ರಾಸಲೀಲೆಗೆ ಪೀಡಿಸಿದ ವ್ಯಕ್ತಿಯ ಬರ್ಬರ ಹತ್ಯೆ
ಮೈಸೂರು

ರಾಸಲೀಲೆಗೆ ಪೀಡಿಸಿದ ವ್ಯಕ್ತಿಯ ಬರ್ಬರ ಹತ್ಯೆ

February 16, 2019
  • ತಂದೆ, ಮಗಳು ಸೇರಿ ಮೂವರ ಬಂಧನ
  • ಶನಿದೇವರೇ ಹತ್ಯೆಗೆ ಸೂಚನೆ ನೀಡಿದ್ದನಂತೆ…!

ಸರಗೂರು: ನಾಲ್ಕು ದಿನಗಳ ಹಿಂದೆ ಇಲ್ಲಿಗೆ ಸಮೀಪದ ಚಂಗೌಡನಹಳ್ಳಿಯಲ್ಲಿ ವ್ಯಕ್ತಿಯೊಬ್ಬ ಕೊಲೆಯಾಗಿದ್ದು, ಕೇವಲ ನಾಲ್ಕು ದಿನಗಳಲ್ಲೇ ಪ್ರಕರಣವನ್ನು ಪತ್ತೆ ಹಚ್ಚಿ ತಂದೆ, ಮಗಳು ಸೇರಿದಂತೆ ಮೂವರನ್ನು ಬಂಧಿಸುವಲ್ಲಿ ಹೆಚ್.ಡಿ.ಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಹಿಳೆಯೋರ್ವಳನ್ನು ರಾಸಲೀಲೆಗಾಗಿ ಪೀಡಿಸಿದ ಕಾರಣ ಆಕೆ ತನ್ನ ತಂದೆ ಮತ್ತು ಶನೇಶ್ವರ ದೇವಸ್ಥಾನದ ಪೂಜಾರಿ ಜೊತೆ ಸೇರಿ ಕಾಮುಕ ವ್ಯಕ್ತಿಯನ್ನು ಹತ್ಯೆ ಮಾಡಿದ್ದಾಳೆ ಎಂಬುದು ಬಯಲಾಗಿದೆ. ಚಾಮರಾಜ ನಗರ ತಾಲೂಕು ಸಾಗಡೆ ಗ್ರಾಮದ ಪತ್ರ ಬರಹಗಾರ ಮಹದೇವಸ್ವಾಮಿ ಎಂಬಾತನೇ ಹತ್ಯೆಗೀಡಾದವನಾಗಿದ್ದು, ಅದೇ ಗ್ರಾಮದ ವಿವಾಹಿತ ಮಹಿಳೆ ಮಂಜುಳಾ ಅಲಿಯಾಸ್ ಪ್ರೀತಿ(21), ಆಕೆಯ ತಂದೆ ಮೈಸೂರು ತಾಲೂಕು ಕೀಳನಪುರ ಗ್ರಾಮದ ಗುರುಸ್ವಾಮಪ್ಪ ಅಲಿಯಾಸ್ ಮಾಮಣ್ಣ(55) ಮತ್ತು ಹೆಚ್.ಡಿ. ಕೋಟೆ ತಾಲೂಕು ಚಂಗೌಡನಹಳ್ಳಿಯ ಶನೇಶ್ವರ ದೇವಸ್ಥಾನದ ಪೂಜಾರಿ ಚಿಕ್ಕವೆಂಕಟಯ್ಯ ಅಲಿಯಾಸ್ ಗುಡ್ಡಪ್ಪ(68) ಬಂಧನಕ್ಕೊಳಗಾಗಿರುವ ಆರೋಪಿಗಳಾಗಿದ್ದಾರೆ.

ವಿವರ: ಚಂಗೌಡನಹಳ್ಳಿ ಗ್ರಾಮದ ಬಂದಿಕೆರೆ ಮಾಳದಲ್ಲಿ ಫೆ. 11 ರಂದು ಅಪರಿಚಿತ ವ್ಯಕ್ತಿಯೋರ್ವ ಕೊಲೆ ಯಾಗಿದ್ದು, ಶವ ಪತ್ತೆಯಾಗಿತ್ತು. ಮೃತದೇಹದ ಶರ್ಟ್ ಜೇಬಿನಲ್ಲಿ ಮೂರು ಬಸ್ ಟಿಕೆಟ್‍ಗಳು ಇರುವುದನ್ನು ಬಿಟ್ಟರೆ ಬೇರೆ ಯಾವುದೇ ಸುಳಿವು ಇರಲಿಲ್ಲ.
ಈ ಸಂಬಂಧ ಸರಗೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಎಸ್ಪಿ ಅಮಿತ್ ಸಿಂಗ್ ಆದೇಶದ ಮೇರೆಗೆ ಎಎಸ್ಪಿ ಶ್ರೀಮತಿ ಸ್ನೇಹಾ ಮಾರ್ಗ ದರ್ಶನದಲ್ಲಿ ಹುಣಸೂರು ಡಿವೈಎಸ್ಪಿ ಭಾಸ್ಕರ್ ರೈ, ಹೆಚ್.ಡಿ.ಕೋಟೆ ಸರ್ಕಲ್ ಇನ್ಸ್‍ಪೆಕ್ಟರ್ ಟಿ.ಎಂ. ಹರೀಶ್ ಕುಮಾರ್, ಸಬ್ ಇನ್ಸ್‍ಪೆಕ್ಟರ್ ಅಶೋಕ್, ಸರಗೂರು ಠಾಣೆ ಸಬ್ ಇನ್ಸ್‍ಪೆಕ್ಟರ್ ಮೋಹನ್, ಸಿಬ್ಬಂದಿಗಳಾದ ಗುರು, ಬಿ.ಎಂ. ಶಿವಕುಮಾರ್, ನಾಗನಾಯಕ, ಅಬ್ದುಲ್ ಲತೀಫ್, ಶ್ರೀನಿವಾಸ್, ಕೆಂಡಗಣ್ಣಸ್ವಾಮಿ, ವಿಶ್ವನಾಥ್, ಮಲ್ಲಿಯಪ್ಪ ಮತ್ತು ಆನಂದ್ ಅವರನ್ನೊಳಗೊಂಡ ತಂಡವನ್ನು ತನಿಖೆಗಾಗಿ ರಚಿಸಲಾಗಿತ್ತು.

ಮೃತದೇಹದ ಶರ್ಟ್‍ನಲ್ಲಿ ದೊರೆತ ಬಸ್ ಟಿಕೆಟ್‍ಗಳು ಮತ್ತು ಆತನ ಕೈಯಲ್ಲಿ ‘ಮಂಜುಳಾ’ ಎಂದು ಹಚ್ಚೆ ಹಾಕಿರುವುದನ್ನು ಆಧಾರವಾಗಿಟ್ಟುಕೊಂಡು ತನಿಖೆ ಆರಂಭಿಸಲಾಯಿತು. ಮೃತ ವ್ಯಕ್ತಿಯು ಸಾಗಡೆ ಗ್ರಾಮದ ನಿವಾಸಿಯಾಗಿದ್ದು, ಚಾಮರಾಜನಗರ ತಾಲೂಕು ಕಚೇರಿ ಮುಂದೆ ಪತ್ರ ಬರಹಗಾರನಾಗಿದ್ದ ಮಹದೇವಸ್ವಾಮಿ ಎಂಬುದು ಪತ್ತೆಯಾಗಿತ್ತು. ಮೃತನ ಅಕ್ಕನ ಹೆಸರು ಮಂಜುಳಾ ಎಂದು ತಿಳಿದು ಬಂದಿತ್ತು. ಅದೇ ವೇಳೆ ಅದೇ ಗ್ರಾಮದ ಮಂಜುಳಾ ಎಂಬಾಕೆಯೊಂದಿಗೆ ಯಾವುದೋ ವೈಷಮ್ಯವಿತ್ತು ಎಂಬ ಮಾಹಿತಿ ಮೇರೆಗೆ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕೊಲೆಯ ರಹಸ್ಯ ಬಯಲಾಯಿತು.

ಕೊಲೆಯಾದದ್ದು ಏಕೆ?: ಪತ್ರ ಬರಹಗಾರನಾಗಿದ್ದ ಮಹದೇವಸ್ವಾಮಿ, ಅದೇ ಗ್ರಾಮದ ಮಂಜುಳಾ ಅವರ ಮೊಬೈಲ್ ನಂಬರ್ ಪಡೆದಿದ್ದು, ತನ್ನ ಜೊತೆ ರಾಸಲೀಲೆ ಯಲ್ಲಿ ತೊಡಗಬೇಕು ಎಂದು ಪದೇ ಪದೆ ಪೀಡಿಸುತ್ತಿದ್ದ ಎಂದು ಹೇಳಲಾಗಿದೆ. ಫೆ. 1ರಂದು ಪತಿ ಎದುರೇ ಆಕೆ ಯನ್ನು ಎಳೆದಾಡಿದ ಮಹದೇವಸ್ವಾಮಿ, ಫೆ. 10ರೊಳಗಾಗಿ ತನ್ನ ಜೊತೆ ರಾಸಲೀಲೆ ನಡೆಸದಿದ್ದರೆ, ಕೊಲೆ ಮಾಡು ವುದಾಗಿ ಬೆದರಿಕೆ ಹಾಕಿದ್ದ ಎಂದು ಹೇಳಲಾಗಿದೆ.

ಈ ವಿಷಯವನ್ನು ಮಂಜುಳಾ ತನ್ನ ತಂದೆ ಗುರು ಸ್ವಾಮಪ್ಪ ಅವರಿಗೆ ತಿಳಿಸಿದಳಂತೆ. ಆಗ ಅವರು, ತಾವು ನಂಬಿದ್ದ ಶನೇಶ್ವರಸ್ವಾಮಿ ದೇವಸ್ಥಾನದ ಪೂಜಾರಿ ಚಿಕ್ಕವೆಂಕಟಯ್ಯ ಅವರನ್ನು ಸಂಪರ್ಕಿಸಿ ಪರಿಹಾರ ಕೇಳಿದ್ದಾರೆ. ಈ ವೇಳೆ ಮಂಜುಳಾಳನ್ನು ಪೀಡಿಸುತ್ತಿದ್ದ ವ್ಯಕ್ತಿಯನ್ನು ಮುಗಿಸಿಬಿಡುವಂತೆ ದೇವರು ಸೂಚನೆ ನೀಡಿದ್ದಾನೆ ಎಂದು ಪೂಜಾರಿ ತಿಳಿಸಿದ್ದಾರೆ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ.

ಅದರನುಸಾರ ಪೂರ್ವನಿಯೋಜಿತ ಸಂಚು ರೂಪಿಸಿ ಕೊಂಡ ಮಂಜುಳಾ, ಪತ್ರ ಬರಹಗಾರ ಮಹದೇವಸ್ವಾಮಿ ಯನ್ನು ಚಂಗೌಡನಹಳ್ಳಿಗೆ ಬರಲು ತಿಳಿಸಿದ್ದಾಳೆ. ಅಲ್ಲಿಗೆ ಬಂದ ಆತನ ಜೊತೆ ಬಂದಿಕೆರೆ ಮಾಳದ ಪೊದೆ ಯೊಂದರ ಬಳಿ ಕುಳಿತು ಪ್ರೀತಿಯಿಂದ ಮಾತನಾಡುವ ನಾಟಕವಾಡುತ್ತಾ, ತನ್ನ ವೇಲ್‍ನಿಂದ ಆತನ ಕೈಗಳನ್ನು ಕಟ್ಟಿದ್ದಾಳೆ. ಅದೇ ವೇಳೆ ಪೂಜಾರಿ ಮನೆಯಿಂದ ಮಚ್ಚು ತೆಗೆದುಕೊಂಡು ಬಂದಿದ್ದ ಆಕೆಯ ತಂದೆ ಗುರು ಸ್ವಾಮಪ್ಪ ಹಿಂದಿನಿಂದ ಮಹದೇವಸ್ವಾಮಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಹತ್ಯೆಗೈದು ನಂತರ ಪೂಜಾರಿಯ ಮನೆಯಲ್ಲೇ ಮಲಗಿ ಬೆಳಿಗ್ಗೆ ವಾಪಸ್ ತೆರಳಿದ್ದಾರೆ ಎಂಬುದು ಪೊಲೀಸರು ವಿಚಾರಣೆ ವೇಳೆ ತಿಳಿದು ಬಂದಿದೆ. ಬಂಧಿಸಲ್ಪಟ್ಟ ಮೂವರನ್ನು ನ್ಯಾಯಾ ಲಯಕ್ಕೆ ಹಾಜರುಪಡಿಸಲಾಗಿ, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

Translate »