ಮಡಿಕೇರಿ: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಹಾಮಳೆಯ ಆರ್ಭಟದಿಂದ ಉಂಟಾಗಿರುವ ಪ್ರಾಕೃತಿಕ ವಿಕೋಪಗಳಿಂದ ನಲುಗಿರುವ ಗ್ರಾಮಗಳಲ್ಲಿನ ಪರಿಹಾರ ಕಾರ್ಯಗಳಲ್ಲಿ ಸರ್ಕಾರದೊಂದಿಗೆ ಶ್ರೀ ಆದಿಚುಂಚನಗಿರಿ ಮಠ ಕೈಜೋಡಿಸಿ ಶ್ರಮಿಸಲಿದೆಯೆಂದು ಶ್ರೀ ಡಾ.ನಿರ್ಮಲಾನಂದ ಮಹಾ ಸ್ವಾಮೀಜಿ ತಿಳಿಸಿದ್ದಾರೆ.
ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಸಂಕಷ್ಟಕ್ಕೆ ಸಿಲುಕಿರುವ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ, ಮಡಿಕೇರಿಯ ಗೌಡ ಸಮಾಜದ ಸಭಾಂಗಣದಲ್ಲಿ ಶ್ರೀಮಠದಿಂದ ಆಯೋಜಿತ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀ ಆದಿಚುಂಚನಗಿರಿ ಮಠಾಧೀಶ ಶ್ರೀ ಡಾ.ನಿರ್ಮಲಾನಂದ ಮಹಾ ಸ್ವಾಮೀಜಿ, ಕೊಡಗಿನಲ್ಲಿ ಭಾರೀ ಮಳೆಯಿಂದ ಪ್ರಾಕೃ ತಿಕ ವಿಕೋಪ ಸಂಭವಿಸುತ್ತಿರುವ ಹಂತದಲ್ಲೆ ಶ್ರೀಮಠ ಈ ಎಲ್ಲಾ ಘಟನಾವಳಿಗಳನ್ನು ಅವಲೋಕಿಸಿ, ಸಂತ್ರಸ್ತರ ನೆರವಿಗೆ ಸಾಧ್ಯವಾದ ಅಗತ್ಯ ಕ್ರಮಗಳನ್ನು ಕೈಗೊಂಡಿ ದ್ದಾಗಿ ತಿಳಿಸಿದರು.
ಪ್ರಾಕೃತಿಕ ವಿಕೋಪಗಳು ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಿಂದ ಹಿಡಿದು, ಉನ್ನತ ಶಿಕ್ಷಣದ ಹಂತದವರೆಗೂ ಉಚಿತವಾಗಿ ನೀಡಲು ಶ್ರೀ ಆದಿ ಚುಂಚನಗಿರಿ ಮಠ ಸಿದ್ಧವಿದೆ, ಈ ನಿಟ್ಟಿನಲ್ಲಿ ಕೆಲವರು ಮಠವನ್ನು ಸಂಪರ್ಕಿಸಿರುವುದಾಗಿ ತಿಳಿಸಿದರು.
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಹಾ ಮಳೆ ಮತ್ತು ಗುಡ್ಡ ಕುಸಿತಗಳಿಂದ ಹಲವಾರು ಗ್ರಾಮಗಳು ಸಂಕಷ್ಟಕ್ಕೆ ಸಿಲುಕಿವೆ. ಇವುಗಳಲ್ಲಿ ಯಾವುದೇ ಗ್ರಾಮವನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುವ ಬಗ್ಗೆ ಶ್ರೀಮಠ ಆಸಕ್ತವಾಗಿದೆಯಾದರು, ಈಗಲೇ ಇಂತಹ ವಿಚಾರವನ್ನು ಅಂತಿಮಗೊಳಿಸಲು ಕಾಲ ಪಕ್ವವಾಗಿಲ್ಲವೆಂದು ಅಭಿಪ್ರಾಯಿಸಿದರು.
ಮಠದ ಕಡೆಯಿಂದ ಪ್ರಾಕೃತಿಕ ವಿಕೋಪಕ್ಕೆ ಒಳಗಾದ ಗ್ರಾಮಗಳು, ಪುನರ್ವಸತಿ ಕೇಂದ್ರಗಳಿಗೆ ತೆರಳಿ ಅಲ್ಲಿನ ಸಂತ್ರಸ್ತರನ್ನು ಭೇಟಿಯಾಗಿ, ಅವರ ಸಂಕಷ್ಟಗಳನ್ನು ಖುದ್ದು ಆಲಿಸಿ ಸಾಂತ್ವನ ನುಡಿಯುವ ಕಾರ್ಯಗಳು ನಡೆಯುತ್ತಿದೆ. ಈಗಾಗಲೆ ಕುಶಾಲನಗರದಲ್ಲಿ ಸಂತ್ರಸ್ತರಿಗೆ ಆರೋಗ್ಯ ಶಿಬಿರ ವನ್ನು ನಡೆಸಲಾಗಿದ್ದು, ಸಾವಿರಕ್ಕೂ ಹೆಚ್ಚಿನ ಮಂದಿ ಶಿಬಿರದ ಸದುಪಯೋಗ ಪಡೆದಿ ರುವುದಾಗಿ ಶ್ರೀಗಳು ತಿಳಿಸಿದರು.
ಸ್ವಾಮೀಜಿಗಳೊಂದಿಗೆ ಇದ್ದ ಜಿಲ್ಲೆಯ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಪ್ರಾಕೃತಿಕ ವಿಕೋಪದಿಂದ ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ ವಿಭಾಗಗಳಲ್ಲಿ ಕಂಡು ಕೇಳರಿಯದ ಹಾನಿ ಸಂಭವಿಸಿದೆ. ಶ್ರೀ ಆದಿಚುಂಚನಗಿರಿ ಮಠ ಆರೋಗ್ಯ ಶಿಬಿರವನ್ನು ಆಯೋಜಿಸುವ ಮೂಲಕ ಸಂತ್ರಸ್ತರ ಆರೋಗ್ಯ ಸಂರಕ್ಷಣೆಯ ಕಾರ್ಯವನ್ನು ನಡೆಸುತ್ತಿದ್ದು, ಈ ಶಿಬಿರದಲ್ಲಿ ಈಗಾಗಲೇ 400ಕ್ಕೂ ಹೆಚ್ಚಿನ ಸಂತ್ರಸ್ತರು ಆರೋಗ್ಯ ತಪಾಸಣೆಯ ಸೌಲಭ್ಯವನ್ನು ಪಡೆದಿರುವುದಾಗಿ ತಿಳಿಸಿದರು.
ಈ ಸಂದರ್ಭ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ರಾಮ ನಗರದ ಶ್ರೀ ಅನ್ನದಾನಿ ಸ್ವಾಮೀಜಿಗಳು ಉಪಸ್ಥಿತರಿದ್ದರು. ಶ್ರೀ ಆದಿಚುಂಚನಗಿರಿ ಮಠದ ಬೆಳ್ಳೂರು ಕ್ರಾಸ್‍ನ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ಜಿ. ಶಿವರಾಮು ಅವರ ಮಾರ್ಗ ದರ್ಶನದಲ್ಲಿ ಕಣ್ಣು, ಕಿವಿ, ಮೂಗು, ಹೃದಯ ಸೇರಿದಂತೆ 16 ವಿವಿಧ ವಿಭಾಗಗಳ 40 ತಜ್ಞ ವೈದ್ಯರು ಸೇರಿದಂತೆ 75 ಮಂದಿ ವೈದ್ಯರು ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಸಂತ್ರಸ್ತರ ಆರೋಗ್ಯ ತಪಾಸಣೆ ನಡೆಸಿದರು.
ಕೊಡಗು ಗೌಡ ಸಮಾಜ, ಕೊಡವ ಸಮಾಜಗಳ ಒಕ್ಕೂಟ, ಕೊಡಗು ಯುವ ವೇದಿಕೆ ಪದಾಧಿಕಾರಿಗಳು ಮತ್ತು ಸದಸ್ಯರ ನೆರವಿನೊಂದಿಗೆ ಅತ್ಯಂತ ವ್ಯವಸ್ಥಿತವಾಗಿ, ಸಂತ್ರಸ್ತರ ನೋಂದಣಿ, ವಿವಿಧ ಆರೋಗ್ಯ ಸಮಸ್ಯೆಗಳಿಗೆ ಪ್ರತ್ಯೇಕವಾಗಿ ತಪಾಸಣಾ ಕಾರ್ಯಗಳನ್ನು ನಡೆಸಲಾಯಿತು. ಅಗತ್ಯ ವಿರುವವರಿಗೆ ಉಚಿತವಾಗಿ ಇಸಿಜಿ, ಸ್ಕ್ಯಾನಿಂಗ್ ಗಳನ್ನು ಮಾಡಿ, ಅಗತ್ಯ ಸಲಹೆ ಸೂಚನೆ ಗಳನ್ನು ವೈದ್ಯರು ನೀಡಿದರು. ಶಿಬಿರದಲ್ಲೇ ಉಚಿತವಾಗಿ ಅಗತ್ಯವಿರುವ ಔಷಧಿಗಳನ್ನು ಅನಾರೋಗ್ಯ ಪೀಡಿತರಿಗೆ ವಿತರಿಸುವ ವ್ಯವಸ್ಥೆ ಯನ್ನು ಮಾಡಲಾಗಿತ್ತು. ಶಿಬಿರಕ್ಕೆ ಶ್ರೀ ಡಾ.ನಿರ್ಮಲಾನಂದ ಸ್ವಾಮೀಜಿ, ಶ್ರೀ ಶಂಭುನಾಥ ಸ್ವಾಮೀಜಿ, ಶ್ರೀ ಅನ್ನದಾನಿ ಸ್ವಾಮೀಜಿಗಳು ಹಾಗೂ ಶಾಸಕ ಕೆ.ಜಿ. ಬೋಪಯ್ಯ ಅವರುಗಳು ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಿದ್ದ ಸಂತ್ರಸ್ತರೊಂದಿಗೆ ಮಾತನಾಡಿದರು.
ಆರೋಗ್ಯ ಶಿಬಿರದ ಆಯೋಜನೆಗೆ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಕಾರ್ಯ ದರ್ಶಿ ಕೋಡಿ ಚಂದ್ರಶೇಖರ್, ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಸೇರಿದಂತೆ ಹಲ ಪ್ರಮುಖರು, ಸದಸ್ಯರು ನೆರವಾಗಿದ್ದರು.