ಅರಸೀಕೆರೆ: ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರಿಗೆ ಪ್ರತಿಯೊಬ್ಬರು ಋಣಿಯಾಗಿದ್ದಾರೆ. ದೇಶ ಸೇವೆಗಾಗಿ ಹೋರಾಡುವ ಸೈನಿಕ ಹುದ್ದೆಗೆ ಯುವಜನರು ಸೇರುವ ಮೂಲಕ ದೇಶ ಸೇವೆಗೆ ಮುಂದಾಗಬೇಕು ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಡಿ.ಜಿ. ಸುರೇಶ್ ಹೇಳಿದರು.
ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ರಾಮಣ್ಣ ಶಾಲೆಯಲ್ಲಿ ಗುರುವಾರ ಕಾರ್ಗಿಲ್ ಯುದ್ದದಲ್ಲಿ ಪಾಲ್ಗೊಂಡಿದ್ದ ವೀರ ನಿವೃತ್ತಿ ಯೋಧರ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಗಿಲ್ ಯುದ್ದದಲ್ಲಿ ಸೈನಿಕರು ವಿಜಯ ಸಾಧಿಸಿ ಇಂದಿಗೆ 19 ವರ್ಷಗಳು ಕಳೆದಿವೆ. ಈ ಸಾಧನೆಯ ಹಿಂದೆ ಸೈನಿಕರ ಅಪ್ರತಿಮ ಶೌರ್ಯ ಪ್ರದರ್ಶನ ಮತ್ತು ಬಲಿದಾನಗಳು ಹೆಚ್ಚು ಪಾತ್ರವನ್ನುವಹಿಸಿದೆ. ಈ ಹಿಂದೆ ಹಿರಿಯರು ಮಕ್ಕಳನ್ನು ಕೂರಿಸಿಕೊಂಡು ದೇಶಪ್ರೇಮ ಭಿತ್ತರಿಸುವ ಮಹಾಪುರುಷರ ವಿಚಾರಗಳನ್ನು ತಿಳಿಸಿಕೊಡುತ್ತಿದ್ದರು. ಆದರೆ, ಇಂದು ಅದು ಕಡಿಮೆಯಾಗಿದೆ. ದೇಶದ ಬಗ್ಗೆ ಅಭಿಮಾನ ಕಡಿಮೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕ್ಷೇತ್ರ ಸಮನ್ವಯ ಅಧಿಕಾರಿ ಗಂಗಾಧರಸ್ವಾಮಿ ಮಾತನಾಡಿ, ಮಾಜಿ ಸೈನಿಕರಾದ ಅಣ್ಣೇಗೌಡ, ಚಂದ್ರಶೇಖರ್, ಹುಲಿಯಪ್ಪ, ಅವರನ್ನು ಮಕ್ಕಳಿಗೆ ಪರಿಚಯಿಸಿ, ಸೈನಿಕರು ದೇಶದ ಗಡಿಯಲ್ಲಿ ರಕ್ಷಣೆಗಾಗಿ ಎಷ್ಟು ಕಷ್ಟಪಡುತ್ತಿದ್ದಾರೆ ಎಂಬುದನ್ನು ತಿಳಿಸಿದರು.
ವಿದ್ಯಾರ್ಥಿಗಳು ಹೆಚ್ಚಿನ ಶಿಕ್ಷಣದ ಜೊತೆಗೆ, ದೇಶಾಭಿಮಾನವನ್ನು ಬೆಳೆಸಿಕೊಳ್ಳಬೇಕು. ಎಲ್ಲದಕ್ಕಿಂತ ದೇಶ ಮೊದಲು ಎಂಬ ತತ್ವ, ಸಿದ್ದಾಂತವನ್ನು ಅಳವಡಿಸಿ ಕೊಂಡಾಗ ಮಾತ್ರ ದೇಶ ಪ್ರೇಮ ಹೆಚ್ಚಾಗಲು ಸಾಧ್ಯ ಎಂದರು. ಈ ವೇಳೆ ಮಾಜಿ ಸೈನಿಕ ಅಣ್ಣೇಗೌಡ, ಮುಖಂಡರಾದ ರೈಲ್ವೆ ಮಹದೇವ್, ಪತ್ರಕರ್ತ ಹೆಚ್.ಡಿ.ಸೀತಾರಾಂ ಮಾತನಾಡಿದರು. ಕಾರ್ಯ ಕ್ರಮದಲ್ಲಿ ರೋಟರಿ ಕಾರ್ಯದರ್ಶಿ ನವೀನ್, ಮಾಜಿ ಅಧ್ಯಕ್ಷ ಯೋಗೀಶ್ ಚಾರ್, ಮುಖ್ಯಶಿಕ್ಷಕ ಸೋಮಶೇಖರ್ ಇದ್ದರು.