ಕೆಆರ್‌ಎಸ್‌ ಡಿಸ್ನಿಲ್ಯಾಂಡ್ ಯೋಜನೆ 2 ವರ್ಷದಲ್ಲಿ ಪೂರ್ಣಗೊಳಿಸುವ ಗುರಿ
ಮೈಸೂರು

ಕೆಆರ್‌ಎಸ್‌ ಡಿಸ್ನಿಲ್ಯಾಂಡ್ ಯೋಜನೆ 2 ವರ್ಷದಲ್ಲಿ ಪೂರ್ಣಗೊಳಿಸುವ ಗುರಿ

November 16, 2018

ಮೈಸೂರು: ವಿಶ್ವ ವಿಖ್ಯಾತ ಕೆಆರ್‌ಎಸ್‌ನ ಉದ್ಯಾನವನವನ್ನು ಅಮೇರಿಕಾದ ಡಿಸ್ನಿಲ್ಯಾಂಡ್‍ನಂತೆ ಅಭಿವೃದ್ಧಿ ಪಡಿಸುವ ಯೋಜನೆಯನ್ನು ಎರಡು ವರ್ಷಗಳಲ್ಲಿ ಪೂರ್ಣ ಗೊಳಿಸುವ ಗುರಿ ಹೊಂದಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದ್ದಾರೆ.

ಈ ಸಂಬಂಧ ಬುಧವಾರ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ತಾವು ಜಂಟಿಯಾಗಿ ಉನ್ನತ ಅಧಿಕಾರಿ ಗಳ ಸಭೆ ನಡೆಸಿದ್ದು, ಅಲ್ಲಿ ಈ ಮಹತ್ವದ ಈ ತೀರ್ಮಾ ನಕ್ಕೆ ಬರಲಾಗಿದೆ ಎಂದರು.

ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕನ್ನಡಿಗರ ಭಾವನಾತ್ಮ ಕತೆಯ ಪ್ರತೀಕವಾಗಿರುವ ಕಾವೇರಿ ಮಾತೆಯ 250 ಅಡಿ ಎತ್ತರದ ಪ್ರತಿಮೆ ನಿರ್ಮಾಣ, ಅದರ ಜೊತೆಗೆ ವಸ್ತುಸಂಗ್ರಹಾಲಯ ನಿರ್ಮಾಣ, ಗೋಪುರಯುಕ್ತ ಗಾಜಿನ ಮನೆ, ಬ್ಯಾಂಡ್ ಸ್ಟ್ಯಾಂಡ್, ಒಳಾಂಗಣ ಕ್ರೀಡಾಂಗಣ ಮತ್ತು ಇತಿ ಹಾಸವನ್ನು ಪರಿಚಯಿಸುವ ಗ್ಯಾಲರಿ ನಿರ್ಮಾಣವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೇ ಈ ಯೋಜನೆಯಲ್ಲಿ ಪ್ರಮುಖವಾಗಿ ಯೂರೋಪ್‍ನ ಕ್ಯಾಸಲ್ ಮಾದರಿಯ ಗಾಜಿನ ಮನೆ, ವಾಸ್ತವಿಕವಾದ ಅನಿಮೇಟೆಡ್ ಪಾರ್ಕ್, ಅಮ್ಯೂಸ್‍ಮೆಂಟ್ ಪಾರ್ಕ್, ಪೆಂಗ್ವಿನ್ ಪಾರ್ಕ್, ಸುಗಂಧದ ಪಾರ್ಕ್ ಮುಂತಾದ ಥೀಮ್ ಪಾರ್ಕ್‍ಗಳು ಮತ್ತು ಐತಿಹಾಸಿಕ ಹಂಪಿ, ಬೇಲೂರು ಮತ್ತು ಹಳೇಬೀಡು ಸೊಬಗನ್ನು ನೆನಪಿಸುವ ನಕಲಿ ಸೃಷ್ಟಿ ಜೊತೆಗೆ ಫುಡ್ ಕೋರ್ಟ್ ಗಳಿಗೂ ಅವಕಾಶ ಕಲ್ಪಿಸಲಾಗಿದೆ.

ರಾಜ್ಯ ಹಾಗೂ ದೇಶದ ಗಣ್ಯ ವ್ಯಕ್ತಿಗಳ ಮೇಣದ ಪ್ರತಿಮೆಗಳನ್ನು ಒಳಗೊಳ್ಳುವ ಮ್ಯೂಸಿಯಂ ಕೂಡ ನಿರ್ಮಾಣವಾಗಲಿದೆ ಎಂದು ತಿಳಿಸಿರುವ ಅವರು, ಈ ಯೋಜನೆಗೆ 1500ರಿಂದ 2000 ಕೋಟಿ ವೆಚ್ಚವಾಗಲಿದ್ದು, ಈ ಯೋಜನೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಜೆಟ್ ವೇಳೆ ಪ್ರಸ್ತಾಪಿಸಿದ್ದು, ಅದಕ್ಕಾಗಿ 5 ಕೋಟಿ ರೂ. ಮೀಸಲಿರಿಸಿದ್ದಾರೆ ಎಂದು ಸಾ.ರಾ.ಮಹೇಶ್ ತಿಳಿಸಿದ್ದಾರೆ.

Translate »