ಎಲ್ಲಾ ಮಠ ಮಾನ್ಯಗಳು ಸಿದ್ಧಗಂಗಾ ಶ್ರೀಗಳ  ಹಾದಿಯಲ್ಲೇ ಸಾಗಿದರೆ ಅದೇ ಶ್ರೀಗಳಿಗೆ ಸಲ್ಲಿಸುವ ಗೌರವ
ಮೈಸೂರು

ಎಲ್ಲಾ ಮಠ ಮಾನ್ಯಗಳು ಸಿದ್ಧಗಂಗಾ ಶ್ರೀಗಳ ಹಾದಿಯಲ್ಲೇ ಸಾಗಿದರೆ ಅದೇ ಶ್ರೀಗಳಿಗೆ ಸಲ್ಲಿಸುವ ಗೌರವ

January 25, 2019

ಮೈಸೂರು: ನಡೆ ದಾಡುವ ಸಂತ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಗೌರವ ಸಲ್ಲಿಸುವುದೇ ಆದಲ್ಲಿ ಎಲ್ಲಾ ಮಠಗಳು ಅವರ ಹಾದಿಯನ್ನೇ ಅನುಸರಿಸ ಬೇಕು ಎಂದು ಮಾಜಿ ವಿಧಾನಸಭಾಧ್ಯಕ್ಷ ಕೃಷ್ಣ ಇಂದಿಲ್ಲಿ ಅಭಿಪ್ರಾಯಪಟ್ಟರು.

ಮೈಸೂರು ಶರಣ ಮಂಡಳಿ ಮೈಸೂರು ಅರಮನೆ ಉತ್ತರ ದ್ವಾರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ `ಡಾ.ಶಿವಕುಮಾರಸ್ವಾಮಿ ಗಳಿಗೆ ನುಡಿ ನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಠದ ಪರಂ ಪರೆಗೆ ಮೇಲ್ಪಂಕ್ತಿ ಹಾಕಿದವರು ಸಿದ್ಧಗಂಗಾ ಶ್ರೀಗಳು. ನಾಡಿನ ಎಲ್ಲಾ ಮಠಮಾನ್ಯಗಳು ಅವರನ್ನು ಅನುಸರಿಸಿಕೊಂಡು ಹೋದರೆ ಬಡ ಮಕ್ಕಳಿಗೆ ಉನ್ನತ ಶಿಕ್ಷಣ ದೊರೆತು ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.

ನಡೆದಾಡುವ ದೇವರಿಗೆ ಪ್ರಶಸ್ತಿ ಕೊಡಲು ಸಾಧ್ಯವೇ ಎಂದ ಅವರು, ಅವರಿಗೆ ಭಾರತ ರತ್ನ ನೀಡುವುದರಿಂದ ನಿಜಕ್ಕೂ ಭಾರತ ರತ್ನ ಪ್ರಶಸ್ತಿಗೆ ಹೆಚ್ಚಿನ ಗೌರವ ಲಭಿಸಲಿದೆ ಎಂದರು. ಕಸಾಪ ಜಿಲ್ಲಾಧ್ಯಕ್ಷ ಡಾ.ವೈ.ಡಿ. ರಾಜಣ್ಣ ಮಾತನಾಡಿ, ಮಿತಾಹಾರ ಮತ್ತು ಸಾತ್ವಿಕ ಆಹಾರ ಸೇವನೆ ಸಿದ್ಧಗಂಗಾ ಶ್ರೀಗಳ ಆರೋಗ್ಯದ ಗುಟ್ಟಾಗಿತ್ತು. ಅವರ ನಂಬಿಕೆಗಳು, ಕಾಯಕ ನಿಷ್ಠೆ ಮೂಲಕವೇ ದೈವತ್ವವನ್ನು ಸಿದ್ಧಿಸಿಕೊಂಡ ದೇಶ ಕಂಡ ಶತಮಾನದ ಶ್ರೇಷ್ಠ ಸಂತ. ವಿದ್ಯಾರ್ಥಿಗಳು ಅಸಹಾಯಕರ ಬದುಕಿನ ಉನ್ನತಿಗಾಗಿ 8 ದಶಕಗಳಿಗೂ ಹೆಚ್ಚು ಕಾಲ ಲೋಕ ಕಲ್ಯಾಣಕ್ಕಾಗಿ ಶ್ರಮಿಸಿ ದವರು. ಅವರ ನಡುವೆ ನಾವೆಲ್ಲರೂ ಇದ್ದೆವೆಂಬುದೇ ನಮ್ಮ ಭಾಗ್ಯ ಎಂದರು.

ನೊಬೆಲ್ ಪ್ರಶಸ್ತಿಗೆ ಗೌರವ: ಈ ಸಂದರ್ಭ ದಲ್ಲಿ ಮಾತನಾಡಿದ ಸಂಸ್ಕøತಿ ಪೋಷಕ ಹೆಳವರಹುಂಡಿ ಸಿದ್ದಪ್ಪ, ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಬರೀ ಭಾರತರತ್ನವಷ್ಟೇ ಅಲ್ಲ, ವಿಶ್ವ ಮಟ್ಟದ ನೊಬೆಲ್ ಪ್ರಶಸ್ತಿಯನ್ನು ನೀಡಬೇಕು. ಇದರಿಂದ ಆ ಪ್ರಶಸ್ತಿಗೇ ಹೆಚ್ಚು ಗೌರವ ದೊರೆಯುತ್ತದೆ ಎಂದು ಅಭಿ ಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಪತ್ರ ಕರ್ತ ಅಂಶಿ ಪ್ರಸನ್ನಕುಮಾರ್, ಕಸಾಪ ಮಾಜಿ ಅಧ್ಯಕ್ಷರಾದ ಮಡ್ಡೀಕೆರೆ ಗೋಪಾಲ್, ಎಂ.ಚಂದ್ರಶೇಖರ್, ಕಸಾಪ ಮೈಸೂರು ಶರಣ ಮಂಡಳಿ ಗೌರವಾಧ್ಯಕ್ಷ ಯು.ಎಸ್. ಶೇಖರ್, ಅಧ್ಯಕ್ಷ ಮೂಗೂರು ನಂಜುಂಡ ಸ್ವಾಮಿ, ಮುಖಂಡರಾದ ಭಾನು ಮೋಹನ್, ಎನ್.ಎಸ್.ಗೋಪಿನಾಥ್, ಡೈರಿ ವೆಂಕಟೇಶ್, ಎಸ್.ಕೆ.ಜೈನ್, ಪಿ.ಸಿ.ನಾಗರಾಜು, ಎಂ.ಕೆ. ನಾಗೇಂದ್ರಸ್ವಾಮಿ ಇನ್ನಿತರರಿದ್ದರು.

Translate »