ಮಂಡ್ಯ ಆಯ್ತು ಈಗ ಕೊಡಗಿನಲ್ಲಿ ಸಿನಿತಾರೆ, ರಾಜಕಾರಣಿಗಳ ವಾಗ್ದಾಳಿ
ಮೈಸೂರು

ಮಂಡ್ಯ ಆಯ್ತು ಈಗ ಕೊಡಗಿನಲ್ಲಿ ಸಿನಿತಾರೆ, ರಾಜಕಾರಣಿಗಳ ವಾಗ್ದಾಳಿ

June 17, 2019

ಸಂತ್ರಸ್ತರ ಮನೆ ಗುಣಮಟ್ಟದ ಬಗ್ಗೆ ಹರ್ಷಿಕಾ ಪೂಣಚ್ಚ, ಸಾ.ರಾ.ಮಹೇಶ್ ವಾಕ್ಸಮರ
ಮೈಸೂರು: ಮಂಡ್ಯ ಲೋಕಸಭಾ ಚುನಾವಣಾ ಪ್ರಚಾರ ವೇಳೆ `ಅದೆಂತದೋ ಡಿ ಬಾಸ್ ಅಂತೆ ಡಿ ಬಾಸ್ ಯಾರು?’ ಎಂದು ಮುಖ್ಯ ಮಂತ್ರಿ ಕುಮಾರಸ್ವಾಮಿ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಪ್ರಶ್ನಿಸಿದ್ದರು. ಇದೀಗ ಕೊಡಗಿನಲ್ಲಿ ಸಂತ್ರಸ್ತರಿಗೆ ನಿರ್ಮಿಸಿ ರುವ ಮನೆಗಳ ಗುಣಮಟ್ಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ರುವ ನಟಿ ಹರ್ಷಿಕಾ ಪೂಣಚ್ಚ ಯಾರು? ಎಂದು ಪ್ರಶ್ನಿಸುವ ಮೂಲಕ ಮೈತ್ರಿ ಸರ್ಕಾರದ ಸಚಿವ ಸಾ.ರಾ ಮಹೇಶ್ ಟಾಂಗ್ ನೀಡಿದ್ದಾರೆ.

ಕೊಡಗಿನಲ್ಲೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಆಗ್ರಹಿಸಿ ಅಭಿಯಾನ ಆರಂಭಗೊಂಡಿದ್ದು, ಸಂಸದ ಪ್ರತಾಪ್‍ಸಿಂಹ, ವಿ.ರವಿಚಂದ್ರನ್, ಶಿವರಾಜ್‍ಕುಮಾರ್, ದಿಶಾ ಪೂವಯ್ಯ, ಭುವನ್ ಪೊನ್ನಣ್ಣ ಸೇರಿದಂತೆ ಅನೇಕ ಸಿನಿ ತಾರೆಯರೂ ಬೆಂಬಲಿಸಿದ್ದಾರೆ. ಹಾಗೆಯೇ ನಟಿ ಹರ್ಷಿಕಾ ಪೂಣಚ್ಚ ಸಹ ಬೆಂಬಲ ವ್ಯಕ್ತಪಡಿಸಿದ್ದು, ಈ ಸಂದರ್ಭದಲ್ಲಿ ಕೊಡಗಿನ ಸಂತ್ರಸ್ತರಿಗಾಗಿ ಸರ್ಕಾರ ನಿರ್ಮಿಸಿರುವ ಮನೆಗಳ ಗುಣಮಟ್ಟದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

ಇದಕ್ಕೆ ಭಾನುವಾರ ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್, ಹರ್ಷಿಕಾ ಯಾರು?. ಆಕೆಗೆ ಏನಾಗಿದೆ. ಆಕೆ ನಟಿಯಷ್ಟೇ. ಅವರು ಸಿನಿಮಾಗಳಲ್ಲಿ ಮಾತ್ರ ಅಭಿನಯಿಸಿಕೊಂಡಿರಬೇಕು. ಅದನ್ನು ಬಿಟ್ಟು ಏನನ್ನು ಮಾತನಾಡಬಾರದು. ಕೊಡಗು ಸಂತ್ರಸ್ತರ ಮನೆಗಳ ಬಗ್ಗೆ ಹರ್ಷಿಕಾಗೆ ಏನು ಗೊತ್ತು?. ಅವರ ವಿದ್ಯಾಭ್ಯಾಸದ ಹಿನ್ನೆಲೆಯಾದರೂ ಏನು?. ವಾಸ್ತವ ಅರ್ಥ ಮಾಡಿಕೊಳ್ಳದೆ ತಜ್ಞರಂತೆ ಮಾತನಾಡಬಾರದು. ನಾವು ಅವರಿಂದ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ಈಗಾಗಲೇ 100 ಕೋಟಿ ರೂ. ವೆಚ್ಚದಲ್ಲಿ ಕೊಡಗು ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸುವ ಪ್ರಯತ್ನ ನಡೆದಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಿಂತ ಮಿಗಿಲಾದ ಸೌಲಭ್ಯ ದೊರಕುತ್ತದೆ. ಆಸ್ಪತ್ರೆಗಾಗಿ ಅಭಿಯಾನ ಮಾಡುತ್ತೇವೆ ಎಂಬುದು ಪ್ರಚಾರಕ್ಕೆ ಅಷ್ಟೇ ಎಂದು ಕಿಡಿಕಾರಿದ್ದಾರೆ.

ಇದೀಗ ಸಚಿವರ ಹೇಳಿಕೆಗೆ ಹರ್ಷಿಕಾ ಪೂಣಚ್ಚ ಮತ್ತೊಂದು ಬೌನ್ಸರ್ ಎಸೆದಿದ್ದಾರೆ. `ಇದ್ದದ್ದು ಇದ್ದಂಗೆ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ದಂಗೆ’ ಎಂಬ ನಾಣ್ಣುಡಿಯನ್ನು ಉಲ್ಲೇಖಿಸಿ, ನಾನು ಇಂಜಿನಿಯರಿಂಗ್ ಪದವೀಧರೆ. ನಾನು ಯಾರನ್ನು ದೂಷಿಸಿಲ್ಲ. ಭಾರತೀಯಳಾಗಿ ನನಗೆ ಪ್ರಶ್ನಿಸುವ ಹಕ್ಕಿದೆ. ಚಿತ್ರರಂಗದ ವರೆಂದರೆ ಕೇವಲ ಸಿನಿಮಾಗಳಲ್ಲಿ ನಟಿಸುವುದಷ್ಟೇ ಅಲ್ಲ. ಹಾಗಾದರೆ ಬೇರೆ ಏನನ್ನು ಮಾತನಾಡುವುದು ತಪ್ಪೇ?. ಕೆಲವು ಮಾಡೆಲ್ ಮನೆಗಳ ಫೆÇೀಟೋ ನೋಡಿದೆ. ಅದು ನನಗೆ ಇಷ್ಟವಾಗಿಲ್ಲ. ಯಾಕೆಂದರೆ ಆ ಮನೆಗಳಲ್ಲಿ ಗಾಳಿ, ಬೆಳಕು ವ್ಯವಸ್ಥೆ ಸರಿಯಿರಲಿಲ್ಲ. ಶೀಟ್ ಮನೆಯಂತೆ ಕಾಣುತ್ತಿತ್ತು. ಹಾಗಾಗಿ ರಾಜ್ಯ ಸರ್ಕಾರ ಕೊಡಗು ಸಂತ್ರಸ್ತರಿಗೆ ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಮನೆಗಳನ್ನು ಕಟ್ಟಿಕೊಡಲಿ ಎಂದು ಆಗ್ರಹಿಸಿದ್ದೆ. ನಾನು ಯಾರನ್ನೂ ದೂರಿಲ್ಲ. ನಾನು ಕೊಡಗಿನವಳಾಗಿ ಕೇಳಿದ್ದೇನೆ. ಅಲ್ಲದೆ ಸಿನಿಮಾದವರ ಬಗ್ಗೆ ಹಗುರಾಗಿ ಮಾತನಾಡಬೇಡಿ. ಸಿನಿಮಾದವರು ಏನನ್ನು ಮಾಡ ಬಹುದು ಎಂಬುದನ್ನು ನಾನು ಇತ್ತೀಚೆಗೆ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಕಂಡಿದ್ದೇನೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ, ತಮಿಳುನಾಡಿನ ಸಾಕಷ್ಟು ಮಂತ್ರಿಗಳು ಸಿನಿಮಾ ದವರು ಹಾಗಾಗಿ ಸಿನಿಮಾ ಬಗ್ಗೆ ಕೀಳು ಭಾವನೆ ಬೇಡ ಎಂದು ಹೇಳಿದ್ದಾರೆ.

Translate »