ಮೈಸೂರು: ಬೇಸಿಗೆ ಸಮೀಪಿಸುತ್ತಿರುವುದರಿಂದ ಸಾರ್ವಜನಿಕರು ಕುಡಿಯುವ ನೀರನ್ನು ಮಿತವಾಗಿ ಬಳಸು ವಂತೆ ಮೇಯರ್ ಪುಷ್ಪಲತಾ ಜಗನ್ನಾಥ್ ಮನವಿ ಮಾಡಿದರು.
ಪಾಲಿಕೆಯ ಹಳೇ ಕೌನ್ಸಿಲ್ ಸಭಾಂಗ ಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಳಾಪುರ, ಬೆಳಗೊಳ, ಹೊಂಗಳ್ಳಿ, ಕಬಿನಿ ಮೂಲ ಸ್ಥಾವರಗಳಿಂದ ಪ್ರತಿ ನಿತ್ಯ 250 ಎಂಎಲ್‍ಡಿ ನೀರು ಸರಬರಾಜು ಮಾಡುತ್ತಿದ್ದು, ಹೊರ ವಲಯ, ಕೈಗಾರಿಕಾ ಪ್ರದೇಶಗಳು, ಕೆಹೆಚ್‍ಬಿ ಕಾಲೋನಿ, ಆರ್‍ಎಂಪಿ ವಸತಿ ಗೃಹ, ಚಾಮುಂಡಿಬೆಟ್ಟ, ರೈಲ್ವೆ ಬಡಾವಣೆಗಳಿಗೆ ನೀರು ಸರಬರಾಜು ಮಾಡಿ ನಗರಕ್ಕೆ ಪ್ರತಿ ನಿತ್ಯ 180 ಎಂಎಲ್‍ಡಿ ನೀರು ಮಾತ್ರ ಲಭ್ಯವಾಗುತ್ತಿದೆ. ಹಾಗಾಗಿ ಕುಡಿಯುವ ನೀರನ್ನು ಬಟ್ಟೆ ತೊಳೆಯಲು, ಗಾರ್ಡನ್, ವಾಹನ ತೊಳೆಯಲು ಮತ್ತಿತರೆ ಉದ್ದೇಶ ಗಳಿಗೆ ಬಳಕೆ ಮಾಡಿಕೊಳ್ಳದೆ, ಬೋರ್ ವೆಲ್ ಅಥವಾ ಮಳೆ ನೀರು ಕೊಯ್ಲು ಮೂಲಕ ಶೇಖರಿಸಿಕೊಂಡ ನೀರನ್ನು ಬಳಸಿಕೊಳ್ಳಬೇಕು. ಏನಾದರೂ ಕುಡಿ ಯುವ ನೀರು ಸಮಸ್ಯೆ ಅಥವಾ ನೀರು ಸೋರಿಕೆ ಸಂಬಂಧ ದೂರುಗಳಿದ್ದಲ್ಲಿ ನಗರಪಾಲಿಕೆಯ 24×7 ಸಹಾಯವಾಣಿ ದೂ.ಸಂ.0821-2418800, 2440890ಗೆ ಕರೆ ಮಾಡಿ ದೂರು ದಾಖಲಿಸಬಹುದಾಗಿದೆ ಎಂದು ಹೇಳಿದರು.
ಸಾರ್ವಜನಿಕರು ಬಾಕಿ ಉಳಿಸಿಕೊಂಡಿರುವ ನೀರಿನ ಕರವನ್ನು ಆಯಾ ತಿಂಗಳು ತಪ್ಪದೆ ಪಾವತಿಸುವ ಮೂಲಕ ಅಭಿವೃದ್ಧಿಗೆ ಶ್ರಮಿಸಬೇಕು. ಒಂದು ವೇಳೆ ಪಾವತಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು. ನಗರ ವ್ಯಾಪ್ತಿಯಲ್ಲಿ ಪ್ರಸ್ತುತ ಸುಮಾರು 30 ಸಾವಿರ ಉದ್ದಿಮೆಗಳಿದ್ದು, ಈವರೆಗೆ 12 ಸಾವಿರ ಉದ್ದಿಮೆಗಳು ಮಾತ್ರ ಪರವಾನಗಿ ಪಡೆದು ಕೊಂಡಿರುವುದು
ಕಂಡು ಬಂದಿದೆ. ನಗರದ ಸರ್ವತೋಮುಖ ಅಭಿವೃದ್ಧಿಗಾಗಿ ಸಂಪನ್ಮೂಲ ಕ್ರೂಢೀಕರಣಕ್ಕೆ ಪಾಲಿಕೆ ಒತ್ತು ನೀಡಬೇಕಿದ್ದು, 1976ರ ಕರ್ನಾಟಕ ಪೌರ ನಿಗಮಗಳ ಕಾಯ್ದೆ 353ರ ಪ್ರಕಾರ ಪ್ರತಿಯೊಬ್ಬ ಉದ್ದಿಮೆದಾರರು ಕಡ್ಡಾಯವಾಗಿ ಪರವಾನಗಿ ಪಡೆದುಕೊಳ್ಳ ಬೇಕು. ಪರವಾನಿಗೆ ಪಡೆದರೂ ಕಂದಾಯ ಕಟ್ಟದಿರುವ ಉದ್ದಿಮೆದಾರರು ತಕ್ಷಣ ಪಾವತಿಸಬೇಕು. ಇಲ್ಲದಿದ್ದರೆ ಅಂತಹ ಉದ್ದಿಮೆಗಳಾದ ಕಲ್ಯಾಣಮಂಟಪ, ವಾಣಿಜ್ಯ ಉದ್ದಿಮೆಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ರಸ್ತೆಗಳಲ್ಲಿ ಶಾಮಿಯಾನ ಹಾಕುವಂತಿಲ್ಲ: ಹೊಸದಾಗಿ ಡಾಂಬರೀಕರಣ ಮಾಡಿದ ರಸ್ತೆಗಳಲ್ಲಿ ಖಾಸಗಿ ವ್ಯಕ್ತಿಗಳು, ಸಾರ್ವಜನಿಕರು ವೈಯಕ್ತಿಕ ಕಾರ್ಯಕ್ರಮಗಳನ್ನು ನಡೆಸುವ ಮೇಳೆ ಶಾಮಿಯಾನ ಹಾಕಲು ರಸ್ತೆಗಳಲ್ಲಿ ಗುಂಡಿ ತೆಗೆದು ಹಾಳು ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಂಥಃ ಪ್ರಕರಣಗಳು ಕಂಡು ಬಂದಲ್ಲಿ ಸಂಬಂಧಪಟ್ಟವರು ಮತ್ತು ಶಾಮಿಯಾನ ಅಂಗಡಿ ವಿರುದ್ಧ ಎಫ್‍ಐಆರ್ ದಾಖಲಿಸಿ, ದಂಡÀ ವಿಧಿಸಲು ಕ್ರಮಕೈಗೊಳ್ಳಲಾಗುವುದು ಎಂದರು.
ಸ್ವಚ್ಛತೆಗೆ ಸಹಕರಿಸಿ: 2015-16ನೇ ಸಾಲಿನಲ್ಲಿ ಮೈಸೂರು ದೇಶದ ಪ್ರಥಮ ಸ್ವಚ್ಛನಗರಿ, 2017-18ರಲ್ಲಿ 5ನೇ ಸ್ವಚ್ಛನಗರಿ ಗರಿಮೆ ಪಡೆದುಕೊಂಡಿತ್ತು. ಮತ್ತೊಮ್ಮೆ ಈ ಗರಿಯನ್ನು ಅಲಂಕರಿಸಲು ನಗರಪಾಲಿಕೆ ಸಿದ್ದತೆ ನಡೆಸಿದ್ದು, ಇದಕ್ಕೆ ಸಾರ್ವ ಜನಿಕರು ಸಹಕರಿಸಬೇಕು. ಹಸಿ ಮತ್ತು ಒಣ ತ್ಯಾಜ್ಯಕ್ಕಾಗಿ ಪ್ರತ್ಯೇಕ ಬುಟ್ಟಿಗಳನ್ನು ಇರಿಸಿ, ತ್ಯಾಜ್ಯವನ್ನು ಮೂಲದಲ್ಲಿಯೇ ಬೇರ್ಪಡಿಸಿ ಮನೆ ಮನೆಗಳಿಗೆ ಬರುವ ಪೌರ ಕಾರ್ಮಿಕರಿಗೆ ನೀಡಬೇಕು ಎಂದ ಅವರು, ಸ್ವಚ್ಛ ಸರ್ವೇಕ್ಷಣಾ ತಂಡ ಈ ಬಾರಿ ಜ.15ಕ್ಕೆ ಬರುವ ಸಾಧ್ಯತೆ ಇದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಉಪ ಮೇಯರ್ ಷಫೀಅಹಮದ್, ಆಡಳಿತ ಪಕ್ಷದ ನಾಯಕಿ ಶಾಂತಕುಮಾರಿ, ಪ್ರತಿಪಕ್ಷದ ನಾಯಕ ಬಿ.ವಿ.ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ರಮಣಿ ಮತ್ತಿತರರು ಉಪಸ್ಥಿತರಿದ್ದರು.