ಸಚಿವರಾದ ನಂತರ ಪ್ರಥಮ ಬಾರಿಗೆ ಚಾಮರಾಜನಗರಕ್ಕೆ ಇಂದು ಪುಟ್ಟರಂಗಶೆಟ್ಟಿ ಭೇಟಿ
ಚಾಮರಾಜನಗರ

ಸಚಿವರಾದ ನಂತರ ಪ್ರಥಮ ಬಾರಿಗೆ ಚಾಮರಾಜನಗರಕ್ಕೆ ಇಂದು ಪುಟ್ಟರಂಗಶೆಟ್ಟಿ ಭೇಟಿ

June 18, 2018

ಸಮಸ್ಯೆಗಳ ಆಗರವಾಗಿರುವ ಚಾ.ನಗರಕ್ಕೆ ಮುಕ್ತಿ ಸಿಕ್ಕೀತೆ?

ಚಾಮರಾಜನಗರ: ಚಾಮ ರಾಜನಗರ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ ಶಾಸಕರ ಪೈಕಿ ಪ್ರಥಮ ಬಾರಿಗೆ ಸಚಿವ ಎಂಬ ಕೀರ್ತಿಗೆ ಪಾತ್ರ ರಾಗಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಸಿ. ಪುಟ್ಟರಂಗಶೆಟ್ಟಿ ಸಚಿವರಾದ ನಂತರ ಮೊದಲ ಬಾರಿಗೆ ನಾಳೆ(ಜೂ.18) ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದಾರೆ.

ಚಾಮರಾಜನಗರ ಗ್ರಾಮಾಂತರ ಹಾಗೂ ಚಾಮರಾಜನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಆಯೋಜಿಸಿರುವ ಮತದಾರ ರಿಗೆ ಕೃತಜ್ಞತೆ ಹಾಗೂ ಅಭಿ ನಂದನಾ ಸಮಾರಂಭದಲ್ಲಿ ಅವರು ಭಾಗವಹಿಸಲಿ ದ್ದಾರೆ. ಸಚಿವರ ಸ್ವಾಗತಕ್ಕಾಗಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಹಿತೈಷಿಗಳು ಎಲ್ಲಾ ಸಿದ್ಧತೆ ಮಾಡಿ ಕೊಂಡಿದ್ದಾರೆ. ಚಾಮರಾಜನಗರ ವಿಧಾನ ಸಭಾ ಕ್ಷೇತ್ರದಿಂದ ಒಮ್ಮೆಯೂ ಯಾರೊ ಬ್ಬರು ಹ್ಯಾಟ್ರಿಕ್ ಜಯ ಸಾಧಿಸಿರಲಿಲ್ಲ. ಇದಲ್ಲದೇ ಈ ಕ್ಷೇತ್ರದಿಂದ ಗೆಲುವು ಕಂಡಿದ್ದವರು ಸಚಿವರಾಗಿರಲಿಲ್ಲ. ಈ ಎರಡನ್ನೂ ಸುಳ್ಳು ಮಾಡಿದವರು ಸಿ. ಪುಟ್ಟರಂಗಶೆಟ್ಟಿ. 2008, 2013, 2018ರ ವಿಧಾನಸಭಾ ಚುನಾವಣೆಯಲ್ಲಿ ಸಿ. ಪುಟ್ಟರಂಗಶೆಟ್ಟಿ ಗೆಲುವು ಸಾಧಿಸಿ ಹ್ಯಾಟ್ರಿಕ್ ಗೆಲುವಿನ ಪಟ್ಟ ಅಲಂಕರಿಸಿದ್ದಾರೆ. ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಉಪ್ಪಾರ ಜನಾಂಗದ ಏಕೈಕ ಶಾಸಕರಾಗಿದ್ದ ಪುಟ್ಟರಂಗ ಶೆಟ್ಟಿ ಅವರಿಗೆ ಸಚಿವ ಸ್ಥಾನವೂ ದೊರೆ ತಿದೆ. ಇವರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಖಾತೆ ನೀಡಲಾಗಿದೆ.

ಸರಳತೆ ಹಾಗೂ ಮಾನವೀಯತೆಯನ್ನು ಮೈಗೂಡಿಸಿಕೊಂಡಿರುವ ಪುಟ್ಟರಂಗಶೆಟ್ಟಿ ಅವರಿಗೆ ಈಗ ಮತ್ತಷ್ಟು ಜವಾಬ್ದಾರಿ ಹೆಚ್ಚಿದೆ. ತೀರ ಹಿಂದುಳಿದ ವರ್ಗವಾದ ಉಪ್ಪಾರ ಸಮುದಾಯದಿಂದ ಬಂದಿರುವ ಪುಟ್ಟ ರಂಗಶೆಟ್ಟಿ ಅವರಿಗೆ ಕಾಕತಾಳೀಯ ಎಂಬಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಖಾತೆ ನೀಡಲಾಗಿದೆ. ಈ ಖಾತೆಯನ್ನು ಸಮರ್ಪಕವಾಗಿ ನಿರ್ವಹಿಸಿ ಸಮಾಜದಲ್ಲಿ ಹಿಂದುಳಿದ ವರ್ಗಗಳನ್ನು ಮೇಲಕ್ಕೆ ತರುವ ದೊಡ್ಡ ಜವಾಬ್ದಾರಿ ಸಿ. ಪುಟ್ಟರಂಗಶೆಟ್ಟಿ ಅವರ ಹೆಗಲ ಮೇಲಿದೆ. ಈ ಮಹತ್ತರ ಜವಾಬ್ದಾರಿ ಯನ್ನು ಶೆಟ್ರು ಹೇಗೆ ನಿರ್ವಹಿಸುತ್ತಾರೆ ಎಂಬ ಕುತೂಹಲ ಇದೆ.

ಇನ್ನು ನೂತನ ಸಚಿವ ಪುಟ್ಟರಂಗಶೆಟ್ಟಿ ಪ್ರತಿನಿಧಿಸುವ ಕ್ಷೇತ್ರ ಚಾಮರಾಜನಗರದಲ್ಲಿ ಹಲವು ಸಮಸ್ಯೆಗಳು ಇವೆ. ಈ ಸಮಸ್ಯೆಗಳು ಬರೀ ಒಂದು ಅಥವಾ ಎರಡಲ್ಲ. ಪಟ್ಟಿ ಮಾಡುತ್ತಾ ಹೋದಂತೆ ಹನುಮಂತನ ಬಾಲದಂತೆ ಭಾರೀ ಉದ್ದ ಇದೆ. ಜಿಲ್ಲಾ ಕೇಂದ್ರವಾದ ಚಾಮರಾಜನಗರದಲ್ಲಿ ಪ್ರಮುಖ ರಸ್ತೆಗಳಲ್ಲಿ ಅಗಲೀಕರಣ ಹಾಗೂ ರಸ್ತೆ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿ ಇದೆ. ಈ ಕಾಮಗಾರಿಗಳು ಮಂದಗತಿಯಲ್ಲಿ ಸಾಗಿರುವುದರಿಂದ ನಾಗರಿಕರು ಕಳೆದ ಒಂದು ವರ್ಷದಿಂದ ಪಡುತ್ತಿರುವ ಪಾಡು ಅಷ್ಟಿಷ್ಟಲ್ಲ. ಈ ಕಾಮಗಾರಿಗಳು ವೇಗವನ್ನು ಹೆಚ್ಚಿಸಿ ಬೇಗ ಕಾಮಗಾರಿಗಳು ಮುಕ್ತಾಯ ಗೊಳ್ಳುವತ್ತ ಸಚಿವರು ಗಮನ ಹರಿಸಬೇಕಾ ಗಿದೆ. ಇದಲ್ಲದೇ ದೊಡ್ಡಅಂಗಡಿ ಬೀದಿ, ನ್ಯಾಯಾಲಯ ರಸ್ತೆ ಸೇರಿದಂತೆ ಹಲವು ರಸ್ತೆಗಳಲ್ಲಿ ಕಾಮಗಾರಿ ಅರ್ಧಕ್ಕೆ ಸ್ಥಗಿತ ಗೊಂಡಿದೆ. ಇದನ್ನು ಪೂರ್ಣಗೊಳಿಸ ಬೇಕಾಗಿದೆ. ಶಂಕರಪುರ, ಭ್ರಮರಾಂಬ ಬಡಾವಣೆ ಸೇರಿದಂತೆ ಹಲವು ಬಡಾ ವಣೆಗಳ ರಸ್ತೆಗಳು ಕೆಟ್ಟು ರಾಡಿ ಹಿಡಿದಿವೆ. ಮಳೆ ಬಿದ್ದರೆ ಕೆಸರುಗದ್ದೆಯಂತೆ ಆಗುತ್ತಿದೆ. ಈ ಬಗ್ಗೆಯೂ ಸಹ ತುರ್ತು ಗಮನ ಹರಿಸುವ ಹೊಣೆಗಾರಿಕೆ ಪುಟ್ಟರಂಗಶೆಟ್ಟಿ ಅವರ ಮೇಲಿದೆ.

ಜಿಲ್ಲಾ ಕೇಂದ್ರವಾದ ಚಾಮರಾಜನಗರ ದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರು ವುದು ಅಷ್ಟಿಷ್ಟಲ್ಲ. ವಾರಕ್ಕೆ ಒಮ್ಮೆ ಮಾತ್ರ ನೀರು ಬಿಡುವ ಪರಿಸ್ಥಿತಿ ಈಗಲೂ ಇದೆ. ನೀರಿನ ಸಮಸ್ಯೆಯಿಂದ ನಗರದ ಸಾರ್ವಜನಿ ಕರು ಹಾಗೂ ಹೆಂಗಳೆಯರು ಹೈರಾಣಾ ಗಿರುವುದು ಸುಳ್ಳಲ್ಲ. ಈ ಸಮಸ್ಯೆಯನ್ನು ಬಗೆಹರಿಸಲು ಸಚಿವರು ಮೊದಲ ಆದ್ಯತೆ ನೀಡಬೇಕಾದ ಅನಿವಾರ್ಯತೆ ಇದೆ.
ಸ್ವಚ್ಛತೆ ವಿಷಯದಲ್ಲಿ ನಗರ ತೀರ ಹಿಂದೆ ಬಿದ್ದಿದೆ. ಎಲ್ಲೆಡೆ ಕಸದ ರಾಶಿ ಕಣ್ಣಿಗೆ ರಾಚುತ್ತದೆ. ಕನ್ಸರ್‍ವೆನ್ಸಿ ಗಲ್ಲಿಗಳು ಗಬ್ಬು ನಾರುತ್ತದೆ. ಚರಂಡಿಗಳಲ್ಲಿ ಹೂಳು ತುಂಬಿದೆ. ಇದಕ್ಕೆ ಕಾರಣ ನಗರಸಭೆಯಲ್ಲಿ ಅಗತ್ಯವಾಗಿ ಇರಬೇಕಾದಷ್ಟು ಪೌರ ಕಾರ್ಮಿಕರು ಇಲ್ಲದೇ ಇರುವುದು. ಈ ಸಮಸ್ಯೆಯನ್ನು ಬಗೆಹರಿಸಿ ನಗರದ ಸ್ವಚ್ಛತೆಗೆ ಗಮನಹರಿಸುವಂತೆ ಸಚಿವರಲ್ಲಿ ನಗರದ ಜನತೆ ಮನವಿ ಮಾಡಿದ್ದಾರೆ.

2_Page

ಜಿಲ್ಲಾಡಳಿತ ಭವನದ ಆವರಣದಲ್ಲಿ ರಂಗಮಂದಿರ ನಿರ್ಮಿಸಲಾಗಿದೆ. ಆದರೆ ಕಟ್ಟಡ ಕಾಮಗಾರಿ ಮಾತ್ರ ಪೂರ್ಣ ಗೊಂಡಿದ್ದು, ಅಗತ್ಯವಾಗಿ ಬೇಕಾಗಿರುವ ಸ್ಟೇಜ್, ವಿದ್ಯುತ್ ಕೆಲಸ ಬಾಕಿ ಇದೆ. ಹಾಗೆಯೇ ಶ್ರೀ ಚಾಮರಾಜೇಶ್ವರ ದೇವಸ್ಥಾನದ ದೊಡ್ಡರಥ ಶಿಥಿಲಾವಸ್ಥೆಯಲ್ಲಿ ಇದೆ. ಈ ರಥಕ್ಕೆ ಬೆಂಕಿ ಹಚ್ಚಲಾಗಿತ್ತು. ಹೀಗಾಗಿ ಕಳೆದ ವರ್ಷ ರಥೋತ್ಸವ ನಡೆಯಲಿಲ್ಲ. ಈ ವರ್ಷವೂ ಸಹ ನಡೆಯುವುದಿಲ್ಲ. ದೇವ ಸ್ಥಾನದ ಜೀರ್ಣೋದ್ಧಾರ ಕಾಮಗಾರಿ ಕುಂಟುತ್ತಾ ಸಾಗಿದೆ. ಈ ಬಗ್ಗೆ ಸಚಿವರು ಗಮನಹರಿಸುವಂತೆ ರಂಗಾಸಕ್ತರು ಹಾಗೂ ಭಕ್ತಾದಿಗಳು ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೆರೆಗಳಿಗೆ ನೀರು ತುಂಬಿ ಸುವ ಯೋಜನೆ ಪ್ರಗತಿಯಲ್ಲಿ ಇದೆ. ಈ ಕಾಮಗಾರಿ ಮತ್ತಷ್ಟು ಜರೂರಾಗಿ ಆಗಬೇಕಾ ಗಿದೆ ಎಂದು ರೈತರ ಒತ್ತಾಯವಾಗಿದೆ. ಜಿಲ್ಲೆ ಯಲ್ಲಿ ಉದ್ಯೋಗಮೇಳಗಳನ್ನು ಆಯೋ ಜಿಸಿ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿ ಸುವಂತೆ ವಿದ್ಯಾವಂತ ಯುವಕ, ಯುವತಿ ಯರು ಸಚಿವರಲ್ಲಿ ಮನವಿ ಮಾಡಿದ್ದಾರೆ.

ಇವುಗಳಲ್ಲದೇ ನಗರದಲ್ಲಿ ಇನ್ನೂ ಅನೇಕ ಸಮಸ್ಯೆಗಳು ಇವೆ. ಕ್ಷೇತ್ರದ ಬಹುತೇಕ ಗ್ರಾಮಗಳಲ್ಲಿ ಒಂದಲ್ಲ ಒಂದು ಸಮಸ್ಯೆಗಳು ಇವೆ. ಈ ಸಮಸ್ಯೆಗಳು ಈಗಲಾದರೂ ಬಗೆಹರಿಯಲಿದೆ ಎಂಬ ಆಶಾಭಾವನೆ ಜನರದ್ದಾಗಿದೆ. ಸದಾ ಜನರ ಮಧ್ಯೆ ಇರುತ್ತಿದ್ದ, ಸರಳತನವನ್ನು ಮೈಗೂಡಿಸಿಕೊಂಡಿರುವ ನೂತನ ಸಚಿವ ಸಿ. ಪುಟ್ಟರಂಗಶೆಟ್ಟಿ ಸಮಸ್ಯೆಗಳನ್ನು ಬಗೆಹರಿಸಲು ಏನೇನು ಕಾರ್ಯಕ್ರಮವನ್ನು ಯೋಜನೆಗಳನ್ನು ಜಾರಿಗೊಳಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Translate »