ಮಂಗಳೂರು/ ಬೆಂಗಳೂರು, ಫೆ.6- ಆಂಬುಲೆನ್ಸ್ ಚಾಲಕ ರೊಬ್ಬರು ಕೇವಲ 4 ಗಂಟೆ 32 ನಿಮಿಷದಲ್ಲಿ 370 ಕಿ.ಮೀ ಕ್ರಮಿಸಿ ಹಸುಗೂಸು ಜೀವ ಉಳಿಸಿ ಮಾನವೀಯತೆ ಮೆರೆದಿದ್ದಾರೆ.
ನಲ್ವತ್ತು ದಿನಗಳ ಹಸುಗೂಸನ್ನು ಹೃದಯ ಶಸ್ತ್ರಚಿಕಿತ್ಸೆಗಾಗಿ ಮಂಗಳೂರಿನಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್ ನಲ್ಲಿ ಆಂಬುಲೆನ್ಸ್‍ನಲ್ಲಿ ರವಾನಿಸಲಾಗಿದೆ. ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿದ್ದ ಮಗುವಿಗೆ ತುರ್ತಾಗಿ ಶಸ್ತ್ರಚಿಕಿತ್ಸೆ ಆಗಬೇಕಿತ್ತು. ಅದಕ್ಕಾಗಿ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಮಗುವನ್ನು ರವಾನಿಸಲಾಗಿದೆ. ಚಾಲಕ ಹನೀಫ್ ಮಂಗಳೂರಿನಿಂದ ಆಂಬುಲೆನ್ಸ್ ಮೂಲಕ ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಮಗುವನ್ನು ಕೇವಲ ನಾಲ್ಕೂವರೆ ಗಂಟೆಯಲ್ಲಿ ಬೆಂಗಳೂರು ತಲುಪಿಸಿದ್ದಾರೆ.
ಮಾರ್ಗ ಹೀಗಿತ್ತು: ಬೆಳ್ತಂಗಡಿ ತಾಲೂಕಿನ ಉಜಿರೆ ಮೂಲದ ಸೈಫುಲ್ ಅಜ್ಮಾನ್ ಎನ್ನುವ ಈ ಮಗುವಿಗೆ ಅಂಬುಲೆನ್ಸ್‍ನಲ್ಲಿ ಹೃದಯ ಪಂಪಿಂಗ್ ವ್ಯವಸ್ಥೆ ಮಾಡಿಕೊಂಡು ಕರೆದೊಯ್ಯ ಲಾಯಿತು. ಮಂಗಳೂರಿನಿಂದ, ಬಿ.ಸಿ.ರೋಡ್, ಕಲ್ಲಡ್ಕ, ಮಾಣಿ, ಉಪ್ಪಿನಂಗಡಿ, ನೆಲ್ಯಾಡಿ, ಶಿರಾಡಿ, ಸಕಲೇಶಪುರ, ಹಾಸನ, ನೆಲಮಂಗಲ ಮೂಲಕ ಮಂಗಳೂರು- ಬೆಂಗಳೂರು ಹೆದ್ದಾರಿ ಯಲ್ಲಿ ಆಂಬುಲೆನ್ಸ್ ಬಂದಿದ್ದು ಹೆದ್ದಾರಿ ಉದ್ದಕ್ಕೂ ಜನರು ಟ್ರಾಫಿಕ್ ಸಂಚಾರ ಸುಗಮಗೊಳಿಸಿದ್ದಾರೆ. ಅಲ್ಲದೆ, ಆಯಾ ಭಾಗದ ಠಾಣೆಗಳ ವ್ಯಾಪ್ತಿಯಲ್ಲಿ ಪೆÇಲೀಸರು ಎಸ್ಕಾರ್ಟ್ ನೀಡಿದ್ದಾರೆ.
ಇದೇ ವೇಳೆ ಸಾರ್ವಜನಿಕರು ಚಾಲಕ ಹನೀಫ್ ಅವರಿಗೆ ಮೈಸೂರು ಪೇಟಾ ಹಾಕಿ ಸನ್ಮಾನಿಸಿದರು. ಹನೀಫ್ ಅವರ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಜಯದೇವ ಹೃದ ಯಾಲಯದ ನಿರ್ದೇಶಕ ಡಾ. ಮಂಜುನಾಥ ಮಾತನಾಡಿ, ಮಂಗಳೂರಿನಿಂದ ಬಂದಿರುವ 40 ದಿನದ ನವಜಾತ ಶಿಶುವಿಗೆ ಹುಟ್ಟಿನಿಂದಲೇ ಹೃದಯ ಸಂಬಂಧಿ ಕಾಯಿಲೆ ಇತ್ತು. ಇದನ್ನು ನಾವು ವೈದ್ಯಕೀಯ ಭಾಷೆಯಲ್ಲಿ ಟಿಎಪಿವಿಸಿ ಎಂದು ಕರೆಯ ಲಾಗುತ್ತದೆ. ಹೃದಯದ ಎಡಭಾಗ ಶುದ್ಧ ರಕ್ತ ಹಾಗೂ ಬಲಭಾಗ ಅಶುದ್ಧ ರಕ್ತವನ್ನು ಕ್ಯಾರಿ ಮಾಡುತ್ತದೆ. 4 ಪಲ್ಮನರಿ ವೇಯ್ನ್ (ಶ್ವಾಸಕೋಶದ ಅಭಿದಮನಿ) ಹೃದಯದ ಎಡಭಾಗಕ್ಕೆ ಕನೆಕ್ಟ್ ಆಗಬೇಕು. ಆದರೆ ಸೈಫುಲ್ ಅಝ್ಮಾನ್‍ನ ಹೃದಯದ ಬಲ ಭಾಗಕ್ಕೆ ಪಲ್ಮನರಿ ವೇಯ್ನ್‍ಗಳು ಕನೆಕ್ಟ್ ಆಗಿವೆ. ಇದರಿಂದಾಗಿ ಮಗುವಿಗೆ ಸರಿಯಾಗಿ ಆಮ್ಲಜನಕ ಸಿಗುತ್ತಿಲ್ಲ. ಅಷ್ಟೇ ಅಲ್ಲದೆ ಮಗುವಿಗೆ ನಿಮೋನಿಯಾ ಕೂಡ ಇರುವುದರಿಂದ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ ಎಂದು ಮಾಹಿತಿ ನೀಡಿದ್ದಾರೆ. ಪ್ರತಿ ಸಾವಿರ ಮಕ್ಕಳ ಪೈಕಿ 5ರಿಂದ 6 ಮಕ್ಕಳಲ್ಲಿ ಇಂತಹ ಕಾಯಿಲೆ ಕಂಡು ಬರುತ್ತದೆ. ಸಾಮಾನ್ಯವಾಗಿ ಇಂತಹ ಮಕ್ಕಳು 1 ವರ್ಷ ಮಾತ್ರ ಬದಕುಳಿಯುವ ಸಾಧ್ಯತೆ ಇದೆ. ಸೈಫುಲ್ ಅಝ್ಮಾನ್‍ಗೆ ಇರುವ ನಿಮೋನಿಯಾಗೆ ಚಿಕಿತ್ಸೆ ಕೊಡಲಾಗುತ್ತದೆ. ಬಳಿಕ ಓಪನ್ ಹಾರ್ಟ್ ಸರ್ಜರಿ ಮಾಡಲಾಗುತ್ತದೆ. ನಮ್ಮ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಇಂತಹ ಕಾಯಿಲೆ ಇರುವ 5ರಿಂದ 6 ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮಾಡ ಲಾಗುತ್ತದೆ. ಒಂದು ವರ್ಷಕ್ಕಿಂತ ಚಿಕ್ಕ ಮಗಳಿಗೆ ಓಪನ್ ಹಾರ್ಟ್ ಸರ್ಜರಿ ಮಾಡುವುದು ಕ್ಲಿಷ್ಟಕರ ಎಂದು ತಿಳಿಸಿದರು.