ಗವಿ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನ ಅರಣ್ಯಕ್ಕೆ ಆಕಸ್ಮಿಕ ಬೆಂಕಿ
ಮಂಡ್ಯ

ಗವಿ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನ ಅರಣ್ಯಕ್ಕೆ ಆಕಸ್ಮಿಕ ಬೆಂಕಿ

March 7, 2020

ಮಂಡ್ಯ,ಮಾ.6(ನಾಗಯ್ಯ): ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ ಹೋಬಳಿಯ ನಾರಗೊಂಡನಹಳ್ಳಿ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಲ್ಲಿರುವ ಗವಿರಂಗನಾಥ ಸ್ವಾಮಿ ಬೆಟ್ಟಕ್ಕೆ ಗುರುವಾರ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ 5 ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಬೆಲೆ ಬಾಳುವ ವಿವಿಧ ಜಾತಿಯ ಗಿಡ ಮರಗಳು ಸುಟ್ಟು ಭಸ್ಮವಾಗಿವೆ.

ಗುರುವಾರ ಬೆಳಿಗ್ಗೆ ಆಕಸ್ಮಿಕ ಕಾಣಿಸಿಕೊಂಡ ಬೆಂಕಿಯಿಂದಾಗಿ ಇಡೀ ಅರಣ್ಯ ಪ್ರದೇಶದಲ್ಲಿ ದಟ್ಟವಾದ ಹೊಗೆ ಕಾಣಿಸಿಕೊಂಡು, ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಹೆಚ್ಚಾಗಿ ಒಣಗಿ ನಿಂತಿದ್ದ ಗಿಡಮರಗಳನ್ನು ಆವರಿಸಿಕೊಂಡಿದೆ.

ಇದರಿಂದ ಗಾಬರಿಗೊಂಡ ಸ್ಥಳೀಯ ಅಗ್ನಿಶಾಮಕದಳಕ್ಕೆ ಕರೆ ಮಾಡಿಮಾಹಿತಿ ನೀಡಿದರು.ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಗಿಡಮರಗಳ ಆಶ್ರಯ ಪಡೆದಿದ್ದ ನೂರಾರು ನವಿಲುಗಳು ಹಾರಿ ಹೋದವು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು.ಅರಣ್ಯ ಪ್ರದೇಶಕ್ಕೆ ಆಕಸ್ಮಿಕ ಬೆಂಕಿ ಬಿದ್ದು ಹಲವು ಗಿಡ ಮರಗಳು ಸುಟ್ಟು ಭಸ್ಮವಾಗಿದ್ದರೂ ಸಹ ಈ ವ್ಯಾಪ್ತಿಯಲ್ಲಿ ಕರ್ತವ್ಯದಲ್ಲಿದ್ದ ವಲಯ ಅರಣ್ಯ ಇಲಾಖೆಗೆ ಸೇರಿದ ಯಾವೊಬ್ಬ ಸಿಬ್ಬಂದಿಯೂ ಸ್ಥಳಕ್ಕೆ ಧಾವಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಸ್ವಲ್ಪ ಎಚ್ಚರ ತಪ್ಪಿದರೂ ಅರಣ್ಯ ಪ್ರದೇಶದ ಹಾಸುಪಾಸಿನಲ್ಲಿರುವ ರೈತರ ಹುಲ್ಲಿನ ಬಣವೆಗಳೂ ಸಹ ಸುಟ್ಟು ಭಸ್ಮವಾಗುತ್ತಿದ್ದವು ಎಂದು ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿದರು.

Translate »