ಮೈಸೂರಲ್ಲಿ ಪರಿಸರ ಜಾಗೃತಿ ಸಮಾವೇಶ
ಮೈಸೂರು

ಮೈಸೂರಲ್ಲಿ ಪರಿಸರ ಜಾಗೃತಿ ಸಮಾವೇಶ

June 18, 2018

ಮೈಸೂರು: ನಾವು ಸೇವಿಸುವ ಗಾಳಿ, ನೀರು, ಆಹಾರ ಗುಣಮಟ್ಟದಿಂದ ಕೂಡಿರ ಬೇಕಾದರೆ, ರಾಸಾಯನಿಕ ಮುಕ್ತ ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರ ಶುದ್ಧ ಹಸಿರು ವಲಯವಾಗಿರಬೇಕು ಎಂದು ಕರ್ನಾಟಕ ರಾಜ್ಯ ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಟಿ.ಮಹದೇವಸ್ವಾಮಿ ಅಭಿಪ್ರಾಯಪಟ್ಟರು.

ಮೈಸೂರು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಪಕ್ಕದಲ್ಲಿರುವ ಜಿಲ್ಲಾ ಕಸಾಪ ಸಭಾಂಗಣದಲ್ಲಿ ಭಾರತೀಯ ಸಾಂಸ್ಕೃತಿಕ ವಿಕಾಸ ವೇದಿಕೆ ಹಾಗೂ ಕರ್ನಾಟಕ ರಾಜ್ಯ ಪರಿಸರ ಜಾಗೃತಿ ವೇದಿಕೆ ಸಂಯುಕ್ತಾಶ್ರಯದಲ್ಲಿ ನಡೆದ `ಪರಿಸರ ಜಾಗೃತಿ ಸಮಾವೇಶ ಮತ್ತು ಸ್ಮರಣೀಯರ ನುಡಿನಮನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಆಧುನಿಕತೆ ಹೆಚ್ಚಿದಂತೆ ಪರಿಸರ ಸಂಪತ್ತು ಕಡಿಮೆಯಾಗುತ್ತಿದೆ. ಇದಕ್ಕೆಲ್ಲಾ ವ್ಯವಸ್ಥೆಯನ್ನು ದೂಷಿಸುವ ಬದಲು ಪರಿಸರ ಸಂಪತ್ತು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾವೆಲ್ಲಾ ಪ್ರಯತ್ನಿಸಬೇಕು ಎಂದ ಅವರು, ಇದಕ್ಕೆ ಸ್ಪಷ್ಟ ಉದಾಹರಣೆ ರಿಂಗ್ ರಸ್ತೆಯಲ್ಲಿ ಅರಣ್ಯ ಇಲಾಖೆ ಸಹಾಯದಿಂದ ಸುಮಾರು 6 ಸಾವಿರ ಗಿಡಗಳನ್ನು ನೆಟ್ಟು ಬೆಳೆಸಲಾಗಿದೆ. ಗಿಡ ಬೆಳೆಸುವ ವಿಷಯದಲ್ಲಿ ಯಾರಿಗೂ ತಾತ್ಸಾರ ಮನೋಭಾವ ಬೇಡ ಎಂದು ಕಿವಿಮಾತು ಹೇಳಿದರು.
ಇತ್ತೀಚೆಗೆ ಅರಣ್ಯ ಸಂಪತ್ತು ಕಡಿಮೆಯಾಗುತ್ತಿದೆ ಎಂದು ಎಲ್ಲರೂ ಮಾತನಾಡುತ್ತಿದ್ದೇವೆ. ಆದರೆ, ಅದನ್ನು ಹೆಚ್ಚಿಸುವ ಮಾರ್ಗೋಪಾಯಗಳ ಬಗ್ಗೆ ಯಾರೋ ಚಿಂತಿಸುತ್ತಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕವಾಗಿ ಪರಿಸರ ಜಾಗೃತಿ ಹೆಚ್ಚಾಗುತ್ತಿರುವುದರಿಂದ ಸಸಿ ನೆಡುವ ಕಾರ್ಯಕ್ಕೆ ಸರ್ಕಾರದ ಜೊತೆಗೆ ಸಾರ್ವಜನಿಕರೂ ಕೈ ಜೋಡಿಸುತ್ತಿರುವುದು ಅಭಿನಂದನಾರ್ಹ ಎಂದರು.

ಚಿನ್ನ, ಬೆಳ್ಳಿ, ಕಬ್ಬಿಣ ಸೇರಿದಂತೆ ಇತರೆ ಲೋಹ ಪದಾರ್ಥಗಳು ಭೂಮಿಯಲ್ಲಿ ಸಿಗುತ್ತವೆ. ಇದನ್ನು ಪರಿಷ್ಕರಿಸಲು ಅರಣ್ಯ ಸಂಪತ್ತು ನಾಶ ಮಾಡಲಾಗುತ್ತದೆ. ಪುನಃ ನಾಶವಾದ ಕಾಡನ್ನು ಬೆಳೆಸುವ ಬಗ್ಗೆ ಚಿಂತಿಸಬೇಕು. ಒಂದು ಗಿಡ ನಾಶವಾದರೆ, ಹತ್ತು ಗಿಡ ನೆಟ್ಟು, ಪೋಷಿಸಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಸಭಿಕರಿಗೆ ಸಿಲ್ವರ್ ಗಿಡಗಳನ್ನು ವಿತರಿಸಲಾಯಿತು. ನಂತರ ಇತ್ತೀಚೆಗೆ ನಿಧನರಾದ ಮಾಜಿ ಶಾಸಕ ಹೆಚ್.ಗಂಗಾಧರನ್ ಅವರಿಗೆ ಹಿರಿಯ ವಕೀಲ ಕೆ.ಆರ್.ಶಿವಶಂಕರ್ ನುಡಿನಮನ ಸಲ್ಲಿಸಿದರು. ಹಾಗೂ ಸಮಾಜ ಸೇವಕ ಬಿ.ಎ.ನಟರಾಜ್ ಅವರಿಗೆ ಹಿರಿಯ ಸಾಹಿತಿ ಡಾ.ಜಯಪ್ಪ ಹೊನ್ನಾಳಿ ನುಡಿನಮನ ಸಲ್ಲಿಸಿದರು.

ವೇದಿಕೆಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ನಗರ ಪಾಲಿಕೆ ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರಥಿ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ವಕೀಲ ಜಿ.ಆರ್.ಜಿ.ಪ್ರಕಾಶ್, ಜಲಜಾಕ್ಷಿ, ಬಿ.ಆರ್.ವಿಜಯಶ್ರೀ ನಟರಾಜ್ ಸೇರಿದಂತೆ ಇತರರಿದ್ದರು. ಎಂ.ಸಹನ ನಿರೂಪಿಸಿದರೆ, ದಾಕ್ಞಾಯಿಣ ಪ್ರಾರ್ಥಿಸಿದರು. ಗೀತಾ ಗಣೇಶ್ ಸ್ವಾಗತಿಸಿದರು. ತಗಡೂರು ಗೌರಿಶಂಕರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

Translate »