸಿದ ಬಳಿಕ ಜಿಲ್ಲಾ ಜೆಡಿಎಸ್ ಸಮಿತಿ ಸೇರಿದಂತೆ ಪಕ್ಷದ ಎಲ್ಲಾ ಘಟಕಗಳನ್ನು ವಿಸರ್ಜಿಸಿರುವುದಾಗಿ ಸ್ಪಷ್ಟಪÀಡಿಸಿದ ಗಣೇಶ್, ಶೀಘ್ರದಲ್ಲೆ ಜಿಲ್ಲೆಯ ಐದು ತಾಲೂಕುಗಳ ಅಧ್ಯಕ್ಷರನ್ನು, ವಿವಿಧ ಘಟಕಗಳ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದೆಂದರು.

ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಅವರು ತಮ್ಮ ಆರು ದಶಕಗಳ ರಾಜಕೀಯದಲ್ಲಿ ಎಂದಿಗೂ ದುಡುಕಿ ನಿರ್ಧಾರಗಳನ್ನು ಕೈಗೊಂಡಿಲ್ಲ. ಈಗಲೂ ಕೊಡಗು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಬಗ್ಗೆ ರಾಜ್ಯಾಧ್ಯಕ್ಷರೊಂದಿಗೆ ಚರ್ಚಿಸಿ ಕೆ.ಎಂ.ಗಣೇಶ್ ಅವರನ್ನು ಆಯ್ಕೆ ಮಾಡಿದ್ದು, ಇದು ತರಾತುರಿಯ ನಿರ್ಧಾರವೂ ಅಲ್ಲವೆಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ವೀರಾಜಪೇಟೆ ಕ್ಷೇತ್ರದ ಅಧ್ಯಕ್ಷ ಮತೀನ್, ಜಿಲ್ಲಾ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸಿ.ಎಲ್.ವಿಶ್ವ, ಪ್ರಧಾನ ಕಾರ್ಯದರ್ಶಿ ಜಾಸಿರ್ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ಕುಸುಮ ಉಪಸ್ಥಿತರಿದ್ದರು.

Translate »