ಏಕಾಂಗಿಯಾದ ಶಾಸಕ ರಮೇಶ್ ಜಾರಕಿಹೊಳಿ
ಮೈಸೂರು

ಏಕಾಂಗಿಯಾದ ಶಾಸಕ ರಮೇಶ್ ಜಾರಕಿಹೊಳಿ

January 2, 2019

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪತನ ಗೊಳಿಸಲು ಸಂಚು ರೂಪಿಸಿದ್ದ ಕಾಂಗ್ರೆಸ್‍ನ ಬಂಡಾಯ ಮಾಜಿ ಸಚಿವ ಹಾಗೂ ಶಾಸಕ ರಮೇಶ್ ಜಾರಕಿಹೊಳಿ ಅವರ ಲೆಕ್ಕಾಚಾರ ತಿರುಗುಮುರುಗಾಗಿದೆ.

ಸಂಪುಟದಿಂದ ತಮ್ಮನ್ನು ಕೈಬಿಟ್ಟ ನಂತರ ನನಗೆ ಸ್ಥಾನಮಾನ ಇಲ್ಲದಿ ದ್ದರೆ, ಈ ಸರ್ಕಾರವೇ ಉಳಿಯ ಬಾರದೆಂದು ಕೆಲವು ಅತೃಪ್ತ ಸ್ನೇಹಿತರನ್ನು ನಂಬಿ ದೆಹಲಿಯಲ್ಲಿ ಬಿಡಾರ ಬಿಟ್ಟಿರುವ ರಮೇಶ್ ಅವರನ್ನು ಕೇಳುವವರೇ ಇಲ್ಲದಂತಾಗಿದೆ. ಕುಮಾರಸ್ವಾಮಿ ತಮ್ಮ ಮಂತ್ರಿಮಂಡಲ ಪುನರ್ರಚನೆ ನಂತರ ಕನಿಷ್ಠ 15 ಮಂದಿ ಯಾದರೂ ತಮ್ಮ ಜೊತೆ ಬರಲಿದ್ದಾರೆ ಎಂಬ ಧೈರ್ಯದಲ್ಲಿ ಪಕ್ಷಕ್ಕೆ ಸೆಡ್ಡು ಹೊಡೆದಿದ್ದ ಅವರು, ಈಗ ಏಕಾಂಗಿಯಾಗಿದ್ದಾರೆ. ಬಿಜೆಪಿಯವರನ್ನು ನಂಬಿ ದೆಹಲಿ ಯವರೆಗೂ ಹೋಗಿದ್ದ ರಮೇಶ್ ಜಾರಕಿಹೊಳಿ, ಅತ್ತ ಅಮಿತ್ ಶಾ ಭೇಟಿಯೂ ಇಲ್ಲ, ಇತ್ತ ಕಾಂಗ್ರೆಸ್‍ನ ವಿಶ್ವಾಸ ವನ್ನೂ ಕಳೆದುಕೊಂಡಿದ್ದಾರೆ. ಸರ್ಕಾರ ಕೆಡವಲು ಅಗತ್ಯವಿರುವ 15 ಮಂದಿ ಕಾಂಗ್ರೆಸ್ ಇಲ್ಲವೇ ಜೆಡಿಎಸ್ ಶಾಸಕರು ತಮ್ಮ ಜೊತೆ ಬರುತ್ತಾರೆ ಎಂದು ನಂಬಿದ್ದರು.

ಕೆಲವು ಅತೃಪ್ತರು ರಮೇಶ್ ಅವರನ್ನು ತಮ್ಮ ನಾಯಕ ಎಂದು ಬಿಂಬಿಸಿ ಕೊಂಡಿದ್ದರು. ದಿನ ಕಳೆದಂತೆ ಅತೃಪ್ತರು ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರುವ ದುಸ್ಸಾಹಸ ಮಾಡುತ್ತಿಲ್ಲ. ದೆಹಲಿಯಲ್ಲೇ ಬಿಡಾರ ಹೂಡಿ, ಅಜ್ಞಾತ ಸ್ಥಳದಲ್ಲೇ ಕುಳಿತು ಪ್ರತಿನಿತ್ಯ ತಮ್ಮ ಬೆಂಬಲಿತ ಹಾಗೂ ಪರಿಚಯಸ್ಥ ಶಾಸಕರನ್ನು ಸಂಪರ್ಕಿಸಿ, ರಾಜಧಾನಿಗೆ ಬರುವಂತೆ ಆಹ್ವಾನ ನೀಡುತ್ತಿದ್ದಾರೆ. ಜಾರಕಿಹೊಳಿ ಸಂಪರ್ಕ ಮಾಡಿದ ನಂತರ ಶಾಸಕರು ತಕ್ಷಣವೇ ಮುಖ್ಯಮಂತ್ರಿ ಕುಮಾರಸ್ವಾಮಿ ಇಲ್ಲವೆ ಸಿಎಲ್‍ಪಿ ನಾಯಕ ಸಿದ್ದರಾಮಯ್ಯ,
ಉಪ ಮುಖ್ಯ ಮಂತ್ರಿ ಡಾ. ಜಿ.ಪರಮೇಶ್ವರ್ ಅವರನ್ನು ಸಂಪರ್ಕಿಸಿ, ಮಾಹಿತಿ ನೀಡುತ್ತಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದರೆ 25 ರಿಂದ 30 ಕೋಟಿ ರೂ. ದೊರೆಯುತ್ತದೆ. ಜೊತೆಗೆ ಮುಂದೆ ನಡೆಯುವ ಉಪ ಚುನಾವಣೆಯಲ್ಲಿ ಬಿಜೆಪಿಯಿಂದಲೇ ಟಿಕೆಟ್, ಗೆದ್ದು ಬಂದ ನಂತರ ನಿಮಗೆ ಅಧಿಕಾರವೂ ದೊರೆಯು ತ್ತದೆ ಎಂದೆಲ್ಲ ರಮೇಶ್ ಆಮಿಷವೊಡ್ಡುತ್ತಿದ್ದಾರೆ ಎಂದು ದೂರಿದ್ದಾರೆ.

ಇದಾದ ನಂತರವೇ ಸಿದ್ದರಾಮಯ್ಯ ಟ್ವೀಟ್ ಮೂಲಕ ಬಿಜೆಪಿಯ ಕುದುರೆ ವ್ಯಾಪಾರವನ್ನು ಬಹಿರಂಗಪಡಿ ಸಿದರು. ಇಷ್ಟಾದರೂ, ಪಕ್ಷೇತರ ಶಾಸಕ ಹಾಗೂ ಮಾಜಿ ಸಚಿವ ಶಂಕರ್ ಹೊರತುಪಡಿಸಿದರೆ, ಯಾವುದೇ ಸದಸ್ಯರು ಅಮಿಷಕ್ಕೆ ಬಲಿಯೂ ಆಗಿಲ್ಲ. ದೆಹಲಿಗೂ ತೆರಳಿಲ್ಲ. ಒಂದು ವಾರ ಕಳೆದರೂ, ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಮೇಶ್ ಜಾರಕಿ ಹೊಳಿ ಭೇಟಿಗೆ ಇದುವರೆಗೂ ಅವಕಾಶ ನೀಡಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆ ಪಕ್ಷದ ಮತ್ತೊಬ್ಬ ಹಿರಿಯ ನಾಯಕ ಶ್ರೀರಾಮುಲು ಮಾತ್ರ ದೆಹಲಿಯಲ್ಲಿ ರಮೇಶ್ ಜೊತೆ ಎರಡು ಸುತ್ತಿನ ಮಾತುಕತೆ ನಡೆಸಿದ್ದಾರೆ. ಮೊದಲು 15 ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ರಾಜೀನಾಮೆ ಕೊಡಿಸಿ, ದೆಹಲಿಗೆ ಕರೆತನ್ನಿ, ಆನಂತರ ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಗೆ ಸಂಬಂಧಿಸಿದಂತೆ ನಾವು ನಿರ್ಧಾರ ಕೈಗೊಳ್ಳುತ್ತೇವೆ ಎಂದು ರಾಜ್ಯದ ನಾಯಕರಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ. ಈ ಮಧ್ಯೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿ ಸುತ್ತಿರುವ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕೂಡಾ, ನಾವೇನೂ ಸರ್ಕಾರವನ್ನು ಅಸ್ಥಿರಗೊಳಿಸುವುದಿಲ್ಲ. ಆದರೆ ಅದೇ ಅಸ್ಥಿರಗೊಂಡರೆ ನೋಡಿಕೊಂಡು ಸುಮ್ಮನಿ ರುವುದಿಲ್ಲ ಎಂದು ಹೇಳಿ ಸುಮ್ಮನಾಗಿ ಬಿಟ್ಟಿದ್ದಾರೆ. ಸಂಕ್ರಾಂತಿಯೊಳಗೆ ಶತಾಯ ಗತಾಯ ಸರ್ಕಾರ ಬೀಳಿಸುವುದು ಶತಃಸಿದ್ಧ ಅನ್ನುತ್ತಿದ್ದ ಕೆಲ

ಬಿಜೆಪಿ ನಾಯಕರು ಈಗ ದೂರವಾಣಿ ಸಂಪರ್ಕಕ್ಕೇ ಸಿಗದೆ ನಾಪತ್ತೆಯಾಗಿದ್ದು, ಆಪರೇಷನ್ ಕಮಲ ಕಾರ್ಯಾಚರಣೆಯೇ ನೆನೆಗುದಿಗೆ ಬಿದ್ದಿದೆ. ರಮೇಶ್ ದೆಹಲಿಯಲ್ಲಿ ಯಾವುದೇ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಲಾಗಲಿಲ್ಲ. ಇದೀಗ ಅವರು, ಅತ್ತ ಬಿಜೆಪಿಯೂ ಇಲ್ಲ, ಇತ್ತ ಮಾತೃ ಪಕ್ಷದಿಂದಲೂ ದೂರ ಸರಿದು ಏಕಾಂಗಿಯಾಗಿದ್ದಾರೆ. ಬಹುತೇಕ ಇನ್ನು ಸ್ವಲ್ಪ ದಿನದಲ್ಲೇ ತಮ್ಮ ಸದಸ್ಯತ್ವಕ್ಕೆ ಮಾತ್ರ ರಾಜೀನಾಮೆ ನೀಡಿ, ಕಾಂಗ್ರೆಸ್‍ಗೂ ಗುಡ್‍ಬೈ ಹೇಳುವ ಸಾಧ್ಯತೆ ಇದೆ.

Translate »